ವಿಶ್ವಾಸಮತಕ್ಕೆ ಡೆಡ್ ಲೈನ್ : ಮೈತ್ರಿಕೂಟ ಏನು ಮಾಡಬಹುದು?

By Web DeskFirst Published Jul 19, 2019, 7:33 AM IST
Highlights

ರಾಜ್ಯ ರಾಜಕೀಯ ಪ್ರಹಸನ ನಡೆಯುತ್ತಿದ್ದು, ಇದೇ ವೇಳೆ ಸರ್ಕಾರಕ್ಕೆ ವಿಶ್ವಾಸ ಮತ ಯಾಚನೆ ಮಾಡಲು ಡೆಡ್ ಲೈನ್ ನೀಡಲಾಗಿದೆ. ಇನ್ನು ಮೈತ್ರಿ ಕೂಟ ಈ ವೇಳೆ ಏನು ಮಾಡಬಹುದು?

ಬೆಂಗಳೂರು [ಜು.19] :  ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡಿಸಿದ ವಿಶ್ವಾಸಮತ ಯಾಚನೆ ನಿರ್ಣಯ ಚರ್ಚೆ ವೇಳೆ ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಕ್ರಿಯಾಲೋಪ ಮಂಡಿಸಿ ಇಡೀ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಮೈತ್ರಿಕೂಟದ ತಂತ್ರಕ್ಕೆ ರಾಜ್ಯಪಾಲರು ಬ್ರೇಕ್‌ ಹಾಕಿದ್ದಾರೆ. ವಿಶ್ವಾಸಮತಕ್ಕೆ ಶುಕ್ರವಾರ ಮಧ್ಯಾಹ್ನ 1.30ರ ಗಡುವು ವಿಧಿಸಿದ್ದಾರೆ. ಹೀಗಾಗಿ ಮೈತ್ರಿಕೂಟದ ಯೋಜನೆ ಸಂಪೂರ್ಣ ಉಲ್ಟಾಆಗಿದೆ. ಬದಲಾದ ಪರಿಸ್ಥಿತಿಯಲ್ಲಿ ಮೈತ್ರಿಕೂಟದ ಮುಂದಿರುವ ಹಾದಿಗಳು ಇವು-

- ಸುಪ್ರೀಂಕೋರ್ಟ್‌ ರಾಜೀನಾಮೆ ನೀಡಿರುವ 15 ಶಾಸಕರನ್ನು ಸದನಕ್ಕೆ ಹಾಜರಾಗುವಂತೆ ಒತ್ತಾಯ ಮಾಡಬಾರದು ಎಂಬ ತೀರ್ಪಿನಿಂದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರ ಹಕ್ಕು ಮೊಟಕಾಗಿರುವ ಬಗ್ಗೆ ನ್ಯಾಯಾಲಯದ ಸ್ಪಷ್ಟತೆ ಪಡೆಯಬೇಕಿದೆ. ಜತೆಗೆ, ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆದಿದೆ. ಈ ಹಂತದಲ್ಲಿ ರಾಜ್ಯಪಾಲರು ಗಡುವು ವಿಧಿಸುವ ಮೂಲಕ ಶಾಸಕಾಂಗದ ಕಾರ್ಯದಲ್ಲಿ ಮೂಗು ತೂರಿಸಿದ್ದಾರೆ ಎಂದು ಆರೋಪಿಸಿ, ರಾಜ್ಯಪಾಲರು ನೀಡಿರುವ ಈ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂಕೋರ್ಟ್‌ ಮೊರೆ ಹೋಗುವುದು.

- ಈ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಮೊರೆ ಹೋಗಿರುವುದರಿಂದ ನ್ಯಾಯಾಲಯದ ನಿರ್ದೇಶನ ದೊರೆಯುವವರೆಗೂ ನಿಮ್ಮ ಆದೇಶವನ್ನು ಹಿಂಪಡೆಯಿರಿ ಎಂದು ರಾಜ್ಯಪಾಲರಿಗೆ ಮನವಿ ಮಾಡುವುದು.

- ರಾಜ್ಯಪಾಲರ ಸೂಚನೆಯಂತೆಯೇ ನಿಗದಿತ ಗಡುವಿನೊಳಗೆ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಿ ಬರುವ ಫಲಿತಾಂಶವನ್ನು ಒಪ್ಪಿಕೊಳ್ಳಬಹುದು.

- ರಾಜ್ಯಪಾಲರ ಆದೇಶಕ್ಕೆ ಸಡ್ಡು ಹೊಡೆದು ನಿಲ್ಲುವುದು. ತನ್ಮೂಲಕ ಸರ್ಕಾರವನ್ನು ವಜಾಗೊಳಿಸಿ, ವಿಧಾನಸಭೆಯನ್ನು ಅಮಾನತುಗೊಳಿಸಲು ರಾಜ್ಯಪಾಲರಿಗೆ ಆಸ್ಪದ ನೀಡುವುದು. ರಾಜ್ಯಪಾಲರು ಇಂತಹ ಕ್ರಮ ಕೈಗೊಂಡರೆ ಸಂವಿಧಾನಬದ್ಧವಾಗಿ ಆಯ್ಕೆಯಾಗಿದ್ದ ಸರ್ಕಾರವನ್ನು ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ಬಿಜೆಪಿ ವಜಾಗೊಳಿಸುವ ಮೂಲಕ ಅನ್ಯಾಯ ಮಾಡಿದೆ ಎಂದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಿಂಬಿಸುವುದು.

- ರಾಜ್ಯ ಸರ್ಕಾರ ಈ ನಾಲ್ಕನೆಯ ಹಾದಿಯನ್ನೇ ತುಳಿಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ, ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಿ ಸೋಲುವುದಕ್ಕಿಂತ ಹೀಗೆ ಮಾಡುವ ಮೂಲಕ ಬಿಜೆಪಿ ಅನ್ಯಾಯ ಮಾಡಿದೆ ಎಂದು ಜನರ ಮುಂದೆ ಹೋಗಿ ರಾಜಕೀಯ ಲಾಭ ಪಡೆಯುವ ಅವಕಾಶ ಮೈತ್ರಿಕೂಟಕ್ಕೆ ಲಭ್ಯವಾಗುತ್ತದೆ.

click me!