ಮೈತ್ರಿ ಸರ್ಕಾರ ನೇಮಿಸಿದ್ದ 70 ಮಂದಿ ವಜಾ ಮಾಡಿದ ಬಿಜೆಪಿ ಸರ್ಕಾರ

Published : Jul 30, 2019, 09:08 AM IST
ಮೈತ್ರಿ ಸರ್ಕಾರ ನೇಮಿಸಿದ್ದ 70 ಮಂದಿ ವಜಾ ಮಾಡಿದ ಬಿಜೆಪಿ ಸರ್ಕಾರ

ಸಾರಾಂಶ

ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ 70 ಸಿಂಡಿಕೇಟ್ ಸದಸ್ಯರಿಗೆ ಬಿಜೆಪಿ ಗೇಟ್ ಪಾಸ್ ನೀಡಿದೆ. 

ಬೆಂಗಳೂರು [ಜು.30]:  ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನಕ್ಕೂ ಮುನ್ನ ರಾಜ್ಯದ 13 ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್‌ ಸದಸ್ಯರ ನೇಮಕಾತಿ ಮಾಡಿ ಹೊರಡಿಸಿದ್ದ ಆದೇಶವನ್ನು ನೂತನ ಸರ್ಕಾರ ರದ್ದುಗೊಳಿಸಿದೆ.

ಸಮ್ಮಿಶ್ರ ಸರ್ಕಾರದ ಪತನಕ್ಕೂ ಮೂರು ದಿನ ಮೊದಲು (ಜು.19) ರಾಜ್ಯದ 13 ವಿಶ್ವವಿದ್ಯಾಲಯಗಳಿಗೆ 70 ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿತ್ತು. ಇವರ ಅಧಿಕಾರಾವಧಿ ಮುಂದಿನ ಮೂರು ವರ್ಷ ಅಥವಾ ಹೊಸ ಆದೇಶ ಹೊರಡಿಸುವವರೆಗೆ ಎಂದು ಆದೇಶದಲ್ಲಿ ತಿಳಿಸಿತ್ತು.

ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಈ ಹಿಂದಿನ ಸರ್ಕಾರ ಜುಲೈನಲ್ಲಿ ಹೊರಡಿಸಿರುವ ಆದೇಶಗಳು ಮತ್ತು ಪ್ರಸ್ತಾವನೆಗಳನ್ನು ತಡೆಹಿಡಿಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು ಆದೇಶ ಹೊರಡಿಸಿದ್ದರು. ಅದರಂತೆ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಗಳು ಜು. 26ರಂದು ಅದೇಶ ಹೊರಡಿಸುವ ಮೂಲಕ ಸಿಂಡಿಕೇಟ್‌ ಸದಸ್ಯರ ನೇಮಕವನ್ನು ತಡೆ ಹಿಡಿದಿದ್ದಾರೆ. ಸರ್ಕಾರಿಂದ ಮುಂದಿನ ಆದೇಶ ಆಗುವವರೆಗೆ ಯಾವುದೇ ಕ್ರಮ ವಹಿಸದಂತೆ ಹಾಗೂ ಈಗಾಗಲೇ ಕ್ರಮ ವಹಿಸಿದ್ದಲ್ಲಿ ತಕ್ಷಣದಿಂದ ತಡೆಹಿಡಿಯುವಂತೆ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಅನ್ವಯ ರಾಜ್ಯ ವ್ಯಾಪ್ತಿಯಲ್ಲಿರುವ ಎಲ್ಲ ವಿವಿಗಳಿಗೆ ಸೂಚನೆ ನೀಡಿದ್ದಾರೆ.

ಹಿಂದಿನ ಸರ್ಕಾರವೂ ಇದೇ ಮಾಡಿತ್ತು :  2018ರಲ್ಲಿ ಜುಲೈನಲ್ಲಿ ಜಿ.ಟಿ. ದೇವೇಗೌಡ ಅವರು ಉನ್ನತ ಶಿಕ್ಷಣ ಸಚಿವರಾದ ನಂತರ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನೇಮಕ ಮಾಡಿದ್ದ ಸಿಂಡಿಕೇಟ್‌ ಸದಸ್ಯರನ್ನು ಏಕಾಏಕಿ ತೆಗೆದುಹಾಕಿದ್ದರು. ಅದೇ ರೀತಿ ಇದೀಗ ಜಿ.ಟಿ. ದೇವೇಗೌಡ ಅವರು ಮಾಡಿರುವ ಆದೇಶವನ್ನು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರದ್ದುಪಡಿಸಿದೆ.

ಪ್ರಭಾವ ಬೀರಿ ನೇಮಕವಾಗಿದ್ದವರಿಗೆ ಸಮಸ್ಯೆ :  ಸಿಂಡಿಕೇಟ್‌ ಸದಸ್ಯರ ನೇಮಕಾತಿಗೆ ಕಳೆದ ಒಂದು ವರ್ಷದಿಂದ ಪ್ರಕ್ರಿಯೆ ನಡೆಯುತ್ತಿತ್ತು. ಹಲವೆಡೆಯಿಂದ ಶಿಫಾರಸು, ಒತ್ತಡ, ಪ್ರಭಾವ ಬಳಸಲಾಗಿತ್ತು. ಮತ್ತೆ ಕೆಲವರು ಸದಸ್ಯತ್ವ ಪಡೆದುಕೊಳ್ಳುವುದಕ್ಕಾಗಿ 10ರಿಂದ 15 ಲಕ್ಷ ರು.ಗಳ ವರೆಗೂ ಲಂಚ ನೀಡಿದ್ದರು ಎನ್ನಲಾಗಿದೆ. ಹಣ ನೀಡಿದವರ ಒತ್ತಡಕ್ಕೆ ಮಣಿದು ಮೈತ್ರಿ ಸರ್ಕಾರ ಕೊನೇ ಕ್ಷಣದಲ್ಲಿ ಆದೇಶ ಹೊರಡಿಸಿ ಕೈತೊಳೆದುಕೊಂಡಿತ್ತು. ಇದೀಗ ನೂತನ ಸರ್ಕಾರ ದಿಢೀರ್‌ ಸದತ್ಯತ್ವ ರದ್ದುಪಡಿಸಿರುವುದರಿಂದ ತೊಂದರೆಯಾಗಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ. ಹೊಸ ಸರ್ಕಾರ ಯಾವಾಗ ಸಿಂಡಿಕೇಟ್‌ ಸದಸ್ಯರನ್ನು ನೇಮಕ ಮಾಡಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲು ನಿಲ್ದಾಣ ವಿಸ್ತರಣೆ ಕಾರ್ಯ ಆರಂಭ: ಪ್ರಯಾಣಿಕರು ಕಾಯುವ ದುಸ್ಥಿತಿ
Kodagu: ಧಗಧಗಿಸಿ ಹೊತ್ತಿ ಉರಿದ 25 ಪ್ರಯಾಣಿಕರಿದ್ದ ಖಾಸಗಿ ಬಸ್