
ಸಚಿವರಾದವರೂ ಬೇರೆಯವರಿಗೆ ಮಾದರಿಯಾಗಿರಬೇಕು. ಆದರೆ ಏನ್ಮಾಡೋದು ನಮ್ಮ ಸಚಿವರು ಆ ಕೆಟಾಗರಿಗೆ ಸೇರೋದಿಲ್ಲ ಬಿಡಿ. ಯಾಕೆಂದರೆ ನಮ್ಮ ಕೆಲವು ಸಚಿವರು ಆರೋಗ್ಯದ ಹೆಸರಲ್ಲಿ ಲಕ್ಷ ಲಕ್ಷ ಬಿಲ್ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು ಸರ್ಕಾರವೇ ಹಣ ಭರಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮಾದರಿಯಾಗಬೇಕಿದ್ದ ಸಚಿವರು ತಾವೇ ಖಾಸಗಿ ಆಸ್ಪತ್ರೆಗಳಿಗೆ ಹೋಗಿದ್ದಾರೆ.. ಅದರ ಒಂದು ರಿಪೋರ್ಟ್ ಇಲ್ಲಿದೆ ನೋಡಿ..
ಸರ್ಕಾರಿ ಆಸ್ಪತ್ರೆಗಳು ಅಂದರೆ ಮೂಗು ಮುರಿಯೋರೇ ಹೆಚ್ಚು. ಶಾಸಕರಿಗಷ್ಟೇ ಬೇಡವಾಗಿಲ್ಲ. ನಮ್ಮ ಸಚಿವರಿಗೂ ಬೇಡವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡ್ಕೊಂಡು ಸಾಮಾನ್ಯ ಜನರಲ್ಲಿ ವಿಶ್ವಾಸ ಮೂಡಿಸಿ ಮಾದರಿ ಆಗ್ಬೇಕಿದ್ದ ಸಚಿವರೇ ಈಗ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷ ಲಕ್ಷ ಕೊಟ್ಟು ಚಿಕಿತ್ಸೆ ಪಡೆದಿದ್ದಾರೆ. ಇದೆಲ್ಲವನ್ನು ಸರ್ಕಾರ ಭರಿಸಿದೆ. ಈ ಸಚಿವರೆಲ್ಲಾ ಎಷ್ಟೆಷ್ಟು ಲಕ್ಷ ಪಾವತಿ ಮಾಡಿದಾರೆ ಅನ್ನೋ ಡೀಟೈಲ್ಸ್ ಸುವರ್ಣನ್ಯೂಸ್-ಕನ್ನಡಪ್ರಭ ಲಭ್ಯವಾಗಿದೆ.
ಎಂ.ಎಚ್.ಅಂಬರೀಶ್ ವಸತಿ ಸಚಿವರಾಗಿದ್ದ ಅವಧಿಯಲ್ಲಿ ಸಿಂಗಾಪುರ ಮತ್ತು ಬೆಂಗಳೂರಿನ ವಿಕ್ರಂ ಆಸ್ಪತ್ರೆ ಚಿಕಿತ್ಸೆ ಪಡೆದಿದ್ದು, ಇದಕ್ಕೆ 1 ಕೋಟಿ 22 ಲಕ್ಷದ 82 ಸಾವಿರ ರೂಪಾಯಿ ವೆಚ್ಚವಾಗಿದೆ, ವಿ.ಶ್ರೀನಿವಾಸ ಪ್ರಸಾದ್ ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ- ಮೈಸೂರಿನ ಇಂಡಸ್ ವ್ಯಾಲಿ ಆಯುರ್ವೇದಿಕ್ ಸೆಂಟರ್ ಪ್ರೈ.ಲಿ.ನಲ್ಲಿ ಚಿಕಿತ್ಸೆ ಪಡೆದಿದ್ದು, ಒಟ್ಟು 24.95 ಲಕ್ಷ ರೂ. ವೆಚ್ಚದ ಬಿಲ್ ಸಲ್ಲಿಸಿದ್ದಾರೆ.
ಖಮರುಲ್ ಇಸ್ಲಾಂ ಪೌರಾಡಳಿತ ಸಚಿವರಾಗಿದ್ದ ಅವಧಿಯಲ್ಲಿ ಕಲಬುರಗಿ ಜಿಲ್ಲಾ ಆಸ್ಪತ್ರೆ ಮತ್ತು ನಾರಾಯಣ ಹೃದಯಾಲಯ ಆಸ್ಪತ್ರೆ ಚಿಕಿತ್ಸೆ ಪಡೆದಿದ್ದು, 8.8 ಲಕ್ಷ ರೂ. ಬಿಲ್ ಆಗಿದೆ. ಬಾಬುರಾವ್ ಚಿಂಚನಸೂರ್ ಜವಳಿ ಸಚಿವರಾಗಿದ್ದ ಅವಧಿಯಲ್ಲಿ ಮಲ್ಯ ಮತ್ತು ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 9.55 ಲಕ್ಷ ರೂ. ವೆಚ್ಚ ಮಾಡಿದ್ದಾರೆ.
ಎ.ಮಂಜು, ಪಶು ಸಂಗೋಪನೆ, ರೇಷ್ಮೆ ಸಚಿವರಾಗಿದ್ದ ಅವಧಿಯಲ್ಲಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 89 ಸಾವಿರ ರೂ. ಬಿಲ್ ಮಾಡಿದ್ದಾರೆ. ಕೃಷ್ಣ ಭೈರೇಗೌಡ ಕೃಷಿ ಸಚಿವರಾಗಿದ್ದ ವೇಳೆಯಲ್ಲಿ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದರ ವೆಚ್ಚ 2.44 ಲಕ್ಷ ರೂ ಗಳಾಗಿದೆ.
ತೋಟಗಾರಿಕೆ ಸಚಿವರಾಗಿದ್ದ ಅವಧಿಯಲ್ಲಿ ಶಾಮನೂರು ಶಿವಶಂಕರಪ್ಪ ಸ್ಪರ್ಶ್ ಮತ್ತು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, 9.66 ಲಕ್ಷ ರೂ ಬಿಲ್ ಮಾಡಿದ್ದಾರೆ. ವಾರ್ತಾ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ರೋಷನ್ ಬೇಗ್ ಫೋರ್ಟೀಸ್, ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, 2.47 ಲಕ್ಷ ರೂ. ಬಿಲ್ ಸಲ್ಲಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಜಿಂದಾಲ್ ಮತ್ತು ಮಲ್ಲಿಗೆ ಆಸ್ಪತ್ರೆ ಚಿಕಿತ್ಸೆ ಪಡೆದಿದ್ದು, ಇದರ ಮೊತ್ತ 2.66 ಲಕ್ಷ ರೂ.ಗಳಾಗಿದೆ, ಸಕ್ಕರೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 2.1 ಲಕ್ಷ ರೂ. ವೆಚ್ಚವಾಗಿದೆ.
ಅರಣ್ಯ ಸಚಿವ ಬಿ.ರಮಾನಾಥ್ ರೈ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದಿದ್ದು, 55 ಸಾವಿರ ರೂ. ಬಿಲ್ ಸಲ್ಲಿಸಿದ್ದಾರೆ, ಹೀಗೆ ಸಚಿವರು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿರುವ ವೆಚ್ಚ ಒಟ್ಟು 1 ಕೋಟಿ 87 ಲಕ್ಷ ರೂಪಾಯಿಯನ್ನು ಸರ್ಕಾರ ಭರಿಸಿದೆ.
ಇವರಲ್ಲಿ ಹೆಚ್ಚು ವೈದ್ಯಕೀಯ ವೆಚ್ಚ ಆಗಿರೋದು ಅಂಬರೀಶ್ ಅವರಿಗೆ.. ಸಿಂಗಾಪುರ ಮತ್ತು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, 1 ಕೋಟಿ 22 ಲಕ್ಷದ 82 ಸಾವಿರ ರೂಪಾಯಿ ವೆಚ್ಚ ಮಾಡಲಾಗಿದೆ.
ರಾಜ್ಯದಲ್ಲಿ ಹಲವು ಉತ್ತಮ ಸರ್ಕಾರಿ ಆಸ್ಪತ್ರೆಗಳಿವೆ. ಸಚಿವರು ಅಂತಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು. ಜನ ಸಾಮಾನ್ಯರಿಗೆ ಸ್ಫೂರ್ತಿಯಾಗಬೇಕು. ಆದರೆ ಸಚಿವರು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿದ ಅಷ್ಟು ವೆಚ್ಚವನ್ನು ಸರ್ಕಾರ ಕೂಡಾ ಮರು ಮಾತನಾಡದೇ ಬಿಡುಗಡೆ ಮಾಡಿದೆ. ವಿಶೇಷ ಅಂದ್ರೆ ಕೆಲವು ಶ್ರೀಮಂತ ಸಚಿವರೂ ಕೂಡಾ ಸರ್ಕಾರದಿಂದ ಈ ವೆಚ್ಚವನ್ನು ಪಡೆದಿರೋದು ವಿಪರ್ಯಾಸ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.