
ನವದೆಹಲಿ : ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಸಮತೋಲನ ಅಣೆಕಟ್ಟು ನಿರ್ಮಾಣ ವಿಚಾರವಾಗಿ ನೆರೆಯ ತಮಿಳುನಾಡಿನಿಂದ ವ್ಯಾಪಕ ವಿರೋಧ ಎದುರಿಸುತ್ತಿರುವ ಕರ್ನಾಟಕ ನಿಟ್ಟುಸಿರು ಬಿಡುವಂತಹ ಸುದ್ದಿಯಿದು. ಮೇಕೆದಾಟು ಯೋಜನೆಯ ಕಾರ್ಯಾಸಾಧ್ಯತಾ ವರದಿಗೆ ಕೇಂದ್ರ ಜಲ ಆಯೋಗ(ಸಿಡಬ್ಲುಸಿ) ಒಪ್ಪಿಗೆ ಸೂಚಿಸಿದ್ದು ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಸಿಡಬಬ್ಲ್ಯುಸಿಯ ಈ ನಡೆ ತಮಿಳುನಾಡು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದು ಅಲ್ಲಿನ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಈ ಒಪ್ಪಿಗೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಾರ್ಯಾಸಾಧ್ಯತಾ ವರದಿ ರೂಪಿಸಲು ಕೇಂದ್ರ ಜಲ ಮಂಡಳಿ ರಾಜ್ಯಕ್ಕೆ ಅವಕಾಶ ನೀಡಿರುವುದು ರಾಜ್ಯದ ಮಟ್ಟಿಗೆ ಆಶಾದಾಯಕ ಬೆಳವಣಿಗೆಯೇ ಸರಿ. ಇನ್ನು ನಾವು ಡಿಪಿಆರ್ ರಚಿಸಬೇಕಿದೆ. ಡಿಪಿಆರ್‌ಗೆ ಅನೇಕ ಸಮೀಕ್ಷೆಗಳನ್ನು ಮಾಡಬೇಕಿದೆ. ಡಿಪಿಆರ್ ರೂಪಿಸಲು ಎರಡು ವರ್ಷಗಳು ಬೇಕಾಗಬಹುದು ಎಂದು ರಾಜ್ಯದ ಜಲ ವಿವಾದಗಳ ತಾಂತ್ರಿಕ ತಂಡದಲ್ಲಿ ಪ್ರಮುಖ ಪಾತ್ರ ಹೊಂದಿರುವ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮೇಕೆದಾಟುವಿನಲ್ಲಿ ಸುಮಾರು 5,000 ಕೋಟಿ ರುಪಾಯಿ ವೆಚ್ಚದಲ್ಲಿ ಜಲಾಶಯ ನಿರ್ಮಿಸಿ 66 ಟಿಎಂಸಿಯಷ್ಟುನೀರು ಸಂಗ್ರಹಿಸಿ ಅದನ್ನು ಕುಡಿಯುವ ನೀರು ಮತ್ತು ವಿದ್ಯುಚ್ಛಕ್ತಿಗೆ ಬಳಸಿಕೊಳ್ಳುವ ಲೆಕ್ಕಾಚಾರವನ್ನು ಕರ್ನಾಟಕ ಹೊಂದಿದೆ. ಇದಕ್ಕೆ ಸಂಬಂಧಿಸಿದ ಕಾರ್ಯ ಸಾಧ್ಯತಾ ವರದಿಯನ್ನು ರೂಪಿಸಿದ್ದ ಕಾವೇರಿ ನೀರಾವರಿ ನಿಗಮವು ಕೇಂದ್ರ ಜಲ ಆಯೋಗಕ್ಕೆ ಅದನ್ನು ಸಲ್ಲಿಸಿತ್ತು. ಇದೀಗ ಕೇಂದ್ರ ಜಲ ಆಯೋಗ ಕಾವೇರಿ ನೀರಾವರಿ ನಿಗಮಕ್ಕೆ ಡಿಪಿಆರ್ ರಚಿಸಲು ಅವಕಾಶ ನೀಡಿದೆ.
ತ.ನಾಡು ಕಿಡಿ: ಮೇಕೆದಾಟು ಯೋಜನೆಗೆ ತಮಿಳುನಾಡಿನ ನ್ಯಾಯೋಚಿತ ಮತ್ತು ಸಮರ್ಥನೀಯ ವಿರೋಧವನ್ನು ಪರಿಗಣಿಸದ ಕೇಂದ್ರ ಜಲ ಮಂಡಳಿ ಯೋಜನೆಯ ಡಿಪಿಆರ್ ರಚಿಸುವಂತೆ ಕರ್ನಾಟಕಕ್ಕೆ ಹೇಳಿದೆ. ಸಿಡಬ್ಲ್ಯುಸಿಯ ಈ ನಿರ್ಧಾರ ತಮಿಳುನಾಡು ಜನರಲ್ಲಿ ಆತಂಕ ಮೂಡಿಸಿದೆ. ಇದು ಕಾವೇರಿ ನೀರನ್ನು ಅವಲಂಬಿಸಿರುವ ತಮಿಳುನಾಡಿನ ಲಕ್ಷಾಂತರ ರೈತರ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ತಕ್ಷಣವೇ ಮೇಕೆದಾಟು ಯೋಜನೆಯ ಡಿಪಿಆರ್ ರಚಿಸಲು ಅನುಮತಿ ನೀಡಿರುವುದನ್ನು ತಡೆ ಹಿಡಿಯುವಂತೆ ಸಿಡಬ್ಲ್ಯುಸಿಗೆ ಸೂಚಿಸಬೇಕು ಎಂದು ಪ್ರಧಾನಿ ಮೋದಿ ಅವರಿಗೆ ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಪತ್ರ ಬರೆದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.