30 ಜಿಲ್ಲೆಗಳಲ್ಲಿ ಸಿಎಂ ತಿಂಗಳಿಗೊಂದು ದಿನ ವಾಸ್ತವ್ಯ

By Web DeskFirst Published Aug 12, 2018, 1:39 PM IST
Highlights

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ತಿಂಗಳಿಗೊಂದು ದಿನ ವಾಸ್ತವ್ಯ ಹೂಡುವುದಾಗಿ, ರೈತರ ಕಷ್ಟ-ಸುಖ ಅರಿಯುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ. 

ಮಂಡ್ಯ :  ಮುಖ್ಯಮಂತ್ರಿಯೊಬ್ಬರು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆನ್ನುವಂತೆ ಗದ್ದೆಗಿಳಿದು ಭತ್ತದ ನಾಟಿ ಮಾಡುವ ಮೂಲಕ ಸುದ್ದಿಯಾಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಶನಿವಾರ ರಾಜ್ಯದ ಎಲ್ಲಾ ಭಾಗದ ರೈತರ ಕಷ್ಟ-ಸುಖ ಅರಿಯುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ‘ಮೈಸೂರು ಭಾಗದ ಮುಖ್ಯಮಂತ್ರಿ’ ಎನ್ನುವ ಪ್ರತಿ ಪಕ್ಷಗಳ ಟೀಕೆಯನ್ನು ಸುಳ್ಳು ಮಾಡಲೆಂಬಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ತಿಂಗಳಿಗೊಂದು ದಿನ ವಾಸ್ತವ್ಯ ಹೂಡುವುದಾಗಿ, ರೈತರ ಕಷ್ಟ-ಸುಖ ಅರಿಯುವುದಾಗಿ ಘೋಷಿಸಿದ್ದಾರೆ. ಜತೆಗೆ, ಗಣೇಶ ಹಬ್ಬಕ್ಕೂ ಮೊದಲೇ ರೈತರೂ ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ಮಹತ್ವದ ಯೋಜನೆ ಪ್ರಕಟಿಸುವ ಸುಳಿವನ್ನೂ ನೀಡಿದ್ದಾರೆ.

 ‘ನಾನು ಮಂಡ್ಯ ಜಿಲ್ಲೆ, ಮೈಸೂರು ಭಾಗದ ರೈತರಿಗೆ ಸೀಮಿತನಾದ ಮುಖ್ಯಮಂತ್ರಿಯಲ್ಲ. ರಾಜ್ಯದ ಎಲ್ಲ 30 ಜಿಲ್ಲೆಗಳ ಮುಖ್ಯಮಂತ್ರಿ. ರಾಜ್ಯದ ಎಲ್ಲಾ ರೈತರ ಸಂಕಷ್ಟಗಳನ್ನು ಅರಿಯುವ ಉದ್ದೇಶ ಇಟ್ಟುಕೊಂಡಿದ್ದು, ಎಲ್ಲಾ ಭಾಗದ ರೈತರ ಹಿತ ಕಾಯಲು ಬದ್ಧನಿದ್ದೇನೆ. ಕಡಲೆ, ಮೆಕ್ಕೆಜೋಳ, ದ್ರಾಕ್ಷಿ, ತೆಂಗು, ಅಡಕೆ ಸೇರಿ ಎಲ್ಲಾ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಿ, ರೈತರ ನೆರವಿಗೆ ಬರಲಿದ್ದೇನೆ. ಇದಕ್ಕಾಗಿ 30 ಜಿಲ್ಲೆಗಳಲ್ಲಿ ತಿಂಗಳಿಗೊಂದು ದಿನ ಪ್ರವಾಸ ಮಾಡಲಿದ್ದೇನೆæ’. ರೈತರ ಮನೆಯಲ್ಲೇ ವಾಸ್ತವ್ಯ ಹೂಡಿ ಅವರೊಂದಿಗೆ ಮುಕ್ತವಾಗಿ ಚರ್ಚಿಸಲಿದ್ದೇನೆ. ರೈತರ ಕಷ್ಟ-ಸುಖ, ಕೃಷಿ ಚಟುವಟಿಕೆ, ಜೀವನ ನಿರ್ವಹಣೆ ಅರಿತುಕೊಂಡು ಕೆಲಸ ಮಾಡುತ್ತೇನೆ’ ಎಂದು ಇದೇ ವೇಳೆ ಕುಮಾರಸ್ವಾಮಿ ಪ್ರಕಟಿಸಿದರು.

ಗಣೇಶ ಹಬ್ಬದೊಳಗೆ ಘೋಷಣೆ: ನಾನು ಮುಖ್ಯಮಂತ್ರಿ ಹುದ್ದೆಗೇರಿ ಎರಡು ತಿಂಗಳಷ್ಟೇ ಕಳೆದಿದೆ. ಸಾಲಮನ್ನಾ ಯೋಜನೆಗೆ ಹಣ ಒದಗಿಸುವುದು, ಸರ್ಕಾರವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಕನಿಷ್ಠ 4 ತಿಂಗಳಾದರೂ ಸಮಯ ಬೇಕು. ಇನ್ನು ಮುಂದೆ ರೈತರ ಜತೆಗಿದ್ದು, ಎಲ್ಲ ನೆರವು ನೀಡುತ್ತೇನೆ. ರಾಜ್ಯದ ರೈತರು, ಬಡವರೂ ಸೇರಿ ಆರೂವರೆ ಕೋಟಿ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿ ತರಲು ಚಿಂತನೆ ನಡೆಸಿದ್ದೇನೆ. ಆ.15ರಂದೇ ಈ ಕುರಿತು ಘೋಷಣೆ ಮಾಡಲು ಉದ್ದೇಶಿಸಿದ್ದೆ. ಆದರೆ, ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಕುರಿತು ಘೋಷಣೆ ಮಾಡುವುದು ಸಾಧ್ಯವಾಗಿಲ್ಲ ಎಂದು ಇದೇ ವೇಳೆ ಸಿಎಂ ತಿಳಿಸಿದರು.

ದಮ್ಮಯ್ಯ ಅಂತೀನಿ: ಸಾಲ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರಿಗೆ ದುಡುಕದಂತೆ ಇದೇ ವೇಳೆ ಮುಖ್ಯಮಂತ್ರಿ ಮನವಿ ಮಾಡಿದರು. ‘ನಿಮಗೆ ದಮ್ಮಯ್ಯ ಅಂತೀನಿ, ಯಾವ ರೈತರೂ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಈಗಾಗಲೇ ಸಾಲ ಮನ್ನಾ ನಿರ್ಧಾರ ಪ್ರಕಟಿಸಿದ್ದೇನೆ. ಸಂಪುಟದಲ್ಲೂ ಇದಕ್ಕೆ ಅನುಮತಿ ಪಡೆದಿದ್ದೇನೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಮುಂದಾಗಬೇಡಿ. ನಿಮ್ಮ ಹಾಗೂ ಕುಟುಂಬದ ಸಮಸ್ಯೆಗಳಿಗೆ ವಿಧಾನಸೌಧದ ಬಾಗಿಲು ಸದಾ ತೆರೆದಿರುತ್ತದೆ. ಯಾವುದೇ ಸಮಸ್ಯೆಗಳಾದರೂ ಬಗೆಹರಿಸಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ಶೀಘ್ರದಲ್ಲೇ ಆಂಧ್ರಕ್ಕೆ ಭೇಟಿ: ನೆರೆಯ ಆಂಧ್ರಪ್ರದೇಶದಲ್ಲಿ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದಿಂದ ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಬೇಸಾಯವನ್ನು ಆರಂಭಿಸಿದ್ದಾರೆ. ಇದರ ವೀಕ್ಷಣೆಗೆ ಆಗಮಿಸುವಂತೆ ಪ್ರತಿಷ್ಠಾನದಿಂದ ಆಹ್ವಾನ ಬಂದಿದೆ. ಸದ್ಯದಲ್ಲೇ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ತಿಳಿಸಿದರು.

click me!