
ಉಡುಪಿ/ಮೂಲ್ಕಿ[ಜು.15]: ಶಾಸಕರ ರಾಜೀನಾಮೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರವನ್ನು ಉಳಿಸುವಂತೆ ಪ್ರಾರ್ಥಿಸಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಆರಂಭಿಸಿರುವ ‘ಟೆಂಪಲ್ ರನ್’ ಭಾನುವಾರವೂ ಮುಂದುವರಿದಿದೆ.
ಕೆಲ ದಿನಗಳ ಹಿಂದೆಯಷ್ಟೇ ರೇವಣ್ಣ ತಿರುಪತಿ, ಆ ಬಳಿಕ ಚಾಮುಂಡಿಬೆಟ್ಟ, ಬೆಂಗಳೂರಿನ ಬಸವನಗುಡಿ, ಶೃಂಗೇರಿ ಸೇರಿ ವಿವಿಧ ದೇವಸ್ಥಾನಗಳಿಗೆ ಎಡತಾಕಿದ್ದರು. ಆದರೆ, ಭಾನುವಾರ ಇಡೀ ದಿನ ಬೆಳಗ್ಗೆಯಿಂದ ರಾತ್ರಿವರೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಆರು ದೇವಸ್ಥಾನಗಳಿಗೆ ರೇವಣ್ಣ ಭೇಟಿ ನೀಡಿದ್ದಾರೆ.
ಉಡುಪಿಯ ಆನೆಗುಡ್ಡೆ, ಹಟ್ಟಿಯಂಗಡಿ ವಿನಾಯಕ ದೇವಸ್ಥಾನ, ಆ ಬಳಿಕ ಕೊಲ್ಲೂರು, ಆನೆಗುಡ್ಡೆ, ಕಟೀಲು, ಸೌತಡ್ಕ ದೇವಸ್ಥಾನಗಳಿಗೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬೈಯ್ಯುತ್ತಲೇ ಪ್ರದಕ್ಷಿಣೆ!
ಕಟೀಲು ದೇವಸ್ಥಾನಕ್ಕೆ ಲಿಂಬೆ ಹಣ್ಣಿನ ಸಮೇತ ಮಧ್ಯಾಹ್ನ 3 ಗಂಟೆಗೆ ಬಂದ ಸಚಿವ ರೇವಣ್ಣ, ಇದ್ದದ್ದು ಕೇವಲ ಹತ್ತು ನಿಮಿಷ. ದೇವಸ್ಥಾನದೊಳಗೆ ಒಂದು ಪ್ರದಕ್ಷಿಣೆ ಬಂದು ಪ್ರಸಾದ ಸ್ವೀಕರಿಸಲು ಒಟ್ಟು ಆರು ನಿಮಿಷ. ಈ ಸಂದರ್ಭ ದೇವರಲ್ಲಿ ಪ್ರಾರ್ಥಿಸಿದ್ದಕ್ಕಿಂತ ಹೆಚ್ಚು ಪತ್ರಕರ್ತರಿಗೆ ಬೈದದ್ದೇ ಕಂಡು ಬಂತು!
ಸಚಿವರು ದೇವಸ್ಥಾನದಲ್ಲಿ ಪ್ರದಕ್ಷಿಣೆ ಬಂದು ಪ್ರಸಾದ ಸ್ವೀಕರಿಸುವುದನ್ನು ಮಾಧ್ಯಮ ಪ್ರತನಿಧಿಗಳು ಚಿತ್ರೀಕರಿಸುತ್ತಿದ್ದಂತೆ, ‘ಫೋಟೋ ತೆಗೆಯಬೇಡ, ಚಿತ್ರೀಕರಿಸಬೇಡ’ ಎಂದು ಗದರಿದರು. ‘ನಾಚಿಕೆಯಾಗಲ್ವ? ಹೇಳಿದ್ದು ಅರ್ಥವಾಗಲ್ವಾ?’ ಎಂದು ಪತ್ರಕರ್ತರಿಗೆ ಬೈಯ್ಯುತ್ತಲೇ ಪ್ರದಕ್ಷಿಣೆ ಬಂದ ಸಚಿವ ರೇವಣ್ಣ, ಪ್ರಸಾದ ಸ್ವೀಕರಿಸುವ ಹಂತದಲ್ಲೂ ಬೈಯ್ಯುತ್ತಿದ್ದರು. ಜೊತೆಗಿದ್ದ ಪೊಲೀಸರಿಗೂ ‘ಫೋಟೋ ತೆಗೆಯದಂತೆ ನೋಡಿಕೊಳ್ಳಿ’ ಎಂದು ಸೂಚನೆ ನೀಡಿದರು.
ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬೆಳಗ್ಗೆ 11ಕ್ಕೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ತಲುಪಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ 11.15ಕ್ಕೆ ಹಟ್ಟಿಯಂಗಡಿ ಸಿದ್ಧಿವಿನಾಯಕ ದೇಗುಲಕ್ಕೆ ಹಾಗೂ 11.30ಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ 3ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ, ಸಂಜೆ 5.30ಕ್ಕೆ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ, 6.30ಕ್ಕೆ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿದರು.
ಡಾ.ಹೆಗ್ಗಡೆ ಭೇಟಿ: ಸಂಜೆ 5.30ಕ್ಕೆ ಧರ್ಮಸ್ಥಳಕ್ಕೆ ಆಗಮಿಸಿದ ಸಚಿವ ರೇವಣ್ಣ, ಮೊದಲಿಗೆ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಕೊಂಚ ಕಾಲ ವಿಶ್ರಾಂತಿ ಪಡೆದ ನಂತರ ಶ್ರೀ ಮಂಜುನಾಥ ಸ್ವಾಮಿ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ದಿನದ ಕೊನೆಗೆ ಬಯಲು ಆಲಯ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಸೌತಡ್ಕದಲ್ಲಿ ಶ್ರೀ ಗಣಪತಿ ದೇವರ ದರ್ಶನ ಮಾಡಿ ಬೆಂಗಳೂರಿಗೆ ಪ್ರಯಾಣಸಿದರು.
ಎಲ್ಲವೂ ದೇವರಿಗೆ ಬಿಟ್ಟದ್ದು
ಸಚಿವ ರೇವಣ್ಣ ದೇವಾಲಯಗಳಿಗೆ ಭೇಟಿ ನೀಡುವುದಕ್ಕೆ ಮೊದಲು ಯಾವುದೇ ಮಾಹಿತಿ ನೀಡಿರಲಿಲ್ಲ, ಮಾತ್ರವಲ್ಲ ಜಿಲ್ಲೆಯ ಜೆಡಿಎಸ್ ನಾಯಕರಿಗೂ ಯಾವುದೇ ಸೂಚನೆ ನೀಡದೇ ಏಕಾಏಕಿ ಅವರು ತಮ್ಮ ಕೆಲವು ಆಪ್ತರೊಂದಿಗೆ ಬಂದಿದ್ದರು. ಎಲ್ಲಾ ಕಡೆಗಳಲ್ಲೂ ಮಾಧ್ಯಮದವರನ್ನು ದೂರವಿರಿಸಲಾಗಿತ್ತು. ದೇವಾಲಯದ ಛಾಯಾಚಿತ್ರಗ್ರಾಹಕರಿಗಾಗಲಿ ಅಥವಾ ಹೊರಗಿನವರಿಗಾಗಲಿ ಮೊಬೈಲ್‌ಗಳಲ್ಲಿ ಫೋಟೋ ತೆಗೆಯುವುದಕ್ಕೂ ಪೊಲೀಸರು ಅವಕಾಶ ನೀಡಲಿಲ್ಲ. ಧರ್ಮಸ್ಥಳದಲ್ಲಿ ಮಾತ್ರ ಮಾಧ್ಯಮದವರು ಸರ್ಕಾರದ ಆಡಳಿತದ ಬಗ್ಗೆ ಪ್ರಸ್ತಾಪಿಸಿದಾಗ, ‘ದೇವರು ಕೊಟ್ಟದನ್ನು ದೇವರೇ ಉಳಿಸಿ ಕೊಡುತ್ತಾರೆ. ಎಲ್ಲವೂ ದೇವರಿಗೆ ಬಿಟ್ಟದ್ದು’ ಎಂದಷ್ಟೇ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.