ಕೆಪಿಸಿಸಿ ಪದಾಧಿಕಾರಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

By Kannadaprabha NewsFirst Published Jun 28, 2019, 7:26 AM IST
Highlights

ಕೆಪಿಸಿಸಿಯಲ್ಲಿ ಇದ್ದ ಅತ್ಯಧಿಕ ಸಂಖ್ಯೆಯ ಪದಾಧಿಕಾರಿಗಳ ಸಂಖ್ಯೆಯಲ್ಲಿ ಅತೀ ಕಡಿಮೆ ಮಾಡಲಾಗುತಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆಯೂ ಕೂಡ ಆರಂಭವಾಗಲಿದೆ. 

ಬೆಂಗಳೂರು [ಜೂ.28] :  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷಕ್ಕೆ ಈ ಬಾರಿ ಚಿಕ್ಕ ಹಾಗೂ ಚೊಕ್ಕ ತಂಡವನ್ನು ಕಾಂಗ್ರೆಸ್‌ ನಾಯಕತ್ವ ನೇಮಿಸಲಿದೆ. ಮೂಲಗಳ ಪ್ರಕಾರ ಈ ಬಾರಿ ಪದಾಧಿಕಾರಿಗಳ ಸಂಖ್ಯೆ 75 ಮೀರದಂತೆ ನೋಡಿಕೊಳ್ಳಲು ಉದ್ದೇಶಿಸಲಾಗಿದೆ.

ಸಾಮಾನ್ಯವಾಗಿ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಹನುಮಂತನ ಬಾಲದಂತಿರುತ್ತಿತ್ತು. ಕಳೆದ ಬಾರಿ 200ಕ್ಕೂ ಹೆಚ್ಚು ಮಂದಿ ಪದಾಧಿಕಾರಿಗಳ ನೇಮಕವಾಗಿತ್ತು. ಈ ಬೃಹತ್‌ ತಂಡ ಕೇವಲ ನಾಮ್‌ಕೆವಾಸ್ತೆ ಇದ್ದುದರಿಂದ ಅದನ್ನು ಬರ್ಖಾಸ್ತ್ ಮಾಡಲಾಗಿದ್ದು, ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಜು.10ರ ನಂತರ ಆರಂಭವಾಗಲಿದೆ.

ಮೂಲಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಜು.22ಕ್ಕೆ ಮುಳಬಾಗಿಲು ಸಮೀಪದ ಕೂಡುಮಲೆ ಗಣಪ ದೇವಾಲಯದಿಂದ ತಮ್ಮ ರಾಜ್ಯ ಪ್ರವಾಸವನ್ನು ಆರಂಭಿಸುವ ಉದ್ದೇಶ ಹೊಂದಿದ್ದಾರೆ. ಈ ರಾಜ್ಯ ಪ್ರವಾಸ ಆರಂಭವಾಗುವ ವೇಳೆಗೆ ಪರಿಪೂರ್ಣ ತಂಡವನ್ನು ಕಟ್ಟಿಕೊಳ್ಳಬೇಕು ಎಂಬುದು ಅವರ ಉದ್ದೇಶ. ಹೀಗಾಗಿ ಜು.10ರ ನಂತರ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಆರಂಭಿಸಲಿದ್ದಾರೆ.

ಶೀಘ್ರವೇ ವಿದೇಶ ಪ್ರವಾಸಕ್ಕೆ ತೆರಳಲಿರುವ ದಿನೇಶ್‌ ಗುಂಡೂರಾವ್‌ ಅವರು ಜು.9ರ ಸುಮಾರಿಗೆ ನಗರಕ್ಕೆ ಹಿಂತಿರುಗಲಿದ್ದಾರೆ. ಅನಂತರ ಅವರು ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಆರಂಭಿಸಲಿದ್ದು, ಈ ಉದ್ದೇಶಕ್ಕಾಗಿ ದೆಹಲಿಗೂ ತೆರಳಲಿದ್ದಾರೆ. ಒಟ್ಟಾರೆ. ಜು.22ರೊಳಗೆ ಹೊಸ ತಂಡ ಸಜ್ಜಾಗಿರಬೇಕು ಎಂಬುದು ಅವರ ಉದ್ದೇಶ.

ಈ ಬಾರಿ ಕೆಪಿಸಿಸಿ ತಂಡದ ಸಂಖ್ಯೆ 75 ಮೀರದಂತೆ ನೋಡಿಕೊಳ್ಳುವ ಉದ್ದೇಶ ಕಾಂಗ್ರೆಸ್‌ ನಾಯಕತ್ವಕ್ಕೆ ಇದೆ. ತಳಮಟ್ಟದಲ್ಲಿ ಬದ್ಧತೆಯಿಂದ ಕೆಲಸ ಮಾಡುವ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಪಕ್ಷದಲ್ಲಿ ಹೊಣೆಗಾರಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

click me!