ಇಲ್ಲಿ ಮೆಟ್ರೋ ರೈಲು ನಿಲ್ಲೋದಿಲ್ಲ!

By Web DeskFirst Published Apr 3, 2019, 8:48 AM IST
Highlights

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಇಲ್ಲಿ ನಿಲ್ಲೋದಿಲ್ಲ. ಹೀಗೆಂದು ಮೆಟ್ರೋ ರೈಲು ನಿಗಮವೇ ಹೇಳಿದೆ. ಕೆ.ಆರ್‌.ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 2ನೇ ಹಂತದ ಮಾರ್ಗದಲ್ಲಿ ಕಸ್ತೂರಿ ನಗರ ನಿಲ್ದಾಣವನ್ನು ಕೈ ಬಿಡಲು ತೀರ್ಮಾನಿಸಲಾಗಿದೆ. 

ಬೆಂಗಳೂರು :  ಕೆ.ಆರ್‌.ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 2ನೇ ಹಂತದ ಮೆಟ್ರೋ ರೈಲು ಮಾರ್ಗದ ಕಸ್ತೂರಿ ನಗರ ಮೆಟ್ರೋ ನಿಲ್ದಾಣ ಕೈಬಿಡಲು ನಿರ್ಧಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿ)ದ ಮೂಲಗಳು ತಿಳಿಸಿವೆ.

2ನೇ ಹಂತದ ಮೆಟ್ರೋ ರೈಲು ಮಾರ್ಗದಲ್ಲಿ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌.ಪುರಂ ನಡುವೆ (2ಎ ಹಂತದಲ್ಲಿ) 13 ಮೆಟ್ರೋ ನಿಲ್ದಾಣಗಳನ್ನು ಮತ್ತು ಕೆ.ಆರ್‌.ಪುರಂನಿಂದ ಹೆಬ್ಬಾಳ ಮಾರ್ಗದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (38 ಕಿ.ಮೀ.)ಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ(2ಬಿ)ದಲ್ಲಿ 17 ಮೆಟ್ರೋ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು.

2ಬಿ ಹಂತದ ಮೆಟ್ರೋ ರೈಲು ಮಾರ್ಗದಲ್ಲಿ ಕೆ.ಆರ್‌.ಪುರಂ, ಚನ್ನಸಂದ್ರ, ಹೊರಮಾವು, ಕಲ್ಯಾಣ ನಗರ, ಬಾಣಸವಾಡಿ, ಎಚ್‌ಬಿಆರ್‌ ಲೇಔಟ್‌, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ ಕ್ರಾಸ್‌, ಹೆಬ್ಬಾಳ, ಕೊಡಿಗೆಹಳ್ಳಿ, ಜಕ್ಕೂರು, ಯಲಹಂಕ, ಚಿಕ್ಕಜಾಲ, ಕೋಗಿಲು ಕ್ರಾಸ್‌, ಪೆರಿಫೆರಲ್‌ ರಿಂಗ್‌ ರಸ್ತೆ, ಟ್ರಂಪೆಟ್‌ ಇಂಟರ್‌ಚೇಂಜ್‌ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು (ಸುರಂಗ) ನಿಲ್ದಾಣಗಳು ಸೇರಿದಂತೆ ಒಟ್ಟು 17 ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು.

ಕೆ.ಆರ್‌.ಪುರಂನಿಂದ ಹೆಬ್ಬಾಳದವರೆಗೆ ಪ್ರತಿ 1.4 ಕಿ.ಮೀ. ಅಂತರದಲ್ಲಿ ಒಂದು ಮತ್ತು ಕೋಗಿಲು ಕ್ರಾಸ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 4 ಕಿ.ಮೀ. ಅಂತರದಲ್ಲಿ ಒಂದರಂತೆ ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಈ ನಡುವೆ ಜಾಗದ ಕೊರತೆಯಿಂದಾಗಿ ಕಸ್ತೂರಿನಗರ ಮೆಟ್ರೋ ನಿಲ್ದಾಣವನ್ನು ಕೈಬಿಡಲು ಮೆಟ್ರೋ ನಿಗಮ ತೀರ್ಮಾನ ಕೈಗೊಂಡಿದೆ ಎನ್ನಲಾಗಿದ್ದು, ಚನ್ನಸಂದ್ರ, ಹೊರಮಾವು ಮತ್ತು ಕಸ್ತೂರಿ ನಗರದಲ್ಲಿ ಇನ್ನೂ ಜಾಗ ಖರೀದಿ ಮಾಡಬೇಕಿದ್ದು, ಅದು ಯಾವ ಹಂತದಲ್ಲಿದೆ ಎಂಬುದನ್ನು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳು ಇನ್ನೂ ಖಚಿತ ಪಡಿಸಿಲ್ಲ.

ಹೆಬ್ಬಾಳ- ಯಲಹಂಕ ಮಾರ್ಗವಾಗಿ ಬರುವ ಮೆಟ್ರೋ ರೈಲು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸುವ ಮುನ್ನ ಟ್ರಂಪೆಟ್‌ ಇಂಟರ್‌ಚೇಂಜ್‌ನಲ್ಲಿ ನಿಲುಗಡೆಯಾಗಲಿದೆ. ಇದು ದೇವನಹಳ್ಳಿ ಕಡೆಗೆ ಮತ್ತು ಇತರ ಕಡೆಗಳಿಗೆ ಪ್ರಯಾಣಿಕರು ತೆರಳಲು ಅನುಕೂಲವಾಗಲಿದೆ. ಬಿಎಂಆರ್‌ಸಿಎಲ್‌ ಈ ಎಲಿವೇಟೆಡ್‌ ಮಾರ್ಗ ನಿರ್ಮಾಣಕ್ಕಾಗಿ ಸುಮಾರು .16,579 ಕೋಟಿ ಖರ್ಚು ಮಾಡಲಿದೆ. ಈ ಯೋಜನೆಯು 2023ಕ್ಕೆ ಪೂರ್ಣಗೊಳ್ಳಲಿದೆ ಎಂದು ಮೆಟ್ರೋ ನಿಗಮ ಮಾಹಿತಿ ನೀಡಿದೆ.

ಭೂಮಿ ಹಸ್ತಾಂತರ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗ ನಿರ್ಮಿಸಲು ಅಗತ್ಯವಾದ 1.05 ಲಕ್ಷ ಚದರ ಮೀಟರ್‌ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಿದೆ. ಅದಕ್ಕಾಗಿ ಮೆಟ್ರೋ .141 ಕೋಟಿ ಪಾವತಿಸಬೇಕಿದೆ. 2008ರಲ್ಲಿ ಹೈಸ್ಪೀಡ್‌ ರೈಲು ಯೋಜನೆಗಾಗಿ ಬಳ್ಳಾರಿ ರಸ್ತೆಯ ಹೆಬ್ಬಾಳದ ಕೆಂಪಾಪುರದಲ್ಲಿರುವ ಎಸ್ಟೀಮ್‌ ಮಾಲ್‌ನಿಂದ ಟ್ರಂಪೆಟ್‌ ಜಂಕ್ಷನ್‌ವರೆಗೆ 1.05 ಲಕ್ಷ ಚ.ಮೀ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿತ್ತು ಎಂದು ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯೋಜನೆಯೇ ಸರಿ ಇಲ್ಲ

ಕೆ.ಆರ್‌.ಪುರಂ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 2ಬಿ ಹಂತದ ಮೆಟ್ರೋ ಯೋಜನೆ ಸಮರ್ಪಕವಾಗಿಲ್ಲ. ಈ ಮಾರ್ಗದಲ್ಲಿ ಗ್ಯಾಸ್‌ಪೈಪ್‌ಲೈನ್‌, ಕಾವೇರಿ ಕುಡಿಯುವ ನೀರಿನ ಪೈಪ್‌ಲೈನ್‌, ಫ್ಲೈ ಓವರ್‌, ಅಂಡರ್‌ಪಾಸ್‌ ಹೀಗೆ ಸಾಕಷ್ಟುಅಡೆತಡೆಗಳು ಇವೆ. ಬಿಎಂಆರ್‌ಸಿಎಲ್‌ ತಜ್ಞರಿಂದ ಅಧ್ಯಯನ ನಡೆಸಿ ಸಮರ್ಪಕ ಯೋಜನೆ ರೂಪಿಸಬೇಕು. ಮುಖ್ಯವಾಗಿ ಈ ಮಾರ್ಗದಲ್ಲಿ ಐಟಿಬಿಟಿ ಸೇರಿದಂತೆ ಸಾಕಷ್ಟುಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಜನದಟ್ಟಣೆಯೂ ಇದ್ದು, ಆರಂಭದಲ್ಲಿಯೇ 9 ಬೋಗಿಗಳ ಮೆಟ್ರೋ ರೈಲು ಚಲಿಸಲು ಅನುಕೂಲವಾಗುವಂತೆ ಯೋಜನೆ ಮಾಡಿದರೆ ಅನುಕೂಲ. ಅಲ್ಲದೇ ಜಾಗದ ಕೊರತೆ ಹಿನ್ನೆಲೆಯ ಸಬೂಬು ಹೇಳುವ ಬದಲು ಅಗತ್ಯಕ್ಕೆ ತಕ್ಕಂತೆ ಭೂಮಿ ಪಡೆದು ಯೋಜನೆ ಕಾಮಗಾರಿ ಆರಂಭಿಸಬೇಕು

-ಸಂಜೀವ್‌ ದ್ಯಾಮಣ್ಣವರ್‌, ಸಾಮಾಜಿಕ ಕಾರ್ಯಕರ್ತ.

click me!