ಲೋಕಾ ಅಧಿಕಾರ ಇನ್ನಷ್ಟು ಕಡಿತ : ಸರ್ಕಾರದಿಂದ ಮಹತ್ವದ ನಿರ್ಧಾರ

By Web DeskFirst Published Dec 5, 2018, 10:45 AM IST
Highlights

ಲೋಕಾಯುಕ್ತರೇ ವಿಚಾರಣೆ ನಡೆಸಬೇಕಾದ ಕೆಲವು ಪ್ರಕರಣಗಳಿಗೆ ವಿನಾಯಿತಿ ನೀಡುವ ಸಂಬಂಧ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್‌ 7ಕ್ಕೆ ತಿದ್ದುಪಡಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. 

ಬೆಂಗಳೂರು :  ಖುದ್ದು ಲೋಕಾಯುಕ್ತರೇ ವಿಚಾರಣೆ ನಡೆಸಬೇಕಾದ ಕೆಲವು ಪ್ರಕರಣಗಳಿಗೆ ವಿನಾಯಿತಿ ನೀಡುವ ಸಂಬಂಧ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್‌ 7ಕ್ಕೆ ತಿದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಲೋಕಾಯುಕ್ತ ಸಂಸ್ಥೆ ತಿಳಿಸಿದೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಲೋಕಾಯುಕ್ತರ ವಿರುದ್ಧ ಆರೋಪಗಳು ಕೇಳಿ ಬಂದರೆ ಉಪಲೋಕಾಯುಕ್ತರು ತನಿಖೆ ನಡೆಸಲು ಕಾಯ್ದೆಗೆ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಅದು ಸರಿ​ಯಲ್ಲ. ಕೆಲವು ಪ್ರಕರಣಗಳನ್ನು ಲೋಕಾಯುಕ್ತರೇ ವಿಚಾರಣೆ ನಡೆಸಬೇಕಾಗುತ್ತದೆ. 

ಆದರೆ, ಕಾರಣಾಂತರಗಳಿಂದ ಖುದ್ದು ಲೋಕಾಯುಕ್ತರು ವಿಚಾರಣೆ ನಡೆಸಲು ಸಾಧ್ಯವಾಗುವುದಿಲ್ಲ. ಅಂತಹ ಪ್ರಕರಣಗಳನ್ನು ಉಪ ಲೋಕಾಯುಕ್ತರಿಗೆ ಅಥವಾ ಬೇರೆ ಪ್ರಾಧಿಕಾರಕ್ಕೆ ವಿಚಾರಣೆ ನಡೆಸಲು ಅವಕಾಶ ನೀಡುವಂತೆ ಲೋಕಾಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಈ ಶಿಫಾರಸನ್ನು ಪುರಸ್ಕರಿಸಿದ ಸರ್ಕಾರವು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್‌ 7ಕ್ಕೆ ತಿದ್ದುಪಡಿ ಮಾಡಲು ತೀರ್ಮಾನಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಲೋಕಾಯುಕ್ತರು ವಿಚಾರಣೆ ನಡೆಸಬೇಕಾದ ಕೆಲವೊಂದು ಪ್ರಕರಣಗಳನ್ನು ಉಪಲೋಕಾಯುಕ್ತರಿಗೆ ವಹಿಸಲು ಲೋಕಾಯುಕ್ತ ಕಾಯ್ದೆಯಲ್ಲಿ ಅವಕಾಶ ಇಲ್ಲ. ಇದರಿಂದ ಪ್ರಕರಣಗಳ ವಿಚಾರಣೆ ಮಂದಗತಿಯಲ್ಲಿ ಸಾಗಲಿದೆ. ಅಲ್ಲದೇ, ಕಾರ್ಯದ ಒತ್ತಡದಿಂದ ಪ್ರಮುಖ ಪ್ರಕರಣಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಲೋಕಾಯುಕ್ತ ನ್ಯಾ. ಪಿ.ವಿಶ್ವನಾಥ ಶೆಟ್ಟಿಅವರು ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವಂತೆ ಮನವಿ ಮಾಡಿದ್ದರು.

click me!