
ಮುದ್ದೇಬಿಹಾಳ : ಕೆಲವು ಪುಣ್ಯಾತ್ಮರು ದೇವರ ಹಿಪ್ಪರಗಿಗೆ ಬರುವಂತೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ. ಅದಕ್ಕೆ ನಾನು ಅಭಾರಿ. ಕುಮಾರಸ್ವಾಮಿ ಎರಡೂ ಕಡೆ ಸ್ಪರ್ಧಿಸಬಾರದು ಎಂದೇನೂ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದರು. ಈ ಮೂಲಕ ರಾಮನಗರ ಹಾಗೂ ದೇವರ ಹಿಪ್ಪರಗಿಯಿಂದ ಎಚ್‌ಡಿಕೆ ಸ್ಪರ್ಧಿಸಬಹುದೆಂಬ ಸುಳಿವು ನೀಡಿದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು.
ಬಿಎಸ್‌ಪಿ ಜತೆಗಿನ ಮೈತ್ರಿ ಬಗ್ಗೆ ಅವರು ಪ್ರತಿಕ್ರಿಯಿಸಿ, ಪ್ರಾದೇಶಿಕ ಪಕ್ಷವನ್ನೇ ಅಧಿಕಾರಕ್ಕೆ ತರಬೇಕು ಎಂಬ ಉದ್ದೇಶದಿಂದ ಹಾಗೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯನ್ನು ಹೊರಹಾಕುವ ಸಂಕಲ್ಪ ಮಾಡಿಕೊಂಡು ಮೈತ್ರಿಗೆ ಒಪ್ಪಿದ್ದೇವೆ ಎಂದರು.
ಬಿಎಸ್ಪಿಗೆ 20 ಸೀಟುಗಳು ಅಂತಿಮಗೊಂಡಿವೆ. ಉಳಿದ 204 ಸೀಟುಗಳಲ್ಲಿ ಕೆಲವನ್ನು ಎಡಪಂಥೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಸಮಾಲೋಚಿಸಲಾಗುತ್ತಿದೆ. ಬಿಎಸ್ಪಿ ಕೇವಲ ದಲಿತರ ಪಕ್ಷ ಅಲ್ಲ. ದಲಿತ ವೋಟುಗಳ ಬೆಂಬಲ ಇಲ್ಲದಿದ್ದರೂ, ನಾನು ಸರ್ಕಾರ ಮಾಡಿ ತೋರಿಸಿದ್ದೇನೆ ಎಂದರು.
17ಕ್ಕೆ ಅಭ್ಯರ್ಥಿಗಳ ಪಟ್ಟಿ: ಜೆಡಿಎಸ್‌ಗೆ ನಾನು, ಕುಮಾರಸ್ವಾಮಿಯೇ ಸ್ಟಾರ್ ಕ್ಯಾಂಪೇನರ್. ಪಕ್ಷಕ್ಕೆ ಆರ್ಥಿಕ ಬಲ ಇಲ್ಲ. ನಮ್ಮ 8 ಜನರ ನಾಯಕರೇ 3 ತಂಡವಾಗಿ ರಾಜ್ಯವ್ಯಾಪಿ ಒಂದು ತಿಂಗಳು ಪ್ರಚಾರ ನಡೆಸಲು ಸಿದ್ಧತೆ ನಡೆದಿದೆ. ಫೆ.17ರಂದು ಬೆಂಗಳೂರಿನಲ್ಲಿ ಸಮಾವೇಶ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡಲಾಗುವುದು ಎಂದರು.
ಈ ವೇಳೆ ಬಿಎಸ್ಪಿಯ 20 ಸ್ಥಾನ ಹಂಚಿಕೆ ಅಂತಿಮಗೊಳಿಸಲಾಗುತ್ತದೆ. ಸಮಾವೇಶಕ್ಕೆ ಮಾಯವತಿ ಆಗಮಿಸಲಿದ್ದು, 4 ಲಕ್ಷ ಜನ ಸೇರಲಿದ್ದಾರೆ. ಮಾಚ್‌ರ್ ಅಂತ್ಯಕ್ಕೆ ಕೊನೆಯ ಪಟ್ಟಿಬಿಡುಗಡೆಯಾಗಲಿದೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ನಾನಾ ವಿಷಯಗಳ ಮೇಲೆ ಸಿಎಂ ಕಣ್ಣು: ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಠಗಳು ಸೇರಿ ತುಂಬಾ ವಿಷಯಗಳ ಮೇಲೆ ಕಣ್ಣು ಹಾಕಿದ್ದಾರೆ. ಆ ಚರ್ಚೆ ಈಗ ಬೇಡ. ಚುನಾವಣೆಗೀಗ 3 ತಿಂಗಳಿದೆ. ಕಾಂಗ್ರೆಸ್, ಬಿಜೆಪಿ ತಲಾ 5 ವರ್ಷ ರಾಜ್ಯ ಆಳಿವೆ. ಜೆಡಿಎಸ್‌ಗೂ 5 ವರ್ಷ ಅಧಿಕಾರ ಕೊಡಿ ಎಂದು ಜನರಲ್ಲಿ ಬೇಡುತ್ತಿದ್ದೇವೆ. ಮುಂಬೈ-ಕರ್ನಾಟಕದಲ್ಲಿ ಜೆಡಿಎಸ್‌ಗೆ ಬೆಂಬಲ ಇಲ್ಲ ಎನ್ನುವ ಪ್ರಚಾರ ಆಗಿತ್ತು.
ನಾನು ಸರ್ಟಿಫಿಕೇಟ್ ಕೊಡಲ್ಲ: ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಕೆಲಸದ ಬಗ್ಗೆ ನಾನು ಸರ್ಟಿಫಿಕೇಟ್ ಕೊಡೊಲ್ಲ. ಜನರೇ ಕೊಡುತ್ತಾರೆ. ಅವರು ಪ್ರತಿನಿಧಿಸುವ ಬಬಲೇಶ್ವರದ ಸ್ಥಾನವನ್ನು ಹೊಂದಾಣಿಕೆಯನ್ವಯ ಬಿಎಸ್ಪಿಯವರು ಕೇಳಿದ್ದಕ್ಕೆ ಬಿಟ್ಟುಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ತಪ್ಪು ಕಲ್ಪನೆ ಬೇಡ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.