ಕಾವೇರಿಗೆ ನಿರ್ಮಾಣವಾಗಲಿದೆ ಮತ್ತೊಂದು ಅಣೆಕಟ್ಟು

By Web DeskFirst Published Aug 10, 2018, 7:58 AM IST
Highlights

ಶೀಘ್ರದಲ್ಲೇ ಕಾವೇರಿ ನದಿಗೆ ಮತ್ತೊಂದು ಅಣೆಕಟ್ಟು ನಿರ್ಮಾಣಕ್ಕೆ ಈಗಾಗಲೇ ಸರ್ಕಾರ ನಿರ್ಧಾರ ಮಾಡಿದ್ದು ಈ ನಿಟ್ಟಿನಲ್ಲಿ ಈ ನಿಟ್ಟಿನಲ್ಲಿ ರೈತರೊಂದಿಗೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. 

ಬೆಂಗಳೂರು :  ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ಸಂಬಂಧ ಈಗಾಗಲೇ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಸದ್ಯದಲ್ಲೇ ತಮಿಳುನಾಡು ಮುಖ್ಯಮಂತ್ರಿ ಹಾಗೂ ಅಲ್ಲಿನ ರೈತ ಮುಖಂಡರೊಂದಿಗೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಮಳೆಯಾದಾಗ ಸಾಕಷ್ಟುಪ್ರಮಾಣದ ನೀರು ವೃಥಾ ಸಮುದ್ರಕ್ಕೆ ಹರಿಯುತ್ತಿದೆ. ಪ್ರಸ್ತುತ ಗುರುವಾರ ಮಧ್ಯಾಹ್ನ ಕಬಿನಿಯಿಂದ 71 ಸಾವಿರ ಕ್ಯೂಸೆಕ್‌ ನೀರು ಹೊರಬಿಡಲಾಗಿದೆ. ಕೆಆರ್‌ಎಸ್‌ನಿಂದಲೂ ಶುಕ್ರವಾರದಿಂದ 55 ಸಾವಿರ ಕ್ಯೂಸೆಕ್‌ ನೀರು ಹೊರಬಿಡಬೇಕಾಗುತ್ತದೆ. ಉತ್ತಮ ಮಳೆಯಿದಾಗಿ ತಮಿಳುನಾಡಿಗೆ ಮುಂದಿನ ಏಪ್ರಿಲ್‌ವರೆಗೆ ನೀಡಬೇಕಾಗಿದ್ದ ನೀರೆಲ್ಲಾ ಒಮ್ಮೆಲೇ ಹರಿಯುತ್ತಿದೆ.

ಈ ನೀರನ್ನು ತಮಿಳುನಾಡಿನವರೂ ಸಹ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಿ ನೀರು ಶೇಖರಣೆ ಮಾಡಿಕೊಂಡರೆ ತಮಿಳುನಾಡು ರಾಜ್ಯದವರಿಗೆ ಅಗತ್ಯವಿದ್ದಾಗ ನೀರು ಬಿಡಲು ನೆರವಾಗುತ್ತದೆ. ನಮ್ಮ ಹಣದಲ್ಲಿ ಅಣೆಕಟ್ಟು ನಿರ್ಮಿಸಿ ಅವರಿಗೆ ನೀರು ಬಿಡುತ್ತೇವೆ ಎಂದರೂ ಅಡ್ಡಿಪಡಿಸುವುದು ಸರಿಯಲ್ಲ. ಈಗಾಗಲೇ ಯೋಜನೆ ಬಗ್ಗೆ ನಿತಿನ್‌ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದೇನೆ. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಕೂಡ ಚರ್ಚೆ ನಡೆಸಿದ್ದಾರೆ. ಇದರ ಬಗ್ಗೆ ಖುದ್ದು ನಾನೇ ತಮಿಳುನಾಡಿನ ಪ್ರಮುಖ ರೈತ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸುತ್ತೇನೆ. ಅವರ ಮನವೊಲಿಸಿ ಸದ್ಯದಲ್ಲೇ ಯೋಜನೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

click me!