ರಾಜೀನಾಮೆ ನೀಡಿದ ಶಂಕರ್‌ಗೆ ಮತ್ತೊಂದು ಸಂಕಷ್ಟ

By Web DeskFirst Published Jul 17, 2019, 9:37 AM IST
Highlights

ಕರ್ನಾಟಕ ರಾಜಕೀಯ ಸ್ಥಿತಿ ಡೋಲಾಯಮಾನವಾಗಿದೆ. ಇದೇ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರಳಿರುವ ಶಾಸಕ ಶಂಕರ್ ಗೆ ಇದೀಗ ಸಂಕಷ್ಟ ಎದುರಾಗಿದೆ. 

ಬೆಂಗಳೂರು [ಜು.17] :  ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅತೃಪ್ತರ ಬಣ ಸೇರಿರುವ ಪಕ್ಷೇತರ ಶಾಸಕ ಆರ್‌.ಶಂಕರ್‌ ವಿರುದ್ಧ ವಿಧಾನಸಭೆಯ ಸಭಾಧ್ಯಕ್ಷರಿಗೆ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಹಾಗೂ ಪಕ್ಷದ ಸಂಸ್ಥಾಪಕ ಮಹೇಶ್‌ ಗೌಡ ದೂರು ನೀಡಿದ್ದಾರೆ. ಮಂಗಳವಾರ ಸಭಾಧ್ಯಕ್ಷರ ಕಚೇರಿಗೆ ತೆರಳಿ ಮಹೇಶ್‌ ಗೌಡ ಅವರು ಪಕ್ಷದ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ದೂರು ದಾಖಲಿಸಿದರು.

ಪಕ್ಷದ ವತಿಯಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ರಾಣೆಬೆನ್ನೂರು ಕ್ಷೇತ್ರದ ಶಾಸಕ ಆರ್‌.ಶಂಕರ್‌ ಪಕ್ಷದ ನಿಯಮವನ್ನು ಉಲ್ಲಂಘಿಸಿದ್ದಾರೆ. ಗುರುವಾರ ನಡೆಯುವ ವಿಶ್ವಾಸ ಮತಯಾಚನೆಗೆ ಬೆಂಬಲ ಸೂಚಿಸುವುದಾಗಲಿ ಅಥವಾ ಸೂಚಿಸದಿರುವುದಾಗಲಿ ಏಕಾಂಗಿಯಾಗಿ ನಿರ್ಧಾರ ಕೈಗೊಳ್ಳಬಾರದು. ಪಕ್ಷದ ಅನುಮತಿ ಪಡೆಯದೆ ಯಾವುದೇ ತೀರ್ಮಾನ ಕೈಗೊಳ್ಳಬಾರದು. ಅಲ್ಲದೇ, ಪಕ್ಷದ ಗಮನಕ್ಕೆ ತಾರದೆ ಕಾಂಗ್ರೆಸ್‌ ಜತೆ ನಮ್ಮ ಪಕ್ಷವನ್ನು ವಿಲೀನ ಮಾಡಿದ್ದಾರೆ. ವಿಲೀನ ಕುರಿತು ಸಭಾಧ್ಯಕ್ಷರಿಗೆ ಪತ್ರ ಬರೆಯುವುದು ಸರಿಯಲ್ಲ. ಅದನ್ನು ಮಾನ್ಯ ಮಾಡಬಾರದು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇಂದು ಪಕ್ಷದ ಕಾರ್ಯಕಾರಿಣಿ ಸಭೆ ನಡೆಯಲಿದೆ. ವಿಶ್ವಾಸ ಮತಯಾಚನೆ ದಿನದಂದು ಬೆಂಬಲ ನೀಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಶಂಕರ್‌ ಅವರು ಸದನದಲ್ಲಿ ಬೆಂಬಲ ಸೂಚಿಸುವ ಮುನ್ನ ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಬೇಕು. ಅಲ್ಲದೇ, ಈ ಬಗ್ಗೆ ಅವರ ಗಮನಕ್ಕೆ ತರಬೇಕು. ಒಂದು ವೇಳೆ ಪಕ್ಷದ ನಿರ್ಧಾರವನ್ನು ಪಾಲನೆ ಮಾಡದಿದ್ದರೆ ಪಕ್ಷದ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ. ಬುಧವಾರ ಸಂಜೆ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಲ್ಲೇಖ ಮಾಡಲಾಗಿದೆ.

ಸಭಾಧ್ಯಕ್ಷರ ಕಚೇರಿಗೆ ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಂಕರ್‌ ಅವರು ಬಾಹ್ಯ ಬೆಂಬಲ ನೀಡಿದ್ದು ಅವರ ವೈಯಕ್ತಿಕ ವಿಚಾರ. ಆದರೆ, ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನ ಮಾಡುವ ಕುರಿತು ಪಕ್ಷದ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿಲ್ಲ. ಬುಧವಾರ ಸಂಜೆ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಿ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದರ ಕುರಿತು ತೀರ್ಮಾನಿಸಲಾಗುವುದು ಎಂದು ಹೇಳಿದರು.

ಜಿಲ್ಲಾ, ರಾಜ್ಯ ಕಾರ್ಯಕಾರಿಣಿಯ ಸಭೆಯಲ್ಲಿ ಚರ್ಚಿಸಿ ನಂತರ ವಿಲೀನ ಮಾಡಬೇಕು. ಆದರೆ, ಶಂಕರ್‌ ಅವರು ಯಾವುದೇ ರೀತಿಯ ಚರ್ಚೆ ನಡೆಸದೆ ವಿಲೀನ ಮಾಡಿರುವ ಬಗ್ಗೆ ಸಭಾಧ್ಯಕ್ಷರಿಗೆ ಪತ್ರ ಬರೆದಿರುವುದು ಸರಿಯಲ್ಲ. ಅದನ್ನು ಮಾನ್ಯ ಮಾಡದಿರುವಂತೆ ದೂರು ನೀಡಲಾಗಿದೆ ಎಂದರು.

click me!