ಪ್ರವಾಹ ಕ್ಯಾಂಪ್ ನಲ್ಲಿ ಅನುರಾಗದ ಅಲೆ | ಎಲ್ಲರೂ ಪ್ರವಾಹದಲ್ಲಿ ಕಳೆದು ಹೋದರೆ ಇವರು ಪ್ರೀತಿಯಲ್ಲಿ ಕಳೆದು ಹೋದರು | ಈ ಜೋಡಿಯನ್ನು ಒಂದಾಗಿಸಿತು ಪ್ರವಾಹ
ಕೇರಳ (ಆ. 26): ಕಳೆದ ವರ್ಷ ವರುಣರಾಯನ ಆರ್ಭಟದಿಂದ ಉಂಟಾದ ಭೀಕರ ಪ್ರವಾಹದಿಂದ ದೇವರನಾಡು ಕೇರಳ ಅಕ್ಷರಶಃ ತತ್ತರಿಸಿ ಹೋಗಿದೆ. ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಸೂರು ಕಳೆದುಕೊಂಡು ಅತಂತ್ರರಾಗಿದ್ದಾರೆ. ಯಾರೂ ಮರೆಯಲಾಗದ ಕಹಿ ನೆನಪನ್ನು ಬಿಟ್ಟು ಹೋಗಿದೆ ಈ ಪ್ರವಾಹ. ಎಲ್ಲಾ ಕಡೆ ಬರೀ ನೋವು, ಕಣ್ಣೀರನ್ನು ಉಳಿಸಿ ಹೋಗಿದೆ. ಆದರೆ ಈ ಪ್ರವಾಹ ಈ ಜೋಡಿಯ ಬಾಳಲ್ಲಿ ಸಿಹಿಯನ್ನು ತಂದಿದೆ.
2018 ರ ಪ್ರವಾಹ ಸಂದರ್ಭದಲ್ಲಿ ಸಿವಿಲ್ ಪೊಲೀಸ್ ಆಫೀಸರ್ ಸೂರ್ಯ ಅಲುವಾ ಪ್ರವಾಹ ನಿರಾಶ್ರಿತರ ಕೇಂದ್ರಕ್ಕೆ ಕರ್ತವ್ಯದ ಮೇರೆಗೆ ಬರುತ್ತಾರೆ. ಅಲುವಾ ಕೇಂದ್ರಕ್ಕೆ ಅಲ್ಲಿಯ ಸ್ಥಳೀಯರಾಗಿದ್ದ ವಿನೀತ್ ಸ್ವಯಂ ಸೇವಕರಾಗಿ ಬರುತ್ತಾರೆ. ಇಬ್ಬರಿಗೂ ಪರಿಚಯವಾಗುತ್ತದೆ. ಪರಿಚಯದಿಂದ ಸ್ನೇಹವಾಗಿ ಸ್ನೇಹ ಪ್ರೀತಿಗೆ ತಿರುಗಲು ಹೆಚ್ಚು ಸಮಯ ಹಿಡಿಯಲಿಲ್ಲ.
ಕಳೆದ ವರ್ಷ ಪ್ರವಾಹದ ಸಮಯದಲ್ಲಿ ಶುರುವಾದ ಪ್ರೀತಿ ಈ ವರ್ಷದ ಪ್ರವಾಹದಲ್ಲಿ ಮದುವೆಯಾಗುವ ಮೂಲಕ ಸುಖಾಂತ್ಯವಾಗಿದೆ. ಸೂರ್ಯ-ವಿನೀತ್ 2019 ರ ಪ್ರವಾಹದ ಸಂದರ್ಭದಲ್ಲಿ ಅಲುವಾ ಅಶೋಕಪುರಂ ದುರ್ಗಾ ಭಗವತಿ ದೇವಸ್ಥಾನದಲ್ಲಿ ಆ 25 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿನೀತ್ ಅಲುವಾದಲ್ಲಿರುವ ಖಾಸಗಿ ಕೋಚಿಂಗ್ ಸೆಂಟರ್ ನಲ್ಲಿ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.