ಕಾಂಗ್ರೆಸ್ ಶಾಸಕಗೆ ಬಿಜೆಪಿ ಬೆಂಬಲ : ಬಂಪರ್ ಆಫರ್?

By Kannadaprabha NewsFirst Published Aug 23, 2019, 8:25 AM IST
Highlights

ರಾಜ್ಯ ರಾಜಕೀಯದಲ್ಲಿ ಹೊಸ ಹೊಸ ಬೆಳವಣಿಗೆಗಳಾಗುತ್ತಿದೆ. ಕಾಂಗ್ರೆಸ್ ಶಾಸಕರೋರ್ವರಿಗೆ ಬಿಜೆಪಿ ಬೆಂಬಲ ನೀಡುವ ಸಾಧ್ಯತೆ ಇದ್ದು, ಇದೀಗ ಬಂಪರ್ ಆಫರ್ ಒದಗಿ ಬರುವ ಸಾಧ್ಯತೆ ಇದೆ. 

ಬೆಂಗಳೂರು[ಆ.23]:  ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌)ದ ಮುಂದಿನ ಅಧ್ಯಕ್ಷರು ಯಾರಾಗಬಹುದು ಎಂಬುದು ತೀವ್ರ ಕುತೂಹಲ ಮೂಡಿಸಿದ್ದು, ಹಾಲಿ ಕಾಂಗ್ರೆಸ್‌ ಶಾಸಕ ಭೀಮಾ ನಾಯಕ್‌ ಅವರು ಗಟ್ಟಿಯಾದ ರಾಜಕೀಯ ನಿಲುವು ಕೈಗೊಂಡಲ್ಲಿ ಅವರನ್ನು ಬೆಂಬಲಿಸುವ ಬಗ್ಗೆ ಬಿಜೆಪಿ ಗಂಭೀರ ಚಿಂತನೆ ನಡೆಸಿದೆ.

ಗುರುವಾರ ಬೆಳಗ್ಗೆ ಭೀಮಾ ನಾಯಕ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಅವರ ಮುಂದಿನ ನಡೆ ಬಗ್ಗೆ ಸಹಜವಾಗಿಯೇ ಅನುಮಾನ ವ್ಯಕ್ತವಾಗಿದೆ.

ಮುಂಬರುವ ದಿನಗಳಲ್ಲಿ ಭೀಮಾ ನಾಯಕ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಹೊರಬರುವ ನಿರ್ಧಾರ ಕೈಗೊಂಡಲ್ಲಿ ಕೆಎಂಎಫ್‌ ಅಧ್ಯಕ್ಷ ಸ್ಥಾನ ಅವರ ಪಾಲಾಗುವ ಸಾಧ್ಯತೆ ಹೆಚ್ಚಾಗಿದ್ದು, ಭೀಮಾ ನಾಯಕ್‌ ಅವರೂ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹಿಂದಿನ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಅಸ್ತಿತ್ವದಲ್ಲಿ ಇದ್ದಲ್ಲಿ ಭೀಮಾ ನಾಯಕ್‌ ಅವರು ಕೆಎಂಎಫ್‌ ಅಧ್ಯಕ್ಷರಾಗುವುದು ಕಷ್ಟಕರವಾಗಿತ್ತು. ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಅವರು ಪ್ರಬಲ ಎದುರಾಳಿಯಾಗಿದ್ದರು. ಆದರೆ, ಇದೀಗ ಬಿಜೆಪಿ ಅಧಿಕಾರದಲ್ಲಿರುವುದರಿಂದ ಮತ್ತು ನಾಮನಿರ್ದೇಶನ ಸದಸ್ಯರು ಬಿಜೆಪಿಯವರಾಗಿರುವುದರಿಂದ ಭೀಮಾ ನಾಯಕ್‌ ಅವರಿಗೆ ಹಾದಿ ಸುಗಮವಾಗಲಿದೆ. ಈಗಲೂ ರೇವಣ್ಣ ಅವರೇ ಎದುರಾಳಿಯಾದರೂ ಅವರನ್ನು ಎದುರಿಸಲು ಬಿಜೆಪಿ ಬೆಂಬಲ ಬೇಕೆ ಬೇಕು.

ಯಾವುದೇ ಲಾಭವಿಲ್ಲದೆ ಬಿಜೆಪಿ ಭೀಮಾ ನಾಯಕ್‌ ಅವರನ್ನು ಬೆಂಬಲಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ, ಸದ್ಯಕ್ಕೆ ನಡೆದ ಮಾತುಕತೆ ಪ್ರಕಾರ ಭೀಮಾ ನಾಯಕ್‌ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್‌ನಿಂದ ಹೊರಬರುವುದು ನಿಶ್ಚಿತವಾದಲ್ಲಿ ಅವರನ್ನೇ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಲು ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭೀಮಾ ನಾಯಕ್‌, ಕರ್ನಾಟಕ ಹಾಲು ಮಹಾ ಮಂಡಳದ ಅಧ್ಯಕ್ಷ ಚುನಾವಣೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಭೇಟಿ ಮಾಡಿದ್ದೆ. ಈ ಹಿಂದೆ ನಡೆಯಬೇಕಿದ್ದ ಚುನಾವಣೆಯನ್ನು ಕೆಲ ಕಾರಣಗಳಿಂದ ಮುಂದೂಡಲಾಗಿತ್ತು. ಸಹಕಾರ ಇಲಾಖೆಯ ಅಧಿಕಾರಿಗಳು ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದೇನೆ. ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ ಎಂದರು.

ಭೀಮಾ ನಾಯಕ್‌ ಅವರ ಮಾತುಕತೆ ಬಳಿಕ ಹೈಕೋರ್ಟ್‌ನಲ್ಲಿ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ಅವರು ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಆ.31ರಂದು ಚುನಾವಣೆ ನಡೆಸಲಾಗುತ್ತದೆ. ಈ ಹಿಂದೆ ಯಾವ ಹಂತದಲ್ಲಿ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಂಡಿತ್ತೋ ಅದೇ ಹಂತದಿಂದ ಪ್ರಕ್ರಿಯೆಗಳು ಮುಂದುವರಿಯಲಿವೆ. ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು ಎನ್ನಲಾಗಿದೆ.

click me!