
ಬೆಂಗಳೂರು : ಮಂಡ್ಯದ ಕೆಆರ್‌ಎಸ್ ಜಲಾಶಯದ ಬೃಂದಾವನ ಗಾರ್ಡನ್‌ನಲ್ಲಿ ಉದ್ದೇಶಿತ ಡಿಸ್ನಿಲ್ಯಾಂಡ್ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಡಿ.7ರಂದು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಬಂಧ ಪಟ್ಟಸಚಿವರ ಸಭೆ ಆಯೋಜಿಸಿರುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮೇಕೆದಾಟು ಬಳಿಕ ಶಿವನಸಮುದ್ರಕ್ಕೆ ತೆರಳಿ ಅಲ್ಲಿಂದ ಕೆಆರ್‌ಎಸ್‌ನಲ್ಲಿ ತಜ್ಞರ ತಂಡದೊಂದಿಗೆ ತಂಗಲಾಗುವುದು. ಅಲ್ಲಿ, ಬಜೆಟ್‌ನಲ್ಲಿ ಘೋಷಿಸಲಾಗಿರುವ ಡಿಸ್ನಿಲ್ಯಾಂಡ್ ಅಭಿವೃದ್ಧಿ ಸಂಬಂಧ ಸಭೆ ನಡೆಯಲಿದೆ. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ನೀರಾವರಿ ಸಚಿವರು, ಪ್ರವಾಸೋದ್ಯಮ ಸಚಿವರೂ ಆಗಮಿಸುವಂತೆ ಮನವಿ ಮಾಡಿದ್ದೇನೆ. ಯೋಜನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸುವ ಮುನ್ನ ಸಂಬಂಧಪಟ್ಟಎಲ್ಲರ ಸಲಹೆ, ಸೂಚನೆಗಳನ್ನು ಪಡೆಯಲಾಗುವುದು ಎಂದು ತಿಳಿಸಿದರು.
ಹಿಂದೆ ಮೈಸೂರು ಮಹಾರಾಜರು ಕೆಆರ್‌ಎಸ್‌ನಲ್ಲಿ ಬೃಂದಾವನ ಉದ್ಯಾನ ನಿರ್ಮಿಸಿದ್ದರು. ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಅದನ್ನು ಮತ್ತಷ್ಟುಉನ್ನತೀಕರಿಸಲಾಗುವುದು ಅಷ್ಟೆ. ಯೋಜನೆ ಕುರಿತು ಒಂದು ಸಮಿತಿಯನ್ನೂ ರಚಿಸಲಾಗುತ್ತಿದೆ. ಈ ಸಮಿತಿಯಲ್ಲಿ ಮಹಾರಾಜರು, ಜಿಲ್ಲಾ ಉಸ್ತುವಾರಿ ಸಚಿವರು ಇರುತ್ತಾರೆ. ಮೈಸೂರಿನ ಇಂಜಿನಿಯರಿಂಗ್ ಅಸೋಸಿಯೇಷನ್‌ನ ಅಭಿಪ್ರಾಯವನ್ನೂ ಪಡೆಯುತ್ತೇನೆ. ಸಾರ್ವಜನಿಕ ಸಲಹೆ ಪಡೆಯಲೂ ಸಿದ್ಧರಿದ್ದೇವೆ. ಈಗಾಗಲೇ ಯೋಜನೆಯ ಡಿಪಿಆರ್‌ಗೆ ಬಜೆಟ್‌ನಲ್ಲಿ 5 ಕೋಟಿ ರು. ಮೀಸಲಿಡಲಾಗಿದೆ ಎಂದರು.
ಕೆಆರ್‌ಎಸ್ ಭೂಕಂಪ ವಲಯದಲ್ಲಿ ಬರುತ್ತಿದೆ, ಹಾಗಾಗಿ ಇಲ್ಲಿ ಪ್ರತಿಮೆ ನಿರ್ಮಾಣ ಬೇಡ ಎನ್ನುವ ಮಾತು ಕೇಳಿಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಬಜೆಟ್‌ನಲ್ಲಿ ಯೋಜನೆ ತಂದಿದ್ದೇವೆ. ನಾವು ಯಾವ ಪ್ರತಿಮೆಯನ್ನೂ ನಿರ್ಮಾಣ ಮಾಡುವುದಿಲ್ಲ. ಕೆಆರ್‌ಎಸ್ ಜಲಾಶಯ ವೀಕ್ಷಣೆಗೆ ಮುಂದಿನ ದಿನದಲ್ಲಿ ನಿರ್ಬಂಧ ಹೇರಬೇಕೆಂಬ ದೃಷ್ಟಿಯಿಂದ ದೂರದಿಂದ ಜಲಾಶಯ ವೀಕ್ಷಿಸಲು ಎತ್ತರದ ಗೋಪುರ ನಿರ್ಮಾಣ ಮಾಡುವ ಯೋಜನೆ ಇದಾಗಿದೆ. ಆ ಗೋಪುರಕ್ಕೆ ಕಾವೇರಿಯ ರೂಪ ಇರುತ್ತದೆಯಷ್ಟೆಎಂದರು.
ಡಿಸ್ನಿಲ್ಯಾಂಡ್‌ಗೆ ಈಗಾಗಲೇ 296 ಎಕರೆಗೆ ಒಂದು ಯೋಜನೆ ನಿಗದಿಯಾಗಿದೆ. ಸರ್ಕಾರ ಹೆಚ್ಚು ಬಂಡವಾಳ ಹೂಡದೆ, ಖಾಸಗಿಯವರಿಂದಲೇ ಹೂಡಿಕೆ ಮಾಡಿಸಲಾಗುವುದು. ನಂತರ ಸರ್ಕಾರಕ್ಕೆ ಪ್ರವಾಸೋದ್ಯಮ ಅಭಿವೃದ್ಧಿ, ಟ್ಯಾಕ್ಸ್ ಮತ್ತಿತರ ಮೂಲಗಳಿಂದ ಆದಾಯ ಬರಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.