
ಬೆಂಗಳೂರು [ಸೆ.15]: ರಾಜ್ಯದಲ್ಲಿನ ಬರ ಪರಿಸ್ಥಿತಿ ನಿರ್ವಹಣೆ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಅರ್ಜಿದಾರ ಮಲ್ಲಿಕಾರ್ಜುನ್ ಮೇಲೆ ಬೇಹುಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೆ, ಇಂತಹ ಪ್ರಕರಣದ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದೆ.
ಬರಪೀಡಿತ ಪ್ರದೇಶಗಳಲ್ಲಿ ಗೋಶಾಲೆ ಮತ್ತು ಮೇವು ವ್ಯವಸ್ಥೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಗುಬ್ಬಿ ತಾಲೂಕಿನ ಚೇಳೂರಿನ ಎ.ಮಲ್ಲಿಕಾರ್ಜುನ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಲ್ಲಿಕೆ ನಂತರ ಗುಪ್ತಚರ ಇಲಾಖೆಯ ಅಧಿಕಾರಿಗಳು ತಮ್ಮ ವಿರುದ್ಧ ಬೇಹುಗಾರಿಕೆ ನಡೆಸಿದ್ದಾರೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕೇಂದ್ರ ವಲಯ ಐಜಿಪಿ ಶರತ್ ಚಂದ್ರ ತನಿಖೆ ನಡೆಸಿದ್ದು, ಶುಕ್ರವಾರ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸಲ್ಲಿಸಿದ್ದರು.
ವರದಿಯನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿಗಳು, ರಾಜ್ಯ ಗುಪ್ತದಳಕ್ಕೆ ಸೇರಿದ ತುಮಕೂರಿನ ಇನ್ಸ್‌ಪೆಕ್ಟರ್ ಆಫ್ ಪೋಲಿಸ್ ಮತ್ತು ಇಬ್ಬರು ಮುಖ್ಯಪೇದೆಗಳು ಆ.27ರಂದು ಅರ್ಜಿದಾರರಿಗೆ ಕರೆ ಮಾಡಿ ಅರ್ಜಿ ಕುರಿತು ಮಾಹಿತಿ ಕೇಳಿದ್ದಾರೆ. ಆ ಬಗ್ಗೆ ಮೊಬೈಲ್ ಸಂಭಾಷಣೆಯ ಸಿ.ಡಿ. ಆಧರಿಸಿ ತನಿಖಾಧಿಕಾರಿಯು ಸಮಗ್ರ ತನಿಖೆ ನಡೆಸಿದ್ದಾರೆ. ಗುಪ್ತಚರ ದಳದವರು ಅರ್ಜಿದಾರರಿಗೆ ಬೆದರಿಕೆ ಹಾಕಿಲ್ಲ. ಸರ್ಕಾರಕ್ಕೆ ಮಾಹಿತಿ ಬೇಕಿದ್ದರೆ ತನ್ನ ಇಲಾಖೆಗಳಿಂದ ಪಡೆಯಬಹುದು ವಿನಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವ್ಯಕ್ತಿಯಿಂದ ಮಾಹಿತಿ ಕೇಳಿದ ಕ್ರಮ ಸರಿಯಲ್ಲ ಎಂದು ಹೇಳಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಲ್ಲದೆ, ಸರ್ಕಾರವು ಪ್ರಕರಣದ ಕುರಿತು ವಿವರಣೆ ನೀಡಬೇಕು. ಇನ್ನು ಮುಂದೆ ಈ ರೀತಿಯ ವರ್ತನೆ ಪುನರಾವರ್ತನೆಯಾಗದಂತೆ ಕ್ರಮ ಕೈಗೊಂಡು ಮಾಹಿತಿ ನೀಡಬೇಕು. ಹಾಗೆಯೇ, ಅರ್ಜಿದಾರರಿಗೆ ಕರೆ ಮಾಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಮುಖ್ಯಪೇದೆಗಳು ಸಹ ತಮ್ಮ ವಿವರಣೆ ನೀಡಿ ಪ್ರತ್ಯೇಕವಾಗಿ ಪ್ರಮಾಣಪತ್ರ ಸಲ್ಲಿಸಬೇಕೆಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಗುಪ್ತಚರ ವಿಭಾಗದವರು ಎಂದು ಹೇಳಿಕೊಂಡು ನನಗೆ ಯಾರೋ ದೂರವಾಣಿ ಕರೆ ಮಾಡಿ ಅರ್ಜಿ ಕುರಿತು ಮಾಹಿತಿ ಮತ್ತು ದಾಖಲೆ ಕೊಡುವಂತೆ ಕೇಳಿದ್ದರು ಎಂದು ಕಳೆದ ವಿಚಾರಣೆ ವೇಳೆ ಅರ್ಜಿದಾರ ಮಲ್ಲಿಕಾರ್ಜುನ ನ್ಯಾಯಪೀಠಕ್ಕೆ ತಿಳಿಸಿದ್ದರು. ಜತೆಗೆ, ಮೊಬೈಲ್ ಸಂಭಾಷಣೆಯ ಸಿ.ಡಿಯನ್ನು ಸಲ್ಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.