ಸ್ಮಾರ್ಟ್‌ ಸಿಟಿ ಟೆಂಡರ್‌ : ದೇಶದಲ್ಲೇ ರಾಜ್ಯ ನಂ.1

By Web DeskFirst Published Feb 1, 2019, 11:59 AM IST
Highlights

ಸ್ಮಾರ್ಟ್ ಸಿಟಿ ಯೋಜನೆಗೆ  ಬಿಡುಗಡೆ ಮಾಡಿದ ಹಣವನ್ನು ಬಳಕೆ ಮಾಡಿರುವುದರಲ್ಲಿ ಕರ್ನಾಟಕ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ. 

ಬೆಂಗಳೂರು :  ಸ್ಮಾರ್ಟ್‌ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಬಳಕೆಯಲ್ಲಿ ರಾಜ್ಯ ಸರ್ಕಾರ ಒಂಬತ್ತನೇ ಸ್ಥಾನದಲ್ಲಿದ್ದು ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿರುವ ಕಾಮಗಾರಿಗಳ ಪೈಕಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ ಎಂದು ನಗರಾಭಿವೃದ್ದಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ- ಧಾರವಾಡ, ಶಿವಮೊಗ್ಗ, ಮಂಗಳೂರು, ತುಮಕೂರು ಹಾಗೂ ಬೆಂಗಳೂರು ನಗರಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಕಳೆದ ಏಳು ತಿಂಗಳ ಹಿಂದೆ ವಿವಿಧ ಕಾರಣಗಳಿಗಾಗಿ ಶೂನ್ಯ ಪ್ರಗತಿ ಸಾಧಿಸಿತ್ತು. 

ಇದೀಗ ಕಳೆದ ಏಳು ತಿಂಗಳಲ್ಲಿ 1,499 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಉಳಿದಂತೆ 1,407 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ಮಾಡಿ ಕಾಮಗಾರಿಗೆ ಕಾರ್ಯಾದೇಶ ನೀಡಿದ್ದೇವೆ. 2,304 ಕೋಟಿ ರು. ಮೊತ್ತದ ಕಾಮಗಾರಿಗಳು ಡಿಪಿಆರ್‌ ಹಂತದಲ್ಲಿವೆ. ಈ ಮೂಲಕ ಒಟ್ಟು 5,200 ಕೋಟಿ ರು. ಯೋಜನೆಗಳು ಪ್ರಗತಿಯಲ್ಲಿದ್ದು, ದೇಶದಲ್ಲೇ ಒಂಬತ್ತನೇ ಸ್ಥಾನ ಪಡೆದಿದೆ.

ವೈಫಲ್ಯದಿಂದ ಹೊರತಂದಿದ್ದೇವೆ:

ಕೇಂದ್ರ ಸರ್ಕಾರ 886 ಕೋಟಿ ರು. ಬಿಡುಗಡೆ ಮಾಡಿದ್ದರೂ ಕಳೆದ ಮೂರು ವರ್ಷದಲ್ಲಿ ಕೇವಲ 86.02 ಕೋಟಿ ರು. (ಶೇ.9.70) ವಿನಿಯೋಗ ಮಾಡಿ ಟೀಕೆಗೆ ಒಳಗಾಗಿದ್ದ ರಾಜ್ಯ ನಗರಾಭಿವೃದ್ಧಿ ಇಲಾಖೆಯನ್ನು ವೈಫಲ್ಯದಿಂದ ಹೊರ ತಂದಿರುವುದಾಗಿ ಅವರು ಹೇಳಿದರು.

ರಾಜ್ಯಕ್ಕೆ ಕೇಂದ್ರದ ಪಾಲು 3,500 ಕೋಟಿ ರು. ಹಾಗೂ ರಾಜ್ಯದ ಪಾಲು 3500 ಕೋಟಿ ರು. ಸೇರಿ ಏಳು ಸಾವಿರ ಕೋಟಿ ರು. ಅನುದಾನ ಒದಗಿಸಲಾಗಿದ್ದು, ಫೆಬ್ರುವರಿ ವೇಳೆಗೆ ಎಲ್ಲ ಯೋಜನೆಗಳು ಪ್ರಗತಿಗೆ ತರುತ್ತೇವೆ ಎಂದು ಹೇಳಿದರು.

ಪ್ರತಿಯೊಂದು ನಗರಕ್ಕೂ ಪ್ರತ್ಯೇಕ ಪರಿಕಲ್ಪನೆಯೊಂದಿಗೆ ಸ್ಮಾರ್ಟ್‌ ಸಿಟಿ ಯೋಜನೆ ಜಾರಿ ಮಾಡಲಾಗುತ್ತಿದೆ. ದಾವಣಗೆರೆ ಮಂಡಕ್ಕಿ ತಯಾರಿಗೆ ಖ್ಯಾತಿ ಪಡೆದಿದೆ. ಅದನ್ನು ಸಂಪ್ರದಾಯಿಕ ಪದ್ಧತಿಯಲ್ಲಿ ಬೆಂಕಿ, ಹೊಗೆ ಮಧ್ಯ ಮಾಡುವ ಬದಲು ತಂತ್ರಜ್ಞಾನ ಬಳಕೆ ಮಾಡಿಕೊಂಡು ಉನ್ನತೀಕರಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಶಿವಮೊಗ್ಗದಲ್ಲಿ ಕೆರೆ ಅಭಿವೃದ್ಧಿ, ಮಂಗಳೂರಿನಲ್ಲಿ ನದಿ ಅಭಿವೃದ್ಧಿ ಹೀಗೆ ಆಯಾ ನಗರಕ್ಕೆ ಹೊಂದುವಂತೆ ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಿದ್ದೇವೆ. ಈ ವೇಳೆ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ ಎಂದರು.

click me!