ರಮೇಶ್ ಜಾರಕಿಹೊಳಿ ಜಾಗಕ್ಕೆ ಕೈ ಅಭ್ಯರ್ಥಿ ಫೈನಲ್

By Web DeskFirst Published Jul 14, 2019, 9:43 AM IST
Highlights

ರಮೇಶ್ ಜಾರಕಿಹೊಳಿ ಈಗಾಗಲೇ ರಾಜೀನಾಮೆ ನೀಡಿ ಮುಂಬೈ ಸೇರಿದ್ದು, ಇವರ ಸ್ಥಾನಕ್ಕೆ ಇನ್ನೋರ್ವ ನಾಯಕನನ್ನು ಕೈ ಬಹುತೇಕ ಫೈನಲ್ ಮಾಡಿದೆ. 

ಬೆಳಗಾವಿ [ಜು.14]: ರಮೇಶ್‌ ಜಾರಕಿಹೊಳಿ ರಾಜೀನಾಮೆಯಿಂದ ಗೋಕಾಕ್‌ ವಿಧಾನಸಭಾ ಕ್ಷೇತ್ರ ತೆರವಾದರೆ, ಕಾಂಗ್ರೆಸ್‌ನಿಂದ ಲಖನ್‌ ಜಾರಕಿಹೊಳಿ ಕಣಕ್ಕೆ ಇಳಿಯಲಿದ್ದಾರೆ ಎಂದು ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್‌ನಿಂದ ನಾನು ಸ್ಪರ್ಧೆ ಮಾಡುವುದಿಲ್ಲ. ಈಗಾಗಲೇ ಲಖನ್‌ ಜಾರಕಿಹೊಳಿ ಅಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದು, ಅವರನ್ನೇ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಸಲಾಗುವುದು ಎಂದು ತಿಳಿಸಿದರು.

ಅಣ್ಣ- ತಮ್ಮಂದಿರು ಎನ್ನುವುದಕ್ಕಿಂತ ನಮಗೆ ಪಕ್ಷವೇ ಮುಖ್ಯ. ಉಪಚುನಾವಣೆಯಲ್ಲಿ ಸಹೋದರರ ನಡುವೆ ಸ್ಪರ್ಧೆ ನಡೆಯುವುದು ಖಚಿತ. ಗೋಕಾಕ್‌ದಲ್ಲಿ ನಮ್ಮ ಪಕ್ಷದಿಂದ ನಾವು ಹೋರಾಟ ಮಾಡುತ್ತೇವೆ. ಪಕ್ಷವನ್ನು ಸಂಘಟಿಸುತ್ತೇವೆ. ರಮೇಶ್‌ ಪತ್ನಿ ಇಲ್ಲವೇ ಅಳಿಯ ಅಂಬಿರಾಯ ನಿಂತರೂ ಲಖನ್‌ ಸ್ಪರ್ಧಿಸುವುದು ಖಚಿತ. ರಮೇಶ್‌ ಅವರು ತಮ್ಮ ಮೂವರು ಜನ ಅಳಿಯಂದಿರಿಗಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಿಜವಾಗಿದೆ ಎಂದು ಹೇಳಿದರು.

ಇದೇ ವೇಳೆ ರಮೇಶ್‌ ಕಳೆದುಕೊಂಡಿರುವ ವಸ್ತು ಇನ್ನೂ ಸಿಕ್ಕಿಲ್ಲ. ವಸ್ತು ಸಿಕ್ಕಿಲ್ಲ ಅಂತಾನೆ ಇನ್ನೂ ಗದ್ದಲ ಹಿಡಿದಿದೆ. ಆ ವಸ್ತು ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಕಾಯ್ದುನೋಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಬಂಡಾಯವೆದ್ದಿದ್ದ 16 ಜನ ಬಿಜೆಪಿ ಶಾಸಕರನ್ನು ಅನರ್ಹಗೊಳಿಸಿ ಸರ್ಕಾರ ಉಳಿಸಿಕೊಳ್ಳಲಾಗಿತ್ತು. ಹೀಗಾಗಿ ಸಿಎಂ ರಾಜೀನಾಮೆ ಕೇಳುವ ನೈತಿಕತೆ ಯಡಿಯೂರಪ್ಪ ಅವರಿಗೆ ಇಲ್ಲ ಎಂದರು.

click me!