ಕೊಡಗು ನೆರೆ ಸಂದರ್ಭದಲ್ಲಿ ಸುವರ್ಣ ನ್ಯೂಸ್ ನಡೆಸಿದ ಅಭಿಯಾನದಲ್ಲಿ ಕೈ ಜೋಡಿಸಿ ಹೃದಯ ವೈಶಾಲ್ಯತೆ ಮೆರೆದ ಜನರು ಮತ್ತೊಮ್ಮೆ ತಮ್ಮ ನೆರವಿನ ಹಸ್ತ ಚಾಚಬೇಕಿದೆ. ನಗದು ಹಾಗೂ ಹಳೆ ಬಟ್ಟೆಯನ್ನು ಹೊರತುಪಡಿಸಿ ಜನರಿಗೆ ಅಗತ್ಯವಿರುವ ಬಟ್ಟೆ, ಆಹಾರ ಧಾನ್ಯ, ನೀರು ಸೇರಿ ಇತರ ಸಾಮಾಗ್ರಿಗಳನ್ನು ಸುವರ್ಣ ನ್ಯೂಸ್ ಕಚೇರಿಗೆ ತಂದು ನೀಡಬಹುದಾಗಿದೆ.
ಬೆಂಗಳೂರು(ಆ.08): ದಕ್ಷಿಣ ಕಾಶ್ಮೀರ ಎಂದೇ ಕರೆಯಲ್ಪಡುವ ಮಡಿಕೇರಿಯಲ್ಲಿ ಕಳೆದ ವರ್ಷ ಇದೇ ಸಮಯದಲ್ಲಿ ಪ್ರವಾಹ ಉಂಟಾಗಿತ್ತು. ಎಡೆಬಿಡದೆ ಸುರಿದ ಮಳೆಯಿಂದಾಗಿ ಕೊಡಗು ಜಿಲ್ಲೆ ಭೂಕುಸಿತ, ನೆರೆ, ಪ್ರವಾಹದಿಂದ ತತ್ತರಿಸಿತ್ತು. ಸಂಪೂರ್ಣ ಜಲಾವೃತಗೊಂಡು ಜನ ನಿರಾಶ್ರಿತರಾಗಿ, ತೋಟ, ಗದ್ದೆ, ಎಸ್ಟೇಟ್ ಎಲ್ಲವನ್ನೂ ಕಳೆದುಕೊಂಡಾಗ ಕರ್ನಾಟಕದ ಜನತೆ ಕೊಡಗಿನ ಜನರ ನೆರವಿಗೆ ಧಾವಿಸಿದ್ದರು. ನೀರಿನಲ್ಲಿ ಬದುಕು ಕಳೆದುಕೊಂಡವರನ್ನು ಕೈ ನೀಡಿ ಮೇಲೆತ್ತಿದ್ದರು.
ರಾಜ್ಯದ ಜನತೆ ಮತ್ತೊಮ್ಮೆ ಮಾನವೀಯತೆ ತೋರಬೇಕಾದ ಪರಿಸ್ಥಿತಿ ಕರ್ನಾಟಕದಲ್ಲಿ ಸೃಷ್ಟಿಯಾಗಿದೆ. ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಪ್ರವಾಹದಿಂದ ಜನ ತತ್ತರಿಸಿದ್ದಾರೆ. ಜೀವವನ್ನಾದರೂ ಉಳಿಸಿಕೊಳ್ಳುತ್ತೇವೆ ಎಂದು ಉಟ್ಟ ಬಟ್ಟೆಯಲ್ಲೇ ತಮ್ಮ ಊರು, ಮನೆ, ತೋಟ ಎಲ್ಲವನ್ನೂ ಬಿಟ್ಟು ಹೊರಟಿದ್ದಾರೆ.
ಕುಡಿಯಲು ನೀರು, ತಿನ್ನಲು ಆಹಾರವಿಲ್ಲದೆ ನೆರವಿಗಾಗಿ ಎದುರು ನೋಡುತ್ತಿದ್ದಾರೆ. ಕರ್ನಾಟಕದ ಮಂದಿ ಖಂಡಿತ ತಮ್ಮ ಕೈಹಿಡಿಯುತ್ತಾರೆಂಬ ಆಶಾಭಾವನೆಯಿಂದ ಕಾಯುತ್ತಿದ್ದಾರೆ. ರಾಜ್ಯದ ಜನ ಮತ್ತೊಮ್ಮೆ ಮಾನವೀಯತೆ ಮೆರೆಯಬೇಕಾದ ಸಮಯ ಇದು.
ಕಳೆದ ಬಾರಿ ಕೊಡಗು ಜಿಲ್ಲೆ ಪ್ರವಾಹದಿಂದ ತತ್ತರಿಸಿದಾಗ ಸುವರ್ಣ ನ್ಯೂಸ್ ಜನರಲ್ಲಿ ನೆರವು ಕೇಳಿ ಆಹಾರ ಸಾಮಾಗ್ರಿ, ಬಟ್ಟೆ, ನೀರು ಎಲ್ಲವನ್ನೂ ನೆರೆ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡಿತ್ತು. ಅಂದು ಕೈಗೊಂಡ ನೆರವು ಕಾರ್ಯಕ್ಕೆ ಮಹಾನಗರದ ಜನತೆ ಬಹಳ ಪ್ರೀತಿಯಿಂದ ತಮ್ಮಿಂದಾದಷ್ಟು ನೆರವು ನೀಡಿ ಮಾನವೀಯ ಕಳಕಳಿ ಮೆರೆದಿದ್ದರು. ಸುವರ್ಣ ನ್ಯೂಸ್‌ನ ನೆರವು ಕಾರ್ಯಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇದೀಗ ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವೆಡೆಯಲ್ಲಿ ನೆರೆಯಿಂದ ತತ್ತರಿಸುತ್ತಿರುವ ಜನರಿಗೆ ನೆರವಾಗಲು ಎಲ್ಲರೂ ಮತ್ತೊಮ್ಮೆ ಟೊಂಕ ಕಟ್ಟಿ ನಿಲ್ಲಬೇಕಿದೆ.
ಕರ್ನಾಟಕದಲ್ಲಿ ಭಾರೀ ಮಳೆ : ನಿಮ್ ನಿಮ್ಮ ಜಿಲ್ಲೆ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ
ಸುವರ್ಣ ನ್ಯೂಸ್ ಈ ಬಾರಿಯೂ ನೆರವು ಕಾರ್ಯಾಚರಣೆ ನಡೆಸುತ್ತಿದ್ದು, ಜನರು ನೀರು, ಆಹಾರ, ಬಟ್ಟೆ, ಬೆಡ್‌ಶೀಟ್ ಸೇರಿ ತಮ್ಮಿಂದಾಗುವ ನೆರವನ್ನು ಮಾಡಬಹುದಾಗಿದೆ. ಜನರು ಸುವರ್ಣ ನ್ಯೂಸ್ ಕಚೇರಿಗೆ ವಸ್ತುಗಳನ್ನು ತಂದು ನೀಡಬಹುದು. ನೆರೆ ಸಂತ್ರಸ್ತರಿಗೆ ಅಗತ್ಯವಿರುವ ವಸ್ತುಗಳನ್ನು ಕಚೇರಿಗೆ ತಂದು ಕೊಡಬಹುದಾಗಿದ್ದು, ಕಚೇರಿಯಿಂದ ಅದನ್ನು ನೆರೆ ಸಂತ್ರಸ್ತರಿಗೆ ತಲುಪಿಸಲಾಗುತ್ತದೆ.
ಕೊಡಗು ನೆರೆ ಸಂದರ್ಭದಲ್ಲಿ ಸುವರ್ಣ ನ್ಯೂಸ್ ನಡೆಸಿದ ಅಭಿಯಾನದಲ್ಲಿ ಕೈ ಜೋಡಿಸಿ ಹೃದಯ ವೈಶಾಲ್ಯತೆ ಮೆರೆದ ಜನರು ಮತ್ತೊಮ್ಮೆ ತಮ್ಮ ನೆರವಿನ ಹಸ್ತ ಚಾಚಬೇಕಿದೆ. ನಗದು ಹಾಗೂ ಹಳೆ ಬಟ್ಟೆಯನ್ನು ಹೊರತುಪಡಿಸಿ ಜನರಿಗೆ ಅಗತ್ಯವಿರುವ ಬಟ್ಟೆ, ಆಹಾರ ಧಾನ್ಯ, ನೀರು ಸೇರಿ ಇತರ ಸಾಮಾಗ್ರಿಗಳನ್ನು ಸುವರ್ಣ ನ್ಯೂಸ್ ಕಚೇರಿಗೆ ತಂದು ನೀಡಬಹುದಾಗಿದೆ. ಸಾಮಾಗ್ರಿಗಳನ್ನು ಸುವರ್ಣ ನ್ಯೂಸ್ ನೆರೆ ಸಂತ್ರಸ್ತರಿಗೆ ತಲುಪಿಸಲಿದೆ. 09.08.2019 ಶುಕ್ರವಾರ ಮಧ್ಯಾಹ್ನ 1 ಗಂಟೆಯ ತನಕ ಜನರು ಪರಿಹಾರ ಸಾಮಾಗ್ರಿಗಳನ್ನು ತಂದು ಕೊಡಬಹುದು.
ನಮ್ಮ ಕಚೇರಿಯ ವಿಳಾಸ:
ಸುವರ್ಣ ನ್ಯೂಸ್ ಕಚೇರಿ
ನಂ. 36, ಕ್ರೆಸೆಂಟ್ ರಸ್ತೆ, ಮಲ್ಲಿಗೆ ಆಸ್ಪತ್ರೆ ಎದುರು
ಮಾಧವ ನಗರ, ಗಾಂಧೀ ನಗರ, ಬೆಂಗಳೂರು- 560001