45 ವರ್ಷಗಳಲ್ಲೇ ದಾಖಲೆಯ ನಿರುದ್ಯೋಗ ವಿವಾದ

Published : Feb 01, 2019, 08:05 AM IST
45 ವರ್ಷಗಳಲ್ಲೇ ದಾಖಲೆಯ ನಿರುದ್ಯೋಗ ವಿವಾದ

ಸಾರಾಂಶ

ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‌ಎಸ್‌ಎಸ್‌ಒ)ಯ ಸೋರಿಕೆಯಾಗಿರುವ ವರದಿ ತಿಳಿಸಿದೆ.

ನವದೆಹಲಿ: ದೇಶದಲ್ಲಿ ಉದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‌ಎಸ್‌ಎಸ್‌ಒ)ಯ ಸೋರಿಕೆಯಾಗಿರುವ ವರದಿ ತಿಳಿಸಿದೆ. ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಲೀಕ್‌ ಆಗಿರುವ ಈ ವರದಿಯಿಂದಾಗಿ ಕೇಂದ್ರ ಸರ್ಕಾರಕ್ಕೆ ಮುಜುಗರವಾಗಿದ್ದರೆ, ಇದನ್ನೇ ಅಸ್ತ್ರವಾಗಿಟ್ಟುಕೊಂಡು ಕಾಂಗ್ರೆಸ್‌ ಪಕ್ಷ ಪ್ರಧಾನಿ ನರೇಂದ್ರ ಮೋದಿ ಮೇಲೆ ಮುಗಿಬಿದ್ದಿದೆ.

ವಿವಿಧ ಕಾಲಮಾನದ ಕಾರ್ಮಿಕ ಶಕ್ತಿಯ ಸಮೀಕ್ಷೆ ಇದಾಗಿದ್ದು, ಇದರ ವರದಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಆರೋಪಿಸಿ ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಸದಸ್ಯರಿಬ್ಬರು ರಾಜೀನಾಮೆ ನೀಡಿದ್ದರು. ಅದು ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿರುವಾಗಲೇ, ಸರ್ಕಾರ ತಡೆ ಹಿಡಿದಿದೆ ಎನ್ನಲಾದ ವರದಿಯನ್ನು ‘ಬಿಸಿನೆಸ್‌ ಸ್ಟಾಂಡರ್ಡ್‌’ ವಾಣಿಜ್ಯ ದೈನಿಕ ಪ್ರಕಟಿಸಿದೆ.

ದೇಶದಲ್ಲಿನ ನಿರುದ್ಯೋಗ ಪ್ರಮಾಣದ ಅಂಕಿ-ಅಂಶಗಳು 1972-73ರಿಂದ ಲಭ್ಯ ಇವೆ. 2017-18ನೇ ಸಾಲಿನಲ್ಲಿ ಕಂಡುಬಂದಿರುವ ನಿರುದ್ಯೋಗ ಪ್ರಮಾಣ ಈ ನಾಲ್ಕೂವರೆ ವರ್ಷಗಳಲ್ಲೇ ಇರಲಿಲ್ಲ. 2017-18ನೇ ಸಾಲಿನಲ್ಲಿ ದೇಶದ ನಿರುದ್ಯೋಗ ಪ್ರಮಾಣ ಶೇ.6.1ರಷ್ಟಿದೆ. 2011-12ರಲ್ಲಿ ಇದು ಶೇ.2.2ರಷ್ಟಿತ್ತು ಎಂದು ಎನ್‌ಎಸ್‌ಎಸ್‌ಒ ವರದಿಯಲ್ಲಿದೆ ಎಂದು ಪತ್ರಿಕೆ ಹೇಳಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಪನಗದೀಕರಣ ಮಾಡಿದ ಬಳಿಕ ಉದ್ಯೋಗ ಕುರಿತಂತೆ ನಡೆಸಲಾಗಿರುವ ಮೊದಲ ಸಮಗ್ರ ಸಮೀಕ್ಷೆ ಇದಾಗಿರುವುದರಿಂದ ಅತ್ಯಂತ ಮಹತ್ವ ಪಡೆದುಕೊಂಡಿದೆ. ನಗರಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.7.8ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇ.5.3ರಷ್ಟಿದೆ ಎಂದು ದೈನಿಕ ವರದಿ ಮಾಡಿದೆ.

 ನಿರುದ್ಯೋಗ: ಕಾಂಗ್ರೆಸ್‌- ಬಿಜೆಪಿ ‘ಸರ್ವಾಧಿಕಾರಿ’ ಜಟಾಪಟಿ

ನಿರುದ್ಯೋಗಕ್ಕೆ ಸಂಬಂಧಿಸಿದ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯ ಸೋರಿಕೆಯಾಗಿರುವ ವರದಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಭರ್ಜರಿ ವಾಕ್ಸಮರಕ್ಕೆ ಕಾರಣವಾಗಿದೆ.

‘ಫä್ಯರೆರ್‌’ (ಜರ್ಮನಿ ಭಾಷೆಯಲ್ಲಿ ನಾಯಕ ಎಂದರ್ಥ. ಸರ್ವಾಧಿಕಾರಿ ಅಡಾಲ್‌್ಫ ಹಿಟ್ಲರ್‌ ಅವರಿಗೆ ಈ ಪದ ಬಳಸಲಾಗುತ್ತಿತ್ತು) ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ಸೋರಿಕೆಯಾಗಿರುವ ವರದಿ ರಾಷ್ಟ್ರೀಯ ದುರಂತವನ್ನು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ರಾಹುಲ್‌ ಗಾಂಧಿ ಅವರಿಗೆ ಇಟಲಿಯ ಸರ್ವಾಧಿಕಾರಿ ಮುಸೋಲಿನಿ ಅವರ ಅಲ್ಪದೃಷ್ಟಿಬಳುವಳಿಯಾಗಿ ಬಂದಿದೆ. ಅವರಿಗೆ ವಿಷಯದ ಬಗ್ಗೆ ಜ್ಞಾನವಿಲ್ಲ. ನೌಕರರ ಭವಿಷ್ಯ ನಿಧಿ ಸಂಸ್ಥೆ ಉದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ನೈಜ ದಾಖಲೆಗಳನ್ನು ನೀಡಿದೆ. ಸೂಕ್ತ ಹುದ್ದೆ ನಿರ್ವಹಿಸದ ವ್ಯಕ್ತಿಯೊಬ್ಬರು ಮಾತ್ರ ಈ ರೀತಿ ಸುಳ್ಳು ಸುದ್ದಿಗಳನ್ನು ಮಾರಬಲ್ಲರು ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಇದೇ ವೇಳೆ, ‘ನೋಮೋ ಜಾಬ್ಸ್‌’ ಎಂಬ ಪದ ಬಳಸಿ ಮೋದಿ ಸರ್ಕಾರವನ್ನು ಟ್ವೀಟರ್‌ನಲ್ಲಿ ಟೀಕಿಸಿರುವ ರಾಹುಲ್‌ ಗಾಂಧಿ, ಪ್ರಧಾನಮಂತ್ರಿ ಅಧಿಕಾರದಿಂದ ಹೋಗಬೇಕು ಎಂದು ಆಗ್ರಹಿಸಿದ್ದಾರೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!