
ನವದೆಹಲಿ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ಗೆಲುವು, ಕಾಂಗ್ರೆಸ್ಸಿನ ಪುನರುತ್ಥಾನಕ್ಕೆ ಮುನ್ನುಡಿ ಬರೆಯಲಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕರ್ನಾಟಕದ ಚುನಾವಣೆ ಪಕ್ಷದ ಪಾಲಿಗೆ ಅತ್ಯಂತ ಮಹತ್ವದ್ದು ಎಂದು ಸಾರಿದ್ದಾರೆ.
ಜೊತೆಗೆ 1978ರ ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿ ಹೇಗೆ ಕರ್ನಾಟಕದ ಚಿಕ್ಕಮಗಳೂರಿನಿಂದ ಗೆದ್ದ ನಂತರ ಕಾಂಗ್ರೆಸ್ ಪಕ್ಷ ಮತ್ತಷ್ಟುಗಟ್ಟಿಯಾಗಿ ರೂಪುಗೊಂಡಿತೋ ಹಾಗೆಯೇ ಈ ಬಾರಿ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಪಕ್ಷಕ್ಕೆ ಟರ್ನಿಂಗ್ ಪಾಯಿಂಟ್ ಆಗಲಿದೆ ಎಂದು ಹೇಳಿದ್ದಾರೆ.
ಶನಿವಾರ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ ಅವರು, 40 ವರ್ಷದ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಲ್ಲಿ ಲೋಕಸಭೆಯ ಉಪಚುನಾವಣೆಗೆ ನಿಂತು ಗೆದ್ದಿದ್ದನ್ನು ನೆನಪಿಸಿಕೊಂಡರು. ಅಂದು ಇಂದಿರಾ ಗೆದ್ದ ನಂತರ ಪಕ್ಷ ರಾಷ್ಟ್ರ ಮಟ್ಟದಲ್ಲಿ ಮೊದಲಿಗಿಂತ ಬಲಿಷ್ಠವಾಗಿ ರೂಪುಗೊಂಡಿತು. ಅದೇ ರೀತಿ, ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲುವ ಸಂಪೂರ್ಣ ವಿಶ್ವಾಸ ನಮಗಿದೆ. ಈ ಗೆಲುವು ಪಕ್ಷಕ್ಕೆ ಟರ್ನಿಂಗ್ ಪಾಯಿಂಟ್ ಆಗಲಿದ್ದು, ಪಕ್ಷದ ಪುನರುತ್ಥಾನಕ್ಕೆ ಇದೇ ನಾಂದಿಯಾಗಲಿದೆ ಎಂದು ಹೇಳಿದರು.
ಬೆಂಗಳೂರು: 40 ವರ್ಷ ಹಿಂದೆ ಇಂದಿರಾ ಗಾಂಧಿ ಗೆದ್ದಂತೆ ಈ ಬಾರಿ ಕಾಂಗ್ರೆಸ್ ಕರ್ನಾಟಕದಲ್ಲಿ ಗೆದ್ದು ಪುನರುತ್ಥಾನಗೊಳ್ಳಲಿದೆ ಎಂಬ ಸೋನಿಯಾ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, ‘ಕರ್ನಾಟಕದಿಂದ ಆರಂಭಿಸಿ ದೇಶದೆಲ್ಲೆಡೆ ಅಧಿಕಾರಕ್ಕೆ ಬರುವ ನಿಮ್ಮ ಆಸೆ ಈಡೇರುವುದಿಲ್ಲ. ಏಕೆಂದರೆ, 1. 80ರ ದಶಕಕ್ಕೆ ಹೋಲಿಸಿದರೆ ಈಗ ಜನರು ಸಾಕಷ್ಟುಸಾಕ್ಷರರಾಗಿದ್ದಾರೆ. ಜನರು ಸುಶಿಕ್ಷಿತರಾದಷ್ಟೂಕಾಂಗ್ರೆಸ್ಸನ್ನು ತಿರಸ್ಕರಿಸುತ್ತಾರೆ. 2. ಎಲ್ಲಕ್ಕಿಂತ ಹೆಚ್ಚಾಗಿ 40 ವರ್ಷದ ಹಿಂದೆ ನಾವಿರಲಿಲ್ಲ!’ ಎಂದು ವ್ಯಾಖ್ಯಾನಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.