
ಕಗ್ಗಂಟಾದ ವಿಸ್ತರಣೆಯಿಂದ 8 ಸಚಿವರಿಗೆ ಖಾತೆ ಹಂಚಿಕೆ ಇಲ್ಲ
ಬೆಂಗಳೂರು : ಕಗ್ಗಂಟಾಗಿರುವ ಖಾತೆ ಹಂಚಿಕೆಯ ಸಮಸ್ಯೆಯನ್ನು ಬಗೆಹರಿಸಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೋಮವಾರ ರಾತ್ರಿ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ಅಲ್ಲಿಯವರೆಗೂ ಎಂಟು ಮಂದಿ ನೂತನ ಸಚಿವರಿಗೆ ಖಾತೆ ಹಂಚಿಕೆ ನಡೆಯುವುದಿಲ್ಲ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.
ಎರಡು ಹಾಗೂ ಎರಡಕ್ಕೂ ಹೆಚ್ಚು ಪ್ರಮುಖ ಖಾತೆಗಳನ್ನು ಹೊಂದಿರುವ ಪ್ರಭಾವಿ ಸಚಿವರು ತಮ್ಮ ಪ್ರಮುಖ ಖಾತೆಗಳನ್ನು ಬಿಟ್ಟುಕೊಡಲು ಒಪ್ಪದಿರುವುದರಿಂದ ಖಾತೆ ಹಂಚಿಕೆ ಕಗ್ಗಂಟು ನಿರ್ಮಾಣವಾಗಿದೆ. ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ನಡುವೆ ಸಭೆ ನಡೆದ ನಂತರವೇ ಈ ಕಗ್ಗಂಟು ಬಗೆಹರಿಯಬೇಕಿದೆ. ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಗ್ಗೆ ಇಂತಹದೊಂದು ಸಭೆ ನಡೆಯುವ ಸಾಧ್ಯತೆಯಿದ್ದು, ಅಲ್ಲಿಯವರೆಗೂ ಖಾತೆ ಹಂಚಿಕೆ ನಡೆಯುವ ಸಾಧ್ಯತೆಯಿಲ್ಲ ಎಂದು ತಿಳಿದುಬಂದಿದೆ.
ಸಚಿವ ಸಂಪುಟಕ್ಕೆ ಹೊಸದಾಗಿ ಎಂಟು ಸಚಿವರು ಸೇರ್ಪಡೆಯಾಗಿರುವುದರಿಂದ ಕಾಂಗ್ರೆಸ್‌ನ ಹಾಲಿ ಸಚಿವರು ಹೊಂದಿರುವ ಹೆಚ್ಚುವರಿ ಖಾತೆಗಳ ಪುನರ್ ಹಂಚಿಕೆ ನಡೆಯಬೇಕು. ಕಾಂಗ್ರೆಸ್‌ನ ಸಚಿವರ ಬಳಿ ಇರುವ ಹೆಚ್ಚುವರಿ ಖಾತೆಗಳ ಸಂಖ್ಯೆ 12 ಇದೆ. ಇದನ್ನು 8 ಸಚಿವರಿಗೆ ಹಂಚಬೇಕಿದೆ. ಆದರೆ, ಒಂದಕ್ಕಿಂತ ಹೆಚ್ಚು ಪ್ರಮುಖ ಖಾತೆ ಹೊಂದಿರುವ ಕೆಲ ಪ್ರಭಾವಿ ಸಚಿವರು ತಮ್ಮ ಹೆಚ್ಚುವರಿ ಖಾತೆಯನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಈ ಸಚಿವರನ್ನು ಒಪ್ಪಿಸುವ ಅಥವಾ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ವೇಣುಗೋಪಾಲ್ ನಗರಕ್ಕೆ ಸೋಮವಾರ ಸಂಜೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಅವರು ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಭೇಟಿ ಮಾಡಿ ಅವರ ಅಸಮಾಧಾನ ಪರಿಹರಿಸುವ ಪ್ರಯತ್ನವನ್ನು ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.