ಚೀನಾ ವಿರುದ್ಧ ಪುಟ್ಟ ರಾಷ್ಟ್ರದ ಕ್ರಾಂತಿ; ಏನಿದು ಸ್ವಾತಂತ್ರ್ಯ ಹೋರಾಟ?

By Kannadaprabha News  |  First Published Sep 9, 2019, 1:54 PM IST

ಚೀನಾದ ವಿಶೇಷ ಆಡಳಿತಕ್ಕೆ ಒಳಪಟ್ಟಿರುವ ಪ್ರತ್ಯೇಕ ಪುಟ್ಟರಾಷ್ಟ್ರ ಹಾಂಕಾಂಗ್‌. ಚೀನಾದ ಅಧೀನದಲ್ಲಿದ್ದರೂ ಇಲ್ಲಿಗೆ ಪ್ರತ್ಯೇಕ ಸ್ವಾಯತ್ತ ಸರ್ಕಾರವಿದೆ. ಈ ವರ್ಷದ ಮಾಚ್‌ರ್‍ನಲ್ಲಿ ಶಂಕಿತ ಅಪರಾಧಿಗಳನ್ನು ಚೀನಾಕ್ಕೆ ಹಸ್ತಾಂತರಿಸುವ ವಿವಾದಿತ ಮಸೂದೆಯನ್ನು ಹಾಂಕಾಂಗ್‌ ಆಡಳಿತ ಮಂಡಳಿ ಮಂಡನೆ ಮಾಡಿತು. ಇದನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. 


ಸತತ ಮೂರು ತಿಂಗಳಿನಿಂದ ಹಾಂಕಾಂಗ್‌ ಹೊತ್ತಿ ಉರಿಯುತ್ತಿದೆ. ಜನರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಕ್ರಾಂತಿಯ ರೂಪ ತಾಳಿದೆ. ಜನರ ಹೋರಾಟಕ್ಕೆ ಮಣಿದು, ಶಂಕಿತ ಅಪರಾಧಿಗಳನ್ನು ಚೀನಾಕ್ಕೆ ಹಸ್ತಾಂತರಿಸುವ ವಿವಾದಿತ ಮಸೂದೆಯನ್ನು ಹಾಂಕಾಂಗ್‌ ಸರ್ಕಾರ ಕೈಬಿಟ್ಟರೂ ಪ್ರತಿಭಟನೆಗಳು ನಿಂತಿಲ್ಲ.

ಈ ದಂಗೆಯಲ್ಲಿ ಚೀನಾ ಪಾತ್ರವೇನು? ಪುಟ್ಟದೇಶ ಹಾಂಕಾಂಗ್‌ಗೆ ನಿಜಕ್ಕೂ ಬೇಕಿರುವುದು ಏನು? ಏಕೆ ಈ ಪರಿಯ ಹಿಂಸಾಚಾರ ನಡೆಯುತ್ತಿದೆ? ಇದು ಯಾವಾಗ ನಿಲ್ಲಬಹುದು? ಸಂಪೂರ್ಣ ವಿವರ ಇಲ್ಲಿದೆ.

Latest Videos

undefined

ಹಿಂಸಾಚಾರಕ್ಕೆ ತಿರುಗಿದ ಹಾಂಕಾಂಗ್‌ ಪ್ರತಿಭಟನೆ

ಚೀನಾ ವಿರುದ್ಧ ಪುಟ್ಟರಾಷ್ಟ್ರದ ಕ್ರಾಂತಿ

ಸತತ ಮೂರು ತಿಂಗಳಿನಿಂದ ಹಾಂಕಾಂಗ್‌ ಹೊತ್ತಿ ಉರಿಯುತ್ತಿದೆ. ಜನರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಕ್ರಾಂತಿಯ ರೂಪ ತಾಳಿದೆ. ಜನರ ಹೋರಾಟಕ್ಕೆ ಮಣಿದು, ಶಂಕಿತ ಅಪರಾಧಿಗಳನ್ನು ಚೀನಾಕ್ಕೆ ಹಸ್ತಾಂತರಿಸುವ ವಿವಾದಿತ ಮಸೂದೆಯನ್ನು ಹಾಂಕಾಂಗ್‌ ಸರ್ಕಾರ ಕೈಬಿಟ್ಟರೂ ಪ್ರತಿಭಟನೆಗಳು ನಿಂತಿಲ್ಲ. ಈ ದಂಗೆಯಲ್ಲಿ ಚೀನಾ ಪಾತ್ರವೇನು? ಪುಟ್ಟದೇಶ ಹಾಂಕಾಂಗ್‌ಗೆ ನಿಜಕ್ಕೂ ಬೇಕಿರುವುದು ಏನು? ಏಕೆ ಈ ಪರಿಯ ಹಿಂಸಾಚಾರ ನಡೆಯುತ್ತಿದೆ? ಇದು ಯಾವಾಗ ನಿಲ್ಲಬಹುದು? ಸಂಪೂರ್ಣ ವಿವರ ಇಲ್ಲಿದೆ.

ಹಾಂಕಾಂಗ್‌ನಲ್ಲಿ ಏನಾಗುತ್ತಿದೆ?

ಚೀನಾದ ವಿಶೇಷ ಆಡಳಿತಕ್ಕೆ ಒಳಪಟ್ಟಿರುವ ಪ್ರತ್ಯೇಕ ಪುಟ್ಟರಾಷ್ಟ್ರ ಹಾಂಕಾಂಗ್‌. ಚೀನಾದ ಅಧೀನದಲ್ಲಿದ್ದರೂ ಇಲ್ಲಿಗೆ ಪ್ರತ್ಯೇಕ ಸ್ವಾಯತ್ತ ಸರ್ಕಾರವಿದೆ. ಈ ವರ್ಷದ ಮಾಚ್‌ರ್‍ನಲ್ಲಿ ಶಂಕಿತ ಅಪರಾಧಿಗಳನ್ನು ಚೀನಾಕ್ಕೆ ಹಸ್ತಾಂತರಿಸುವ ವಿವಾದಿತ ಮಸೂದೆಯನ್ನು ಹಾಂಕಾಂಗ್‌ ಆಡಳಿತ ಮಂಡಳಿ ಮಂಡನೆ ಮಾಡಿತು. ಇದನ್ನು ವಿರೋಧಿಸಿ ಜನರು ಪ್ರತಿಭಟನೆ ಆರಂಭಿಸಿ, ಹಾಂಕಾಂಗ್‌ ಸಂಸತ್ತಿನೆದುರು ಧರಣಿ ಕುಳಿತರು. ಈ ಪ್ರತಿಭಟನೆ ಮುಂದುವರಿದಂತೆ ಹಾಂಕಾಂಗ್‌ ಸಂಸತ್ತು ಎರಡು ಬಣವಾಗಿ ವಿಭಜನೆಯಾಯಿತು.

ಪರಿಸ್ಥಿತಿ ತೀವ್ರ ವಿಕೋಪಕ್ಕೆ ಹೋಗುತ್ತಿದ್ದಂತೆ ಹಸ್ತಾಂತರ ಕಾಯ್ದೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿ, ಪ್ರಕರಣಗಳ ಆಧಾರದಲ್ಲಿ ಆರೊಪಿಗಳನ್ನು ಹಸ್ತಾಂತರಿಸಲು ಸರ್ಕಾರ ಒಪ್ಪಿತು. ಇದಕ್ಕೆ ಸಮ್ಮತಿಸದ ಹಾಂಕಾಂಗ್‌ನ 3000 ರಾಜಕೀಯ ನಾಯಕರು ಪ್ರತಿಭಟನೆ ತೀವ್ರಗೊಳಿಸಿದರು. ಅದು ಹಿಂಸಾರೂಪ ಪಡೆದುಕೊಂಡಿತು. ಲಕ್ಷಾಂತರ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅಶ್ರುವಾಯು, ರಬ್ಬರ್‌ ಬುಲೆಟ್‌ ಪ್ರಯೋಗಿಸತೊಡಗಿದರು.

ಫಿಕ್ಸಿಂಗ್‌: ಪಾಕ್‌ ಮೂಲದ 3 ಅಂತಾರಾಷ್ಟ್ರೀಯ ಕ್ರಿಕೆ​ಟಿ​ಗರು ಬ್ಯಾನ್‌!

ಒಟ್ಟಾರೆ ಘಟನೆಯ ಮೇಲೆ ಚೀನಾ ನಿಯಂತ್ರಣ ಹೆಚ್ಚಿದಂತೆ ಪ್ರತಿಭಟನೆಯ ಕಾವೂ ಹೆಚ್ಚಾಗಿ ಕ್ರಾಂತಿಯ ರೂಪ ಪಡೆಯಿತು. ಸರ್ಕಾರಿ ಕಚೇರಿಗಳನ್ನು ಮುಚ್ಚಲಾಯಿತು. ವಿಮಾನಗಳ ಹಾರಾಟ ರದ್ದುಪಡಿಸಲಾಯಿತು. ಅಂತಿಮವಾಗಿ ಸೆಪ್ಟೆಂಬರ್‌ 4ರಂದು ಸರ್ಕಾರ ಅಂತಿಮವಾಗಿ ಮಸೂದೆ ಹಿಂಪಡೆಯಲು ಸಮ್ಮತಿ ಸೂಚಿಸಿತು. ಆದರೂ ಇದು ಕೇವಲ ಕಣ್ಣೊರೆಸುವ ತಂತ್ರ ಎಂದು ಪ್ರತಿಭಟನಾಕಾರರು ಇನ್ನೂ ಹೋರಾಟ ನಡೆಸುತ್ತಲೇ ಇದ್ದಾರೆ.

ಚೀನಾ ಭಾಗವಾಗಿದ್ದರೂ ಸ್ವತಂತ್ರ

ರಾಜ ಪ್ರಭುತ್ವವಾಗಿದ್ದ ಹಾಂಕಾಂಗ್‌ ಕ್ರಿಸ್ತಪೂರ್ವ 214ರಲ್ಲಿ ಚೀನಾದ ವಶಕ್ಕೆ ಬಂತು. 1842ರ ಯುದ್ಧದಲ್ಲಿ ಬ್ರಿಟನ್‌ ಈ ಪ್ರದೇಶವನ್ನು ಗೆದ್ದುಕೊಂಡು ತನ್ನ ವಸಾಹತು ಸ್ಥಾಪಿಸಿತು. ನಂತರ 1860ರ ಅಫೀಮು ಯುದ್ಧದ ಬಳಿಕ ಚೀನಾ ದೇಶವೇ ಹಾಂಕಾಂಗನ್ನು ಬ್ರಿಟನ್‌ಗೆ 99 ವರ್ಷಗಳ ಲೀಸ್‌ಗೆ ನೀಡಿತ್ತು. ಒಟ್ಟಾರೆ ಹಾಂಕಾಂಗ್‌ 155 ವರ್ಷಗಳ ಕಾಲ ಬ್ರಿಟನ್ನಿನ ವಶದಲ್ಲಿದ್ದರೂ ಸ್ವತಂತ್ರ ದೇಶವಾಗಿತ್ತು. ಆದರೆ 1997ರಲ್ಲಿ ಬ್ರಿಟಿಷರು ಹಾಂಕಾಂಗ್‌ ಕುರಿತು ಚೀನಾದ ಜೊತೆ ಒಪ್ಪಂದ ಮಾಡಿಕೊಂಡು ಇದೊಂದು ವಿಶೇಷ ಆಡಳಿತ ವಲಯವಾಗಿರಬೇಕು ಎಂಬ ಷರತ್ತಿನೊಂದಿಗೆ ಚೀನಾಗೆ ಹಸ್ತಾಂತರಿಸಿದರು.

ಅಲ್ಲಿಂದ ಅದು ‘ಒಂದು ದೇಶ, ಎರಡು ಆಡಳಿತ’ ಎಂಬಂತಹ ವ್ಯವಸ್ಥೆಯಲ್ಲಿ ನಡೆಯುತ್ತಿದೆ. ಹಾಂಕಾಂಗ್‌ ವಿಶೇಷ ಆಡಳಿತ ವಲಯವಾದ್ದರಿಂದ ವಿದೇಶಾಂಗ ಮತ್ತು ರಕ್ಷಣೆ ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲೂ ಚೀನಾದಿಂದ ಸಂಪೂರ್ಣ ಸ್ವಾಯತ್ತೆಯನ್ನು ಅನುಭವಿಸುತ್ತಿದೆ.

50 ವರ್ಷ ಈ ವ್ಯವಸ್ಥೆ ಜಾರಿಯಲ್ಲಿರಬೇಕು ಎಂದು ಹಾಂಕಾಂಗ್‌ನ ಆಡಳಿತದ ಜೊತೆಗೆ ಚೀನಾ ಒಪ್ಪಂದ ಮಾಡಿಕೊಂಡಿದ್ದು, ಅದು 2047ರಲ್ಲಿ ಅಂತ್ಯಗೊಳ್ಳಲಿದೆ. ನಂತರ ಹಾಂಕಾಂಗ್‌ನ ಸ್ಥಿತಿ ಏನು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ.

ಹಾಂಕಾಂಗ್‌ ಬೀದಿಗಳಲ್ಲಿ ಹೋರಾಟಗಾರರ ಪ್ರವಾಹ!

ಏನಿದು ಹಸ್ತಾಂತರ ಕಾಯ್ದೆ?

ಹಾಂಕಾಂಗ್‌ ಚೀನಾದ ಭಾಗವಾಗಿದ್ದರೂ ಪ್ರತ್ಯೇಕವಾದ ಕಾನೂನು ವ್ಯವಸ್ಥೆ ಹೊಂದಿದೆ. ಕಳೆದ ಫೆಬ್ರವರಿಯಲ್ಲಿ ಹಾಂಕಾಂಗ್‌ನ ಸರ್ಕಾರ ತನ್ನ ಹಸ್ತಾಂತರ ಕಾನೂನಿಗೆ ತಿದ್ದುಪಡಿ ಮಾಡಲು ಒಂದು ಕರಡು ಸಿದ್ಧಪಡಿಸಿತ್ತು. ಅದರಲ್ಲಿ ಹಾಂಕಾಂಗ್‌ನ ಶಂಕಿತ ಅಪರಾಧಿಗಳನ್ನು ಚೀನಾಕ್ಕೆ ಹಸ್ತಾಂತರಿಸಲು ಅವಕಾಶವಿತ್ತು.

ಇದರಿಂದ ಹಾಂಕಾಂಗ್‌ ಮೇಲೆ ಚೀನಾ ಪ್ರಾಬಲ್ಯ ಹೆಚ್ಚಲಿದೆ, ಪ್ರತಿಯೊಂದು ಪ್ರಕರಣವನ್ನೂ ಚೀನಾಕ್ಕೆ ಹಸ್ತಾಂತರಿಸಲು ಅವಕಾಶ ಲಭ್ಯವಾಗುತ್ತದೆ, ಇದರಿಂದ ಹಾಂಕಾಂಗ್‌ನ ಕಾನೂನು ವ್ಯವಸ್ಥೆ ತನ್ನ ಬಲ ಕಳೆದುಕೊಳ್ಳಲಿದೆ ಎಂದು ರಾಜಕೀಯ ಗುಂಪೊಂದು ವಿರೋಧ ವ್ಯಕ್ತಪಡಿಸಿತು. ಅದಕ್ಕೆ ಜನರ ಬೆಂಬಲವೂ ದೊರೆತು, ಪ್ರತಿಭಟನೆಗಳು ಆರಂಭವಾದವು. ಬರುಬರುತ್ತಾ ಇದು ತೀವ್ರ ಸ್ವರೂಪದ ಪ್ರಜಾಪ್ರಭುತ್ವ ಸುಧಾರಣಾ ಕ್ರಾಂತಿಯಾಗಿ ಬದಲಾಗಿದೆ.

ನಾಗರಿಕರ ವಿರೋಧ ಏಕೆ?

ಚೀನಾಕ್ಕೆ ಹಸ್ತಾಂತರವಾದ ಆರೋಪಿಯು ಅಲ್ಲಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಚಾರಣೆ ಎದುರಿಸಬೇಕು. ಆದರೆ ಅಲ್ಲಿನ ನ್ಯಾಯಾಂಗ ವ್ಯವಸ್ಥೆ ನ್ಯಾಯಸಮ್ಮತವಾಗಿಲ್ಲ ಮತ್ತು ಹಿಂಸಾತ್ಮಕವಾಗಿದೆ. ಈ ವಿವಾದಾತ್ಮಕ ಮಸೂದೆ ಸಾಮಾಜಿಕ ಕಾರ‍್ಯಕರ್ತರು ಮತ್ತು ಪತ್ರಕರ್ತರನ್ನು ಅಪಾಯಕ್ಕೆ ದೂಡುತ್ತದೆ.

ಹಾಂಕಾಂಗ್‌ ಮೇಲೆ ಚೀನಾ ಹಿಡಿತ ಸಾಧಿಸಲು ಮತ್ತೊಂದು ಪ್ರಬಲ ಅಸ್ತ್ರ ಸಿಕ್ಕಂತಾಗುತ್ತಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಪ್ರಾದೇಶಿಕ ನ್ಯಾಯಾಂಗ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗುತ್ತದೆ ಎಂಬುದು ಹಾಂಕಾಂಗ್‌ ಜನರ ಆರೋಪ.

ಹಾಂಕಾಂಗ್‌ ಮೇಲೆ ಚೀನಾ ಕಣ್ಣು

ಹಾಂಕಾಂಗನ್ನು ಚೀನಾದ ಭಾಗ ಎಂದು ಗುರುತಿಸಲಾಗುತ್ತದೆಯಾದರೂ ಇದರ ನ್ಯಾಯಾಂಗ ವ್ಯವಸ್ಥೆ, ಕಾನೂನು ವ್ಯವಸ್ಥೆ ಚೀನಾಗಿಂತ ಭಿನ್ನವಾಗಿದೆ. ವಾಕ್‌ ಸ್ವಾತಂತ್ರ್ಯ ಮತ್ತು ಸಭೆ ಸೇರುವ ಸ್ವಾಂತಂತ್ರ್ಯ ಇಲ್ಲಿದೆ. ಚೀನಾ ನಿಷೇಧಿಸಿರುವ ಟಿಯಾನ್‌ಮನ್‌ ಹತ್ಯಾಕಾಂಡದ ವಾರ್ಷಿಕೋತ್ಸವ ಇಲ್ಲಿ ನಡೆಯುತ್ತದೆ. ಇದೇ ಕಾರಣಕ್ಕೆ ಶಂಕಿತ ಅಪರಾಧಿಗಳನ್ನು ವಿಚಾರಣೆಗಾಗಿ ಚೀನಾಗೆ ಹಸ್ತಾಂತರಿಸಬೇಕೆಂದು ರೂಪಿಸಲಾಗಿರುವ ಮಸೂದೆ ವಿವಾದ ಹುಟ್ಟುಹಾಕಿದೆ.

ಆದರೆ ಚೀನಾ ಹಾಂಕಾಂಗನ್ನು ಸಂಪೂರ್ಣವಾಗಿ ತನ್ನ ಅಧೀನಕ್ಕೆ ತರುವ ಯತ್ನದಲ್ಲಿದ್ದು, ಇದರ ಭಾಗವಾಗಿಯೇ ಶಂಕಿತ ಅಪರಾಧಿಗಳ ಮಸೂದೆಯನ್ನು ರೂಪಿಸಲು ಹಾಂಕಾಂಗ್‌ನ ಆಡಳಿತಕ್ಕೆ ಕುಮ್ಮುಕ್ಕು ನೀಡಿದೆ ಎನ್ನಲಾಗಿದೆ. ಇದಲ್ಲದೆ ಹಾಂಕಾಂಗ್‌ ಸ್ವಾಯತ್ತೆ ವಿಚಾರವಾಗಿ ಚೀನಾ ಪದೇ ಪದೇ ಮೂಗು ತೂರಿಸುತ್ತಿರುವ ಉದಾಹರಣೆಗಳಿವೆ. ನಾಪತ್ತೆಯಾದ 5 ಜನ ಹಾಂಕಾಂಗ್‌ನ ಪುಸ್ತಕ ಮಾರಾಟಗಾರರು ಚೀನಾ ವಶದಲ್ಲಿದ್ದಾರೆ. ಹಾಂಕಾಂಗ್‌ ಮುಖ್ಯ ಕಾರ‍್ಯನಿರ್ವಹಣಾಧಿಕಾರಿಯನ್ನು 1200 ಸದಸ್ಯರ ಚುನಾವಣಾ ಸಮಿತಿ ಆಯ್ಕೆ ಮಾಡುತ್ತದೆ.

70 ಸದಸ್ಯರ ಶಾಸನಸಭೆಯ ಎಲ್ಲಾ ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾಗುವುದಿಲ್ಲ. ಚೀನಾ ಬೆಂಬಲಿತ ಶಾಸಕರೇ ಇಲ್ಲಿ ಹೆಚ್ಚಾಗಿದ್ದಾರೆ. ಹಾಂಕಾಂಗ್‌ನ ಕಿರು ಸಂವಿಧಾನದ ಪ್ರಕಾರ ನಾಯಕ ಹಾಗೂ ಶಾಸನಸಭೆಯ ಸದಸ್ಯರು ಪ್ರಜಾಪ್ರಭುತ್ವದ ತಳಹದಿಯಲ್ಲೇ ಆಯ್ಕೆಯಾಗಬೇಕು. ಆದರೆ ಇದರ ಸ್ವರೂಪದ ಬಗ್ಗೆಯೇ ಭಿನ್ನಾಭಿಪ್ರಾಯಗಳಿವೆ. ಹಾಗೆಯೇ 2047ರಲ್ಲಿ ಸ್ವಾಯತ್ತೆ ಕೊನೆಗೊಂಡ ನಂತರ ಹಾಂಕಾಂಗ್‌ ಕತೆ ಏನು ಎಂಬ ಬಗ್ಗೆ ಎಲ್ಲಿಯೂ ಸ್ಪಷ್ಟತೆ ಇಲ್ಲ.

ಹಾಂಕಾಂಗ್‌ ಪ್ರಕ್ಷುಬ್ಧ: ಗಡಿಗೆ ಬಂತು ಚೀನಾ ಸೇನೆ

5 ವರ್ಷದ ಹಿಂದೆಯೂ ಕ್ರಾಂತಿ

2014ರಲ್ಲಿ ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ‘ಅಂಬ್ರೆಲ್ಲಾ ಚಳವಳಿ’ ಎಂಬ ದೊಡ್ಡಮಟ್ಟದ ಆಂದೋಲನ ನಡೆದಿತ್ತು. ಪಾರದರ್ಶಕ ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆಗೆ ಇಳಿದಿದ್ದ ಜನರು ಪೊಲೀಸರ ಪೆಪ್ಪರ್‌ ಸ್ಪ್ರೇ ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಛತ್ರಿಗಳ ಮೊರೆಹೋಗಿದ್ದರು. ಸದ್ಯ ಈಗಿನ ವಿವಾದಾತ್ಮಕ ಮಸೂದೆ ಮಂಡನೆಯಾದ ಬಳಿಕವೂ ಅದನ್ನು ಕೈಬಿಡುವಂತೆ ಆಗ್ರಹಿಸಿ ಹಾಂಕಾಂಗ್‌ನಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆಯುತ್ತಿವೆ. ಲಕ್ಷಾಂತರ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಅವರನ್ನು ಚದುರಿಸಲು ಪೊಲೀಸರು ಹಿಂಸಾತ್ಮಕ ಬಲಪ್ರಯೋಗ ಮಾಡುತ್ತಿರುವುದನ್ನು ಚೀನಾ ಸಮರ್ಥಿಸಿಕೊಳ್ಳುತ್ತಿದೆ.

ಮಸೂದೆ ಹಿಂಪಡೆದರೂ ಚಳವಳಿ ನಿಂತಿಲ್ಲ ಏಕೆ?

ಶಂಕಿತ ಅಪರಾಧಿಗಳ ಹಸ್ತಾಂತರ ವಿರೋಧಿಸಿ 3 ತಿಂಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಮಣಿದ ಹಾಂಕಾಂಗ್‌ ಆಡಳಿತ ಮಂಡಳಿ ಕೆಲ ದಿನಗಳ ಹಿಂದೆ ವಿವಾದಾತ್ಮಕ ಮಸೂದೆಯನ್ನು ಹಿಂಪಡೆದಿದೆ. ಆದರೂ ಪ್ರತಿಭಟನೆ ನಿಂತಿಲ್ಲ. ಇನ್ನೂ ಸಾವಿರಾರು ಜನರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಮೊದಲು ವಿವಾದಿತ ಮಸೂದೆ ಹಿಂಪಡೆಯುವಂತೆ ಮಾತ್ರ ಪ್ರತಿಭಟಿಸಿದ್ದ ಹಾಂಕಾಂಗ್‌ ಪ್ರಜೆಗಳು ಈಗ ಚೀನಾ ನಿಯಂತ್ರಣದಿಂದ ಮುಕ್ತಿ ಪಡೆದು ಹಾಕಾಂಗ್‌ ಸಂಪೂರ್ಣ ಸ್ವತಂತ್ರ ರಾಷ್ಟ್ರವಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಹೋರಾಟಗಾರರು ಅಮೆರಿಕದ ರಾಯಭಾರ ಕಚೇರಿ ಎದುರು ಚೀನಾ ಹಿಡಿತದಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಕಪ್ಪು ಶರ್ಟ್‌, ಮುಖಕ್ಕೆ ಮಾಸ್ಕ್‌ ಧರಿಸಿ ‘ರೇಸಿಸ್ಟ್‌ ಬೀಜಿಂಗ್‌, ಲಿಬರೇಟ್‌ ಹಾಂಕಾಂಗ್‌’ ಎಂಬ ಘೋಷಣೆ ಮೊಳಗಿಸುತ್ತಿದ್ದಾರೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಕೂಡ ಹಾಂಕಾಂಗನ್ನು ಸ್ವತಂತ್ರಗೊಳಿಸಿ ಎನ್ನುತ್ತಿದ್ದಾರೆ. ಹೀಗಾಗಿ ಪ್ರತಿಭಟನೆ ಇನ್ನಷ್ಟುತೀವ್ರವಾಗುವ ಸಾಧ್ಯತೆಗಳಿವೆ.

ಪ್ರತಿಭಟನಾಕಾರರ ಬೇಡಿಕೆ ಏನು?

1. ಶಂಕಿತರ ಹಸ್ತಾಂತರ ಕಾಯ್ದೆಯನ್ನು ಸಂಪೂರ್ಣವಾಗಿ ಹಿಂಪಡೆದುಕೊಳ್ಳುವುದು

2. ಪ್ರತಿಭಟನಾಕಾರರ ವಿರುದ್ಧ ಮಾಡಲಾಗಿರುವ ದಂಗೆ ಆರೊಪಗಳನ್ನು ಹಿಂಪಡೆಯುವುದು

3.ಬಂಧಿತ ಪ್ರತಿಭಟನಾಕಾರರಿಗೆ ಕ್ಷಮೆ ನೀಡುವುದು

4.ಪೊಲೀಸರ ದೌರ್ಜನ್ಯದ ವಿರುದ್ಧ ಸ್ವತಂತ್ರ ಸಂಸ್ಥೆಯಿಂದ ತನಿಖೆ

5.ಚೀನಾದ ಕೈಗೊಂಬೆಯಂತೆ ಆಡುವ ಹಾಂಕಾಂಗ್‌ ಸರ್ಕಾರದ ಮುಖ್ಯಸ್ಥೆ ಕ್ಯಾರಿ ಲಾಮ… ರಾಜೀನಾಮೆ ನೀಡುವುದು

6. ಮುಖ್ಯಕಾರ‍್ಯನಿರ್ವಹಣಾಧಿಕಾರಿ ಆಯ್ಕೆ ಮತ್ತು ಶಾಸನಸಭೆ ಚುನಾವಣೆಯಲ್ಲಿ ಸಾರ್ವತ್ರಿಕ ಮತದಾನ ಹಕ್ಕು ನೀಡುವುದು

ಚೀನೀಯರೆಂದು ಕರೆಸಿಕೊಳ್ಳಲು

ಹಾಂಕಾಂಗ್‌ ಜನರಿಗೆ ಇಷ್ಟವಿಲ್ಲ

ಹಾಂಕಾಂಗ್‌ ಚೀನಾದ ಭಾಗವಾಗಿದ್ದರೂ ಅಲ್ಲಿನ ಬಹುತೇಕ ಜನರಿಗೆ ತಾವು ಚೀನೀಯರೆಂದು ಗುರುತಿಸಿಕೊಳ್ಳಲು ಇಷ್ಟವಿಲ್ಲ. ಯೂನಿವರ್ಸಿಟಿ ಆಫ್‌ ಹಾಂಕಾಂಗ್‌ ಈ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿತ್ತು. ಅದರಲ್ಲಿ ಮುಕ್ಕಾಲು ಭಾಗ ಜನರು ತಾವು ಹಾಂಕಾಂಗ್‌ನವರು ಎಂದೇ ​ಹೇಳಿಕೊಂಡಿದ್ದರು. ಸಮೀಕ್ಷೆಯಲ್ಲಿ ಪಾಲ್ಗೊಂಡ ಜನರ ಪೈಕಿ 71% ಜನರು ತಾವು ಚೀನಾದವರಲ್ಲವೆಂದೂ, ತಮಗೆ ಚೀನೀಯರು ಎಂದು ಹೇಳಿಕೊಳ್ಳಲು ಹೆಮ್ಮೆ ಇಲ್ಲವೆಂದೂ ಹೇಳಿಕೊಂಡಿದ್ದರು. ಹಾಂಕಾಂಗ್‌ನಲ್ಲಿರುವ ಯುವ ಜನರಂತೂ ತಾವು ಚೀನೀಯರೆಂದು ಒಪ್ಪಿಕೊಳ್ಳಲು ಸುತರಾಂ ತಯಾರಿಲ್ಲ.

ಜನಸಂಖ್ಯೆ-72 ಲಕ್ಷ

ವಿಸ್ತೀರ್ಣ-1,098 ಚದರ ಕಿ.ಮೀ

ಭಾಷೆ- ಚೀನೀ ಮತ್ತು ಇಂಗ್ಲಿಷ್‌ (ಎರಡೂ ಅಧಿಕೃತ ಭಾಷೆಗಳು)

ಪ್ರಮುಖ ಧರ್ಮ-ಬೌದ್ಧ, ತಾವೋಯಿಸಂ

ಕರೆನ್ಸಿ- ಹಾಂಕಾಂಗ್‌ ಡಾಲರ್‌

ಆಡಳಿತ - ಚೀನಾದ ವಿಶೇಷ ಸ್ವಾಯತ್ತ ಪ್ರದೇಶ

click me!