'ಮೈತ್ರಿ ಭಿನ್ನಮತದ ಚಿತ್ರ ಶೀಘ್ರ ತೆರೆಗೆ, ನೋಡಿ ಆನಂದಿಸಿ'

By Web DeskFirst Published Apr 30, 2019, 8:14 AM IST
Highlights

‘ಬಾಂಡ್‌007-ಭಿನ್ನಾಭಿಪ್ರಾಯ’| ಸಿನಿಮಾ ಶೀಘ್ರ ತೆರೆಗೆ: ಅಶೋಕ್‌| ಸಿನಿಮಾದಲ್ಲಿ ನಮಗೆ ಯಾವ ಪಾತ್ರಗಳನ್ನು ಕೊಟ್ಟಿಲ್ಲ

ಬೆಂಗಳೂರು[ಏ.30]: ರಾಜ್ಯದಲ್ಲಿ ಪಾರ್ಲಿಮೆಂಟ್‌ ಚುನಾವಣೆ ಮುಗಿಯಿತು. ಇನ್ನೇನಿದ್ದರೂ ಮೈತ್ರಿ ಪಕ್ಷಗಳ ‘ಜೇಮ್ಸ್‌ ಬಾಂಡ್‌ 007 ರೀತಿಯ ಭಿನ್ನಾಭಿಪ್ರಾಯ’ದ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ.

ಸೋಮವಾರ ಸಂಜೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಸಿನಿಮಾದಲ್ಲಿ ನಮಗೆ ಪಾತ್ರಗಳೇನು ಅವರು (ಮೈತ್ರಿ ಪಕ್ಷಗಳು) ಕೊಟ್ಟಿಲ್ಲ. ನಾವು ಸಹ ನಟನೆಗೆ ಅವಕಾಶ ಸಿಗುತ್ತದೆಯೇ ಎಂದು ನಿರೀಕ್ಷಿಸಿದ್ದೇವೆ ಎಂದು ನಗೆಚಟಾಕಿ ಹಾರಿಸಿದರು.

ರಾಜ್ಯದಲ್ಲಿರುವುದು ಮೈತ್ರಿ ಸರ್ಕಾರವಲ್ಲ. ಅದೂ ಜಗಳಗಂಟ ಸರ್ಕಾರ ಎಂಬುದನ್ನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಈಗಾಗಲೇ ಬೆಳಗಾವಿಯ ರಮೇಶ್‌ ಜಾರಕಿಹೊಳಿ-ಸತೀಶ್‌ ಜಾರಕಿಹೊಳಿ ಕಿತ್ತಾಟ, ಬಳ್ಳಾರಿಯಲ್ಲಿ ಶಾಸಕರ ಗಲಾಟೆ ನಡೆದಿದ್ದಾಯ್ತು. ಈಗ ಮತ್ತೊಂದು ಗುಂಪುಗಾರಿಕೆ ಮೈತ್ರಿ ಸರ್ಕಾರದಲ್ಲಿ ಶುರುವಾಗಿದೆ. ಈ ಬಂಡಾಯದ ಹಿಂದೆ ದೊಡ್ಡ ಕೈವಾಡವಿದೆ ಎಂದು ಅಶೋಕ್‌ ಹೇಳಿದರು.

ಈ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ. ಅದನ್ನು ಬೀಳಿಸೋಲು ಬಿಜೆಪಿ ಹೋಗುವುದಿಲ್ಲ. ರಾಜ್ಯದಲ್ಲಿ ಬರಗಾಲವಿರುವಾಗ ಮುಖ್ಯಮಂತ್ರಿಗಳು ಮರಳಿನಲ್ಲಿ ಆಟವಾಡುತ್ತ ಕಾಲ ಕಳೆಯುತ್ತಿದ್ದಾರೆ ಎಂದು ಮೈತ್ರಿ ಪಕ್ಷದ ಶಾಸಕರೇ ಹೇಳುವಾಗ ಜನರ ಅಭಿಪ್ರಾಯ ಹೇಗಿರುತ್ತದೆ ಎಂದೂ ಹೇಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಪಾರ್ಲಿಮೆಂಟ್‌ ಚುನಾವಣೆ ಮುಗಿಯಿತು. ಇನ್ನೇನಿದ್ದರೂ ಮೈತ್ರಿ ಪಕ್ಷಗಳ ‘ಜೇಮ್ಸ್‌ ಬಾಂಡ್‌ 007 ರೀತಿಯ ಭಿನ್ನಾಭಿಪ್ರಾಯ’ದ ಚಿತ್ರ ಬಿಡುಗಡೆ ಬಾಕಿ ಇದೆ. ಆದಷ್ಟುಬೇಗ ಪರದೆ ಮೇಲೆ ಚಲನಚಿತ್ರ ಮೂಡಿಬರಲಿದ್ದು, ಮೈತ್ರಿ ಸರ್ಕಾರದ ಜಗಳವನ್ನು ನೋಡಿ ಜನರು ಆನಂದಿಸಬೇಕು ಎಂದು ಲೇವಡಿ ಮಾಡಿದರು.

click me!