ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದ ಮೈತ್ರಿ ಸರ್ಕಾರ ಪತನವಾಗಿದೆ. ಇದರೊಂದಿಗೆ ಜೆಡಿಎಸ್ ಕಾಂಗ್ರೆಸ್ ಮೈತ್ರಿಯೂ ಕೊನೆಯಾದಂತಾಗಿದೆ.
ಬೆಂಗಳೂರು [ಜು.24] : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಪತನವಾಗುವುದರೊಂದಿಗೆ ಕಳೆದ 14 ತಿಂಗಳಿನಿಂದ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿಯೂ ಒಂದು ಹಂತಕ್ಕೆ ಕೊನೆಗೊಂಡಂತಾಗಿದ್ದು, ರಾಜಕಾರಣದಲ್ಲಿ ಮತ್ತೆ ಬದ್ಧ ವೈರತ್ವ ಮತ್ತೆ ಮರುಕಳಿಸಲಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದ ಹಿನ್ನೆಲೆಯಲ್ಲಿ ಜತೆಗೂಡಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ರೂಪುಗೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವು ಉಭಯ ಪಕ್ಷಗಳ ನಾಯಕರ ನಡುವಿನ ವೈರುದ್ಧ್ಯದ ನಡುವೆಯೇ 14 ತಿಂಗಳು ಕಾರ್ಯನಿರ್ವಹಿಸಿತ್ತು. ಇದೀಗ ಮೈತ್ರಿ ಸರ್ಕಾರ ಅಧಿಕೃತವಾಗಿ ಪತನಗೊಂಡಿದೆ. ಇದರ ಪರಿಣಾಮ ಮೈತ್ರಿ ಕೂಟದ ಮೇಲೂ ಆಗಲಿದೆ.
ಶೀಘ್ರವೇ ರಚನೆಗೊಳ್ಳಲಿರುವ ಬಿಜೆಪಿ ಸರ್ಕಾರದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸುವ ವಿಷಯದಲ್ಲಿ ಈ ಮೈತ್ರಿ ಇನ್ನು ಮುಂದೆಯೂ ಜೀವಂತವಿರಬಹುದಾದರೂ ಕಣ ರಾಜಕಾರಣದಲ್ಲಿ ಈ ಮೈತ್ರಿ ಇನ್ನೂ ಜೀವಂತವಿರುವುದು ಕಷ್ಟ.
ಜೆಡಿಎಸ್ ಜತೆ ಮೈತ್ರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರೋಧ ಆರಂಭದಿಂದಲೂ ಇತ್ತು. ಆದರೆ, ಹೈಕಮಾಂಡ್ ಒತ್ತಾಯದ ಪರಿಣಾಮವಾಗಿ ಮೈತ್ರಿಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವ ಸ್ಥಿತಿಯಿತ್ತು. ಈ ಮೈತ್ರಿಯು ನೀಡಿದ ಒಳ ಏಟಿನ ಪರಿಣಾಮವನ್ನು ಕಾಂಗ್ರೆಸ್ ಲೋಕಸಭಾ ಚುನಾವಣೆ ವೇಳೆ ಅನುಭವಿಸಿತ್ತು. ಅಲ್ಲದೆ, ಕಾಂಗ್ರೆಸ್ ಶಾಸಕರು ಸಹ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ನಾಯಕರು ಕ್ಷೇತ್ರದಲ್ಲಿ ತಮ್ಮ ಪಕ್ಷದ ಪರಾಜಿತ ಅಭ್ಯರ್ಥಿಗೆ ಸರ್ಕಾರದಿಂದ ಹೆಚ್ಚಿನ ನೆರವು ನೀಡುತ್ತಿದ್ದಾರೆ ಎಂದು ದೂರುತ್ತಿದ್ದರು.
ಇದೀಗ ಮೈತ್ರಿ ಅಂತ್ಯಗೊಂಡಿರುವುದರಿಂದ ಕ್ಷೇತ್ರದ ಮಟ್ಟದಲ್ಲಿ ಅದರಲ್ಲೂ ಹಳೆ ಮೈಸೂರು ಭಾಗದ ವಿಧಾನಸಭಾ ಕ್ಷೇತ್ರಗಳ ಮಟ್ಟಿಗೆ ಬದ್ಧ ವೈರತ್ವಕ್ಕೆ ಮತ್ತೆ ಚಾಲನೆ ದೊರೆಯಲಿದೆ. ಈ ಭಾಗದಲ್ಲಿ ಉಭಯ ಪಕ್ಷಗಳು ಪರಸ್ಪರ ವಿರುದ್ಧ ನಿಂತೇ ತಮ್ಮ ಪಕ್ಷವನ್ನು ಕಟ್ಟಬೇಕಾದ ಕೆಲಸ ಮಾಡಬೇಕಿದೆ.
ಆದರೆ, ಬಿಜೆಪಿ ವಿರುದ್ಧ ಹೋರಾಟದಲ್ಲಿ ಸದನದ ಒಳಗೆ ಹಾಗೂ ಹೊರಗೆ ಉಭಯ ಪಕ್ಷಗಳು ವಿಷಯಾಧಾರಿತ ಮೈತ್ರಿಯನ್ನು ಇನ್ನು ಮುಂದೆಯೂ ಜೀವಂತವಿಟ್ಟುಕೊಳ್ಳಬಹುದು. ವಿಧಾನಮಂಡಲ ಅಧಿವೇಶನಗಳ ವೇಳೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಪ್ರಸಂಗಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಒಗ್ಗೂಡಿ ಕೆಲಸ ಮಾಡಬಹುದು.