ಮೋದಿ ಭಾರತೀಯ ಮುಸ್ಲಿಮರ ಹೊಸ ಪ್ರವಾದಿ: ಅಬ್ದುಲ್ಲಾ ಕುಟ್ಟಿ!

By Web DeskFirst Published Jun 26, 2019, 7:21 PM IST
Highlights

‘ಮೋದಿ ಭಾರತೀಯ ಮುಸ್ಲಿಮರ ಪಾಲಿನ ಹೊಸ ಮಸೀಹಾ’| ಮೋದಿ ಅವರನ್ನು ಹಾಡಿ ಹೊಗಳಿದ ಕೇರಳ ಮುಸ್ಲಿಂ ನಾಯಕ| ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿರುವ ಎಪಿ ಅಬ್ದುಲ್ಲಾ ಕುಟ್ಟಿ| ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಬೆಂಬಲಿಸುವಂತೆ ಮುಸ್ಲಿಮರಿಗೆ ಅಬ್ದುಲ್ಲಾ ಕುಟ್ಟಿ ಕರೆ| ಮೋದಿ ಮುಸ್ಲಿಂ ವಿರೋಧಿ ಎಂಬುದು ತಪ್ಪು ಕಲ್ಪನೆ ಎಂದ ಅಬ್ದುಲ್ಲಾ ಕುಟ್ಟಿ| ಮೋದಿ ಬೆಂಬಲಿಸಿ ಅಭಿವೃದ್ಧಿಯ ಮುಖ್ಯಧಾರೆಗೆ ಬರುವಂತೆ ಮುಸ್ಲಿಮರಲ್ಲಿ ಮನವಿ|

ತಿರುವನಂತಪುರಂ(ಜೂ.26): ಪ್ರಧಾನಿ ನರೇಂದ್ರ ಮೋದಿ ಭಾರತದ ಮುಸ್ಲಿಮರ ಪಾಲಿನ ಹೊಸ ಪ್ರವಾದಿ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಎಪಿ ಅಬ್ದುಲ್ಲಾ ಕುಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾ ಟುಡೆಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿರುವ ಅಬ್ದುಲ್ಲಾ ಕುಟ್ಟಿ, ಬಡ ಭಾರತೀಯ ಮುಸ್ಲಿಮರ ಪಾಲಿಗೆ ಮೋದಿ ಹೊಸ ಪ್ರವಾದಿ ಎಂದು ಹೇಳಿದ್ದಾರೆ.

ಭಾರತೀಯ ಮುಸ್ಲಿಮರು ತಮ್ಮ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಏಳಿಗೆಗೆ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಅಬ್ದುಲ್ಲಾ ಕುಟ್ಟಿ ಮನವಿ ಮಾಡಿದ್ದಾರೆ.

ಮೋದಿ ಅವರನ್ನು ಮುಸ್ಲಿಂ ವಿರೋಧಿ ಎಂದು ಕಾಂಗ್ರೆಸ್ ಮತ್ತು ಎಡಪಕ್ಷಗಳು ಬಿಂಬಿಸುತ್ತಾ, ಮುಸ್ಲಿಮರಲ್ಲಿ ಅಭದ್ರತೆಯ ಭಾವನೆ ಮೂಡುವಂತೆ ಮಾಡುತ್ತಿವೆ ಎಂದು ಅಬ್ದುಲ್ಲಾ ಕುಟ್ಟಿ ಆರೋಪಿಸಿದ್ದಾರೆ.

ಅಭಿವೃದ್ಧಿ ಪಥದಲ್ಲಿ ಮುನ್ನಡೆದಿರುವ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುವ ಮೂಲಕ, ಭಾರತೀಯ ಮುಸ್ಲಿಮರು ಮುಖ್ಯಧಾರೆಗೆ ಬರಬೇಕೆಂದು ಅಬ್ದುಲ್ಲಾ ಕುಟ್ಟಿ ಕರೆ ನೀಡಿದ್ದಾರೆ.

ಈ ಮೊದಲು ಸಿಪಿಎಂ ಪಕ್ಷದಲ್ಲಿದ್ದ ಅಬ್ದುಲ್ಲಾ ಕುಟ್ಟಿ ಅವರನ್ನು, ಗುಜರಾತ್ ಮಾದರಿಯ ಅಭಿವೃದ್ಧಿ ಹೊಗಳಿದ್ದಕ್ಕೆ 2009ರಲ್ಲಿ ಪಕ್ಷದಿಂದ ಹೊರಹಾಕಲಾಗಿತ್ತು. ನಂತರ ಕಾಂಗ್ರೆಸ್ ಪಕ್ಷ ಸೇರಿದ್ದ ಅವರು, ಕಣ್ಣೂರಿನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಇದೀಗ ಕಾಂಗ್ರೆಸ್ ತೊರೆದಿರುವ ಅಬ್ದುಲ್ಲಾ ಕುಟ್ಟಿ, ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಪಕ್ಷ ಸೇರಲಿದ್ದಾರೆ.

click me!