ಬಿಜೆಪಿಗೆ ಮತ ಹಾಕದಂತೆ ಕನ್ನಡ ಸಮರ

By Suvarna Web DeskFirst Published Jan 20, 2018, 9:34 AM IST
Highlights

ಕನ್ನಡ ಹೋರಾಟಗಾರರು ಸಾಮಾಜಿಕ ಜಾಲತಾಣದಲ್ಲಿ ‘ಸರ್ವ ಜನಾಂಗದ ಶಾಂತಿಯ ತೋಟ’ ಹ್ಯಾಶ್‌'ಟ್ಯಾಗ್ ಸೃಷ್ಟಿಸಿ ಬಿಜೆಪಿಗೆ ನನ್ನ ಮತ ಇಲ್ಲ ಎಂಬ ಆಂದೋಲನ ಆರಂಭಿಸಿದ್ದಾರೆ. ಕನ್ನಡ ಕಾರ್ಯಕರ್ತರು ಬಿಜೆಪಿ ಹೇಗೆಲ್ಲ ಕನ್ನಡ ವಿರೋಧಿಯಾಗಿ ವರ್ತಿಸುತ್ತಿದೆ ಎಂಬುದನ್ನು ಸವಿವರವಾಗಿ ವಿವರಿಸಿ, ಆ ಪಕ್ಷಕ್ಕೆ ತಾವು ಮತ ನೀಡುವುದಿಲ್ಲ ಎಂದು ಘೋಷಿಸುತ್ತಾರೆ.

ಬೆಂಗಳೂರು(ಜ.20): ‘ಬಿಜೆಪಿ ಹಿಂದಿ ಪ್ರೇಮಿ ಹಾಗೂ ಕನ್ನಡ ವಿರೋಧಿ. ಆದ್ದರಿಂದ ಈ ಪಕ್ಷಕ್ಕೆ ಮತ ನೀಡಲ್ಲ’ ಎಂಬ ಆಂದೋಲನ ಸಾಮಾಜಿಕ ಜಾಲ ತಾಣಗಳಲ್ಲಿ ನಡೆಯುತ್ತಿದೆ. ತಮ್ಮ ಆಂತರಿಕ ಸಮಸ್ಯೆಯಿಂದ ಬಳಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಚುನಾವಣೆ ಹೊತ್ತಿನಲ್ಲಿ ಇಂಥ ಏಟು ನೀಡುತ್ತಿವೆ ಕನ್ನಡ ಪರ ಸಂಘಟನೆಗಳು. ಹಿಂದೆ ‘ವೆಂಕಯ್ಯ ಸಾಕಯ್ಯ’ ಎಂಬ ಆಂದೋಲನ ನಡೆಸಿ ಹಾಲಿ ಉಪರಾಷ್ಟ್ರಪತಿ, ಆಗ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಅವರಿಗೆ ಚುರುಕು ಮೂಡಿಸಿದ್ದ ರೀತಿ ಈಗಲೂ ಸಾಮಾಜಿಕ ತಾಣಗಳಲ್ಲಿ ಬಿಜೆಪಿ ವಿರೋಧಿ ಆಂದೋಲನ ನಡೆದಿರುವುದು ಯಡಿಯೂರಪ್ಪನವರಿಗೆ ನುಂಗಲಾರದ ತುತ್ತು.

ರಾಜ್ಯ ಚುನಾವಣೆಯಲ್ಲಿ ಇಷ್ಟೂ ವರ್ಷ ಕನ್ನಡ ಎನ್ನುವುದು ಮತದಾನದ ಮೇಲೆ ಪರಿಣಾಮ ಬೀರುವ ವಿಷಯ ಆಗಿರಲಿಲ್ಲ. ಆದರೆ, ಈ ಬಾರಿ ಚುನಾವಣೆಯಲ್ಲಿ ಒಂದಷ್ಟು ಪ್ರಭಾವ ಬೀರುವುದು ನಿಶ್ಚಿತವಾಗಿದೆ. ಒಂದು ಕಡೆ ಕನ್ನಡಾಭಿಮಾನಿಗಳು ಹಾಗೂ ಕನ್ನಡ ಹೋರಾಟಗಾರರ ಬಹು ದೊಡ್ಡ ಪಡೆಯನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ತಂತ್ರ ರೂಪಿಸುತ್ತಿದ್ದರೆ ಯಡಿಯೂರಪ್ಪನವರಿಗೆ ಮಾತ್ರ ಅನವಶ್ಯಕವಾಗಿ ಅವರದಲ್ಲದ ತಪ್ಪಿಗೆ ಕನ್ನಡಾಭಿಮಾನಿಗಳ ವಿರೋಧ ತಟ್ಟಿದೆ. ಕರ್ನಾಟಕ ವಿರೋಧಿ ಎಂಇಎಸ್ ಹಾಗೂ ಶಿವಾಜಿಯ ರಾಷ್ಟ್ರೀಯ ಹಿಂದೂ ವ್ಯಕ್ತಿತ್ವವನ್ನು ಬೆಂಬಲಿಸಿ ಬಿಜೆಪಿಯ ಸೋಷಿಯಲ್ ಮೀಡಿಯಾ ವಾರಿಯರ್'ಗಳು ಕನ್ನಡ ಹೋರಾಟಗಾರರ ವಿರುದ್ಧ ನಡೆಸುತ್ತಿರುವ ಇಂಟರ್‌'ನೆಟ್ ಹೋರಾಟ ಬಿಜೆಪಿಗೇ ತಿರುಗುಬಾಣವಾಗುತ್ತಿದೆ. ಈ ಹೋರಾಟದ ಮೂಲಕ ಕನ್ನಡ ಮತಗಳನ್ನು ಚಿನ್ನದ ತಟ್ಟೆಯಲ್ಲಿಟ್ಟು ಬಿಜೆಪಿ ತನ್ನ ವಿರೋಧಿಗಳಿಗೆ ಧಾರೆ ಎರೆಯುತ್ತಿರುವುದು ಬಿಜೆಪಿಯ ಹಿರಿಯ ನಾಯಕರಿಗೆ ತಲೆ ನೋವಾಗಿದೆ.

ಏನಿದು ಆಂದೋಲನ?: ಕನ್ನಡ ಎಂಬುದು ಎಂದೂ ರಾಜ್ಯದಲ್ಲಿ ಒಂದು ವೋಟ್‌'ಬ್ಯಾಂಕ್ ಆಗಿ ರೂಪುಗೊಂಡಿರಲಿಲ್ಲ. ಆದರೆ, ಬಿಜೆಪಿಯ ಸಾಮಾಜಿಕ ಜಾಲತಾಣದ ಯುದ್ಧಾಳುಗಳು (ಸೋಷಿಯಲ್ ಮೀಡಿಯಾ ವಾರಿಯರ್ಸ್) ತೋರಿದ ಅತ್ಯುತ್ಸಾಹ ಕನ್ನಡ ಹೋರಾಟಗಾರರನ್ನು ಬಿಜೆಪಿಯ ವಿರುದ್ಧ ಈ ಬಾರಿ ಸೆಟೆದೆದ್ದು ನಿಲ್ಲುವಂತೆ ಮಾಡಿದೆ. ಕನ್ನಡದ ಹೋರಾಟಗಾರರ ದೊಡ್ಡ ಸಮೂಹ ಬಿಜೆಪಿ ವಿರುದ್ಧ ಬಹಿರಂಗ ಹೋರಾಟಕ್ಕೆ ಇಳಿದಿದ್ದು, ‘ಬಿಜೆಪಿಗೆ ನನ್ನ ಮತ ಇಲ್ಲ’ ಎಂಬ ಆಂದೋಲನವನ್ನೇ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಾಕಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ‘ಹ್ಯಾಶ್ ಟ್ಯಾಗ್’ನಡಿ ಸಾಮಾಜಿಕ ಜಾಲತಾಣದಲ್ಲಿ ನಡೆದಿರುವ ಈ ಹೋರಾಟ ಬೃಹದಾಕಾರ ತಾಳುತ್ತಿದ್ದು, ಕ್ರಮೇಣ

ಬೀದಿಗಿಳಿಯಲು ಸಜ್ಜಾಗಿದೆ. ಅಷ್ಟೇ ಅಲ್ಲ, ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಗಳಿಗೆ ವಿರುದ್ಧವಾಗಿ ಪ್ರಬಲ ಪ್ರತಿಸ್ಪರ್ಧಿ (ಜೆಡಿಎಸ್ ಅಥವಾ ಕಾಂಗ್ರೆಸ್) ಯಾರೇ ಆಗಿದ್ದರೂ ಅವರಿಗೆ ಬೆಂಬಲ ನೀಡಲು ಕನ್ನಡ ಹೋರಾಟಗಾರರು ನಿರ್ಧರಿಸಿದ್ದಾರೆ. ಬಿಜೆಪಿಯು ಹೇಗೆ ಕನ್ನಡ ವಿರೋಧಿಯಾಗಿ ವರ್ತಿಸುತ್ತಾ ಬಂದಿದೆ ಎಂಬುದನ್ನು ಪಟ್ಟಿ ಮಾಡಿ ಕನ್ನಡಕ್ಕೆ ಬೆಂಬಲ ನೀಡುವ ಅಭ್ಯರ್ಥಿಗೆ ಮತ ಹಾಕುವಂತೆ ಪ್ರಚಾರ ಕೈಗೊಳ್ಳಲು ಉದ್ದೇಶಿಸಿದ್ದಾರೆ ಎನ್ನುತ್ತವೆ ಮೂಲಗಳು. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ತನ್ನನ್ನು ತಾನು ಕನ್ನಡ ಆಸ್ಮಿತೆಯ ಹರಿಕಾರ ಎಂದು ಬಿಂಬಿಸಿಕೊಳ್ಳುತ್ತಿದ್ದು, ಕನ್ನಡ ಭಾಷೆ, ಬಾವುಟ ಹಾಗೂ ಆಸ್ಮಿತೆಗೆ ಹೆಚ್ಚು ಬೆಂಬಲ ನೀಡುವ ಮೂಲಕ ಬಿಜೆಪಿಯ ರಾಷ್ಟ್ರೀಯತೆಯನ್ನು ಪ್ರಾದೇಶಿಕತೆ ಅಸ್ತ್ರದಿಂದ ಮಣಿಸಲು ಮುಂದಾಗಿದೆ. ಇದಕ್ಕೆ ಈಗ ಪರೋಕ್ಷವಾಗಿ ಕನ್ನಡ ಹೋರಾಟಗಾರರು ಕೈ ಜೋಡಿಸಿರುವುದು ಬಿಜೆಪಿ ಪಾಲಿಗೆ ನುಂಗಲಾಗದ ತುತ್ತಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಯಿದೆ.

ಕನ್ನಡ ಅಸ್ಮಿತೆಯೇ ರಾಷ್ಟ್ರ ವಿರೋಧಿ, ಹಿಂದಿ ಹೇರಿಕೆ ವಿರೋಧಿಸಿದರೆ ವಿದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ. ವಿಜಯಪುರದಲ್ಲಿ ನಾನು ಮಾಡಿದ ಭಾಷಣವನ್ನು ತಿರುಚಿ ಹಿಂದು ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಯತ್ನಿಸಲಾಗಿದೆ. ಇವರು ಮಾತ್ರ ಹಿಂದುಗಳೇನು? ನಾವ್ಯಾರೂ ಹಿಂದುಗಳಲ್ಲವೇ? ಮುಖ್ಯವಾಗಿ ಕರವೇ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿಚಾರದಲ್ಲಿ ಹೋರಾಟ ನಡೆಸಿದಾಗಿನಿಂದ ಇಂತಹವರು ಜಾಲತಾಣದಲ್ಲಿ ಹೋರಾಟಗಾರರನ್ನು ಕೆಣಕುತ್ತಲೇ ಇದ್ದರು. ಅಲ್ಲಿಂದ ಶುರುವಾಗಿದ್ದು, ಬೆಳೆಯುತ್ತಲೇ ಇದೆ. ಇನ್ನಾದರೂ ಬಿಜೆಪಿಯ ನಾಯಕರು ಎಚ್ಚೆತ್ತುಕೊಳ್ಳಬೇಕು. ತಮ್ಮ ಸಂಘಟನೆಗಳ ಇಂತಹ ನಡವಳಿಕೆ ಹೊಂದಿರುವರನ್ನು ಕರೆದು ಎಚ್ಚರಿಕೆಯನ್ನು ಬಿಜೆಪಿ ನಾಯಕರು ಹೇಳಬೇಕು. ಇಲ್ಲದಿದ್ದರೆ ಪರಿಣಾಮ ಗಂಭೀರವಾಗಿರುತ್ತದೆ. ಇಷ್ಟಕ್ಕೂ ಈ ಹೋರಾಟಕ್ಕೂ ಪಕ್ಷ ರಾಜಕಾರಣಕ್ಕೂ ಯಾವ ಸಂಬಂಧವಿಲ್ಲ. ಕನ್ನಡ ವಿಷಯದ ಬಗ್ಗೆ ನಡೆದಿರುವ ಹೋರಾಟವಿದು. ಕಾಂಗ್ರೆಸ್ ಹಾಗೂ ಜೆಡಿಎಸ್'ಗಾಗಲಿ ಈ ಹೋರಾಟದೊಂದಿಗೆ ಸಂಬಂಧವಿಲ್ಲ. ಅದಕ್ಕಾಗಿ ಬಿಜೆಪಿ ತಾನಾಗಿ ಮೈಮೇಲೆ ಚಪ್ಪಡಿ ಎಳೆದುಕೊಳ್ಳುವುದಿದ್ದರೆ ನಮ್ಮ ಅಭ್ಯಂತರವಿಲ್ಲ.

ಟಿ.ಎ.ನಾರಾಯಣಗೌಡ ಕರವೇ ಅಧ್ಯಕ್ಷ

ಬಿಜೆಪಿ ಮೇಲೇಕೆ ಹೋರಾಟಗಾರರಿಗೆ ಸಿಟ್ಟು?: ಇಷ್ಟಕ್ಕೂ ಯಡಿಯೂರಪ್ಪ ಅಥವಾ ಅನಂತ ಕುಮಾರ್ ಅವರ ಬಗ್ಗೆ ಯಾವುದೇ ತಕರಾರಿಲ್ಲ ಈ ಹೋರಾಟಗಾರರಿಗೆ. ಹಿಂದುತ್ವ ಅಥವಾ ಮೋದಿಗಿರಿಯ ಸಮಸ್ಯೆಯೂ ಇದಲ್ಲ. ಒಂದು ಚಿಕ್ಕ ವಿಷಯದಿಂದ ಆರಂಭವಾದ ಸೋಷಿಯಲ್ ಮೀಡಿಯಾದ ವೈಯಕ್ತಿಕ ಬೈದಾಟಗಳು ಈಗ ಬಿಜೆಪಿಯ ಬುಡಕ್ಕೆ ಬಂದು ನಿಂತಿವೆ ಎನ್ನುತ್ತಾರೆ ಈ ಹೋರಾಟವನ್ನು ಬಲ್ಲವರು. ರಾಷ್ಟ್ರೀಯತೆಯನ್ನು ಸಮರ್ಥಿಸಿಕೊಳ್ಳಲು ಹೋಗಿ ಬಿಜೆಪಿಯ ಜಾಲತಾಣ ಯುದ್ಧಾಳುಗಳು ಕನ್ನಡದ ಪ್ರಾದೇಶಿಕ ಹೋರಾಟವನ್ನು ದೇಶ ವಿಭಜನೆಯೆಂದು ಜರಿಯುತ್ತಿದ್ದಾರೆ. ಕನ್ನಡದ ಹೋರಾಟಗಳನ್ನು ಗೂಂಡಾಗಿರಿ ಎಂದು ಟೀಕಿಸುತ್ತಿದ್ದಾರೆ. ಕನ್ನಡ ಭಾಷೆ ಬಗೆಗಿನ ಪ್ರೀತಿಯನ್ನು ಭಾರತದ ಬಗೆಗಿನ ದ್ವೇಷ ಎಂದು ತಿರುಚುತ್ತಿದ್ದಾರೆ. ಕನ್ನಡ ಆಸ್ಮಿತೆಯೇ ರಾಷ್ಟ್ರದ್ರೋಹವೆಂದು ಆರೋಪಿಸುತ್ತಿದ್ದಾರೆ. ಹಿಂದಿ ವಿರುದ್ಧ ಮಾತನಾಡಿದರೆ ಅದು ದೇಶದ ಏಕತೆಗೆ ಭಂಗ ತುರುವ ಕೃತ್ಯ ಎಂದು ಬಿಂಬಿಸುತ್ತಿದ್ದಾರೆ. ಕನ್ನಡಕ್ಕಾಗಿ ಹಲವು ದಶಕಗಳಿಂದ ಹೋರಾಡುತ್ತಾ ಬಂದಿರುವ ಕಾರ್ಯಕರ್ತರನ್ನು ತೀರಾ ವೈಯಕ್ತಿಕ ಮಟ್ಟದ ಕೀಳು ಭಾಷೆಗಳನ್ನು ಬಳಸಿ ನಿಂದಿಸಲಾಗುತ್ತಿದೆ. ಇದಕ್ಕೆ ಪರೋಕ್ಷವಾಗಿ ಬಿಜೆಪಿ ನೇತಾರರ ಬೆಂಬಲವಿದೆ. ಇದು ಕನ್ನಡಿಗರನ್ನು ಸಿಡಿದೇಳುವಂತೆ ಮಾಡಿದೆ ಎಂದು ಅವರು ವಿವರಿಸುತ್ತಾರೆ.

ಇದರ ಪರಿಣಾಮವಾಗಿ ಕನ್ನಡ ಹೋರಾಟಗಾರರು ಸಾಮಾಜಿಕ ಜಾಲತಾಣದಲ್ಲಿ ‘ಸರ್ವ ಜನಾಂಗದ ಶಾಂತಿಯ ತೋಟ’ ಹ್ಯಾಶ್‌'ಟ್ಯಾಗ್ ಸೃಷ್ಟಿಸಿ ಬಿಜೆಪಿಗೆ ನನ್ನ ಮತ ಇಲ್ಲ ಎಂಬ ಆಂದೋಲನ ಆರಂಭಿಸಿದ್ದಾರೆ. ಕನ್ನಡ ಕಾರ್ಯಕರ್ತರು ಬಿಜೆಪಿ ಹೇಗೆಲ್ಲ ಕನ್ನಡ ವಿರೋಧಿಯಾಗಿ ವರ್ತಿಸುತ್ತಿದೆ ಎಂಬುದನ್ನು ಸವಿವರವಾಗಿ ವಿವರಿಸಿ, ಆ ಪಕ್ಷಕ್ಕೆ ತಾವು ಮತ ನೀಡುವುದಿಲ್ಲ ಎಂದು ಘೋಷಿಸುತ್ತಾರೆ. ನೂರಾರು ಮಂದಿ ಕಾರ್ಯಕರ್ತರು ಈಗಾಗಲೇ ಈ ಆಂದೋಲನಕ್ಕೆ ಧುಮುಕ್ಕಿದ್ದು, ಕ್ರಮೇಣ ಇದು ವೈರಲ್ ಆಗುತ್ತಿದೆ. ಬಿಜೆಪಿಗೆ ಕನ್ನಡ ವಿರೋಧಿ ಪಟ್ಟ: ಬಿಜೆಪಿ ವಿರುದ್ಧ ರಾಜ್ಯದ ಹಲವು ಕನ್ನಡ ಸಂಘಟನೆಗಳು ಒಗ್ಗಟ್ಟಾಗಿವೆ. ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಪ್ರವೀಣ್ ಶೆಟ್ಟಿ ನೇತೃತ್ವದ ಸಂಘಟನೆಗಳು ಹಾಗೂ ನಾರಾಯಣಗೌಡರ ರಕ್ಷಣಾ ವೇದಿಕೆಯೂ ಜ. 25ರಂದು ಮಹದಾಯಿ ವಿಚಾರವಾಗಿ ಪ್ರತಿಭಟನೆಗೆ ಇಳಿದಿರುವುದು ವಾಸ್ತವವಾಗಿ ಬಿಜೆಪಿ ವಿರುದ್ಧದ ಹೋರಾಟ ಎಂದೇ ಬಿಂಬಿಸಲಾಗುತ್ತಿದೆ. ಒಟ್ಟಾರೆ ಬೆಳವಣಿಗೆಯಲ್ಲಿ ಬಿಜೆಪಿ ಕನ್ನಡ ವಿರೋಧಿ ಎಂಬ ಪಟ್ಟ ಪಡೆದುಕೊಂಡಿದ್ದು ಈ ಚುನಾವಣೆಯಲ್ಲಿ ಕನ್ನಡ ನಾಯಕರಿಗೆ ನಷ್ಟವೇನೂ ಇಲ್ಲ. ಅದೇ, ಒಂದೊಂದು ಮತವೂ ಅಮೂಲ್ಯವಾಗಿರುವಾಗ ಸಂದರ್ಭದಲ್ಲಿ ಬಿಜೆಪಿ ಗುಂಪು ಗುಂಪಾಗಿ ಕನ್ನಡ ಮತಗಳನ್ನು ಕಳೆದುಕೊಳ್ಳುತ್ತಿದೆ.

ಎಸ್ ಗಿರೀಶ್ ಬಾಬು, ಕನ್ನಡಪ್ರಭ
 

click me!