
ಬೆಂಗಳೂರು : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ನಿಧನರಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ತಮಿಳುನಾಡು ರಾಜ್ಯ ಸಾರಿಗೆ ನಿಗಮಗಳ ಬಸ್‌ಗಳ ಕಾರ್ಯಾಚರಣೆ ಮಂಗಳವಾರ ಸಂಜೆಯಿಂದಲೇ ಸಂಪೂರ್ಣ ಸ್ಥಗಿತಗೊಂಡಿದೆ.
ಎರಡೂ ರಾಜ್ಯಗಳ ನಡುವೆ ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ನಗರದ ಶಾಂತಿನಗರ ಮತ್ತು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಸಂಜೆ ತಮಿಳುನಾಡಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಬಸ್ ಸಿಗದೆ ಸಂಕಷ್ಟಕ್ಕೆ ಸಿಲುಕಿದರು. ಕೋರಮಂಗಲ, ಸಿಲ್ಕ್‌ಬೋರ್ಡ್, ಹೆಬ್ಬಗೋಡಿ, ಆನೇಕಲ್ ಗಡಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಎರಡು ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತಗೊಂಡ ವಿಚಾರ ತಿಳಿದು ನಿರಾಸೆ ಅನುಭವಿಸಿದರು.
ಕೆಎಸ್‌ಆರ್‌ಟಿಸಿ ನಿಗಮದ ವ್ಯಾಪ್ತಿಯ ವಿಭಾಗಗಳಿಂದ ನಿತ್ಯ ತಮಿಳುನಾಡಿಗೆ 432 ಬಸ್‌ಗಳು ಸಂಚರಿಸುತ್ತವೆ. ಈ ಪೈಕಿ ಚೆನ್ನೈಗೆ 87 ಬಸ್‌ಗಳು ಸಂಚರಿಸುತ್ತವೆ. ಇದರಿಂದ ನಿಗಮಕ್ಕೆ ನಿತ್ಯ 61.71 ಲಕ್ಷ ರು. ಆದಾಯ ಬರುತ್ತಿದೆ. ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಕರ್ನಾಟಕದ ಬಸ್‌ಗಳಿಗೆ ತೊಂದರೆಯಾಗಬಹುದು ಎಂಬ ನಿರೀಕ್ಷೆಯಿಂದ ಸಂಜೆ 6.30ಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ರಾಜ್ಯದ ಬಸ್‌ಗಳಿಗೆ ಪೊಲೀಸ್ ಭದ್ರತೆ: ರಾಜ್ಯದಿಂದ ಮಂಗಳವಾರ ಬೆಳಗ್ಗೆ ಮತ್ತು ಮಧ್ಯಾಹ್ನ ತಮಿಳುನಾಡಿಗೆ ತೆರಳಿರುವ ಬಸ್‌ಗಳು ಅಲ್ಲಿನ ನಿಲ್ದಾಣಗಳಲ್ಲೇ ಸಂಚಾರ ಸ್ಥಗಿತಗೊಳಿಸಿವೆ. ಅವುಗಳಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.