
ಬೆಂಗಳೂರು(ಮಾ. 15): ಸಿದ್ದರಾಮಯ್ಯನವರು ಸಿಎಂ ಆಗಿ ತಮ್ಮ ಕೊನೆಯ ಬಜೆಟ್'ನಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದಾರೆ. ಸಮಾಜದ ಎಲ್ಲಾ ವರ್ಗಗಳು ಹಾಗೂ ಸ್ತರಗಳಿಗೆ ಖುಷಿ ಪಡಿಸುವ ಪ್ರಯತ್ನ ಮಾಡಿದ್ದಾರೆ. ಚುನಾವಣೆಗೆ ಹೇಳಿ ಮಾಡಿಸಿದ ಬಜೆಟ್ ತಯಾರಿಸಿರುವ ಸಿದ್ದರಾಮಯ್ಯ ತಮ್ಮ ಈ ಬಜೆಟ್'ನಲ್ಲಿ ಜನಸಾಮಾನ್ಯನಿಗೆ ಕೊಟ್ಟ ಪ್ರಮುಖ ಕೊಡುಗೆಗಳೇನು? ಅದರ ಸಾಧಕ ಬಾಧಕಗಳೇನು? ಇಲ್ಲಿದೆ ವಿವರ.
1) ಖಾಸಗಿ ಕ್ಷೇತ್ರದ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 58ರಿಂದ 60 ವರ್ಷಕ್ಕೆ ಏರಿಸಲಾಗುವುದು.
ಪರಿಣಾಮ: ಖಾಸಗಿ ಕ್ಷೇತ್ರದಲ್ಲಿ ಸರಕಾರದ ಈ ಕ್ರಮ ಯಾವುದೇ ಪರಿಣಾಮ ಬೀರುವುದಿಲ್ಲ. ಯಾಕೆಂದರೆ, ಇಲ್ಲಿ ಬಹುತೇಕ ಉದ್ಯೋಗಗಳು ಕಾಂಟ್ರ್ಯಾಕ್ಟ್ ಆಧಾರಿತವಾಗಿರುತ್ತವೆ. ಯಾವಾಗ ಬೇಕಾದರೂ ಕೆಲಸದಿಂದ ಕಿತ್ತುಹಾಕುವಂತಹ ವಾತಾವರಣ ಖಾಸಗಿ ಸಂಸ್ಥೆಗಳಲ್ಲಿವೆ.
2) ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಸಿನಿಮಾ ಮಂದಿರಗಳಲ್ಲಿ ಗರಿಷ್ಠ ಟಿಕೆಟ್ ದರ 200 ರೂಪಾಯಿ ಎಂದು ನಿಗದಿ ಮಾಡಲಾಗಿದೆ.
ಪರಿಣಾಮ: ಚಿತ್ರಪ್ರೇಮಿಗಳಿಗೆ ಇದು ನಿಜವಾಗಿಯೂ ಖುಷಿಯ ಸುದ್ದಿ. ಆದರೆ, ಮಲ್ಟಿಪ್ಲೆಕ್ಸ್ ಮಾಲೀಕರು ಒಂದಷ್ಟು ಪ್ರತಿಭಟನೆ ಮಾಡುವ ನಿರೀಕ್ಷೆ ಇದೆ.
3) ರಾಜ್ಯದಲ್ಲಿರುವ ಮಲ್ಟಿಪ್ಲೆಕ್ಸ್'ಗಳು ಮಧ್ಯಾಹ್ನ 1:30ರಿಂದ ಸಂಜೆ 7:30ರವರೆಗೆ ಕನ್ನಡ ಹಾಗೂ ಪ್ರಾದೇಶಿಕ ಚಿತ್ರಗಳನ್ನು ಪ್ರದರ್ಶಿಸಬೇಕು.
ಪರಿಣಾಮ: ಕನ್ನಡ ಚಿತ್ರೋದ್ಯಮ ಹಾಗೂ ಕನ್ನಡ ಚಿತ್ರಪ್ರೇಮಿಗಳಿಗೆ ಖುಷಿಯ ಸುದ್ದಿ ಇದು. ಇಂಗ್ಲೀಷ್ ಸೇರಿದಂತೆ ಅನ್ಯ ಭಾಷೆಯ ಚಿತ್ರಗಳಿಗೆ ಸ್ವಲ್ಪ ಕಡಿವಾಣ ಬಿದ್ದಂತಾಗುತ್ತದೆ.
4) ಬೆಂಗಳೂರಿನಲ್ಲಿ ವಾಹನ ಸಂಚಾರದ ಪ್ರಮಾಣ ಕಡಿಮೆ ಮಾಡುವ ಸಲುವಾಗಿ ಪ್ರಸಕ್ತ ಸಾಲಿನ ವರ್ಷದಲ್ಲಿ ನಗರದಲ್ಲಿ 3 ಸಾವಿರ ಹೊಸ ಬಸ್ಸುಗಳನ್ನು ಹಾಕಲಾಗುವುದು; ಜೊತೆಗೆ 150 ಎಲೆಕ್ಟ್ರಿಕ್ ಬಸ್ಸುಗಳೂ ನಗರದಲ್ಲಿ ಸಂಚರಿಸಲಿವೆ.
ಪರಿಣಾಮ: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಇದು ಸಹಾಯವಾಗಬಹುದು. ಜನರು ತಮ್ಮ ವಾಹನಗಳನ್ನು ತ್ಯಜಿಸಿ ಬಿಎಂಟಿಸಿ ಬಸ್ಸುಗಳನ್ನೇರಲು ತೊಡಗಿದರೆ ಸರಕಾರದ ಕ್ರಮ ಸಾರ್ಥಕ. ಬಸ್ ಪ್ರಯಾಣಿಗರಿಗೆ ಇನ್ನಷ್ಟು ಸಮಾಧಾನ ತರುವ ಕ್ರಮ ಇದು.
5) ಟೂ ಸ್ಟ್ರೋಕ್ ಆಟೋರಿಕ್ಷಾಗಳನ್ನು ನಿಷೇಧಿಸಲಾಗುವುದು; ಏಪ್ರಿಲ್ 1ರಿಂದ ಟೂ ಸ್ಟ್ರೋಕ್ ರಿಕ್ಷಾಗಳು ನಗರದಿಂದ ಕಣ್ಮರೆಯಾಗಲಿವೆ.
ಪರಿಣಾಮ: ಇದರಿಂದ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಕಡಿಮೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.