ಮೀಸಲಿಗಾಗಿ ಇಂದು ಕರವೇ ಪ್ರತಿಭಟನೆ

By Suvarna Web DeskFirst Published Dec 23, 2017, 8:43 AM IST
Highlights

ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮೀಸಲಾತಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯು (ಟಿ.ಎ.ನಾರಾಯಣಗೌಡ ಬಣ) ಶನಿವಾರ ಡಿ.೨೩ರಂದು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಿಂದ ವಿಧಾನಸೌಧದವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸುತ್ತಿದೆ.

ಬೆಂಗಳೂರು (ಡಿ.23): ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮೀಸಲಾತಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯು (ಟಿ.ಎ.ನಾರಾಯಣಗೌಡ ಬಣ) ಶನಿವಾರ ಡಿ.೨೩ರಂದು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಿಂದ ವಿಧಾನಸೌಧದವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸುತ್ತಿದೆ.

ನ್ಯಾಷನಲ್ ಕಾಲೇಜು ಮೈದಾನದಿಂದ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿರುವ  ರ್ಯಾಲಿಯಲ್ಲಿ ನಾಡಿನ ನಾನಾ ಭಾಗಗಳ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಲಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಇದು ಕೇವಲ ಸಾಂಕೇತಿಕ ಪ್ರತಿಭಟನೆ ಅಲ್ಲದೆ, ಬೇಡಿಕೆ ಈಡೇರಿಸುವವರೆಗೂ ಮುಂದುವರಿಯಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.

ಭಾರತ ಒಂದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟ. ಭಾಷಿಕರ ಬದುಕಿನ ಹಕ್ಕನ್ನು ರಕ್ಷಿಸಿಕೊಳ್ಳುವ ಹಾಗೂ ಕಟ್ಟಿಕೊಳ್ಳುವ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಕರ್ನಾಟಕದಲ್ಲಿ ಕನ್ನಡಿಗರ ಬದುಕು ಹಸನಾಗಲಿ ಎಂಬ ಉದ್ದೇಶದಿಂದ ಸರ್ಕಾರ ಉದ್ಯಮಿಗಳಿಗೆ ಕಡಿಮೆ ದರದಲ್ಲಿ ಭೂಮಿ, ವಿದ್ಯುತ್, ನೀರು ಹಾಗೂ ತೆರಿಗೆ ವಿನಾಯ್ತಿ ಮೊದಲಾದ ಸೌಲಭ್ಯಗಳನ್ನು ನೀಡುತಾ ಬಂದಿದೆ. ಈ ಉದ್ದಿಮೆಗಳ ಸ್ಥಾಪನೆಗಾಗಿಯೇ ಸ್ಥಳೀಯರು ನಾನಾ ರೀತಿಯ ತ್ಯಾಗ ಮಾಡುತ್ತಿದ್ದಾರೆ. ಹಾಗಾಗಿ ಇಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲು ಸಿಗಬೇಕಿದೆ.

ಈ ತಾರತಮ್ಯ ತಪ್ಪಿಸುವ ಸರೋಜಿನಿ ಮಹಿಷಿ ವರದಿ ಇದುವರೆಗೂ ಜಾರಿಯಾಗಿಲ್ಲ. ಉದ್ಯೋಗದ ಬಗ್ಗೆ ಸ್ಪಷ್ಟ ನೀತಿ ರೂಪಿಸದ ಪರಿಣಾಮ ಖಾಸಗೀಕರಣದ ಬಳಿಕ ರಾಜ್ಯದಲ್ಲಿ ಸ್ಥಾಪಿತವಾದ ಉದ್ದಿಮೆಗಳಲ್ಲಿ ಹೊರರಾಜ್ಯದ  ಉದ್ಯೋಗಿಗಳೇ ತುಂಬಿದ್ದಾರೆ. ಕೇಂದ್ರ ಸರ್ಕಾರದ ಹುದ್ದೆಗಳಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ವಲಸಿಗರ ಅಬ್ಬರದಲ್ಲಿ ಸ್ಥಳೀಯರು, ಭಾಷೆ, ಸಂಸ್ಕೃತಿ, ಆರ್ಥಿಕತೆ ಅಳಿದು ಹೋಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.  ರಾಜ್ಯದಲ್ಲಿ ಎಲ್ಲ ಹಂತದ ಖಾಸಗಿ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ಖಾತರಿಪಡಿಸುವ ಕಾನೂನು ಜಾರಿಗೊಳಿಸಬೇಕು ಎಂದೂ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.

click me!