
ನವದೆಹಲಿ: ಕಾರ್ಯಕ್ರಮವೊಂದರಲ್ಲಿ ಮಾತನಾಡಲು ಆಗಮಿಸಿದ್ದ ದೆಹಲಿಯ ಜವಾಹರ್‌ಲಾಲ್ ನೆಹರೂ ವಿವಿ(ಜೆಎನ್‌ಯು) ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಪ್ರೇಕ್ಷಕರಲ್ಲಿ ಕೆಲವರು ಅಪಹಾಸ್ಯ ಮಾಡಿದ ಘಟನೆ ಶನಿವಾರ ನಡೆದಿದೆ. ಸ್ವಲ್ಪ ಹೊತ್ತು ಮಾತನಾಡಿದ ಕನ್ಹಯ್ಯ, ಅರ್ಧದಲ್ಲಿಯೇ ಭಾಷಣವನ್ನು ಮೊಟಕುಗೊಳಿಸಿದ್ದಾರೆ. ಇಂಡಿಯಾ ಟುಡೇ ಮೈಂಡ್ ರಾಕ್ಸ್ ಕಾರ್ಯಕ್ರಮದಲ್ಲಿ ಆಜಾದಿ ಬಗ್ಗೆ ಮಾತನಾಡಲು ಕನ್ಹಯ್ಯ ವೇದಿಕೆ ಹತ್ತುತ್ತಿದ್ದಂತೆ, ಕೆಲವರು ಅವರ ವಿರುದ್ಧ ಘೋಷಣೆ ಕೂಗತೊಡಗಿದರು. ಅವರು ಮಾತನಾಡುತ್ತಿರುವಾಗ ನಿರಂತರವಾಗಿ ಘೋಷಣೆ ಕೂಗುತ್ತಾ ಭಾಷಣಕ್ಕೆ ಅಡ್ಡಿಪಡಿಸಿದರು. ಕೊನೆಗೆ ಅವರು ಭಾಷಣ ಮೊಟಕುಗೊಳಿಸಿ, ವಾಪಸಾದರು.
ಭಾಷಣ ಮುಗಿಸಿ ವಾಪಸ್ಸಾಗುವ ಮುನ್ನ ಪ್ರಧಾನಿ ಮೋದಿಯವರನ್ನು ಟೀಕಿಸಲು ಕನ್ಹಯ್ಯ ಮರೆಯಲಿಲ್ಲ. ದೇಶದಲ್ಲಿ ಶೇ. 65 ಮಂದಿ ಯುವಕರಿದ್ದರೂ 65 ವರ್ಷದ ವ್ಯಕ್ತಿಯೊಬ್ಬರು ನಮ್ಮನ್ನು ಆಳುತ್ತಿದ್ದಾರಲ್ಲಾ? ಎಂದು ಕುಟುಕಿದರು. ಮೋದಿಯನ್ನು ಟೀಕಿಸುತ್ತಿದ್ದಂತೆಯೇ ಸಭಿಕರು ಪ್ರತಿಭಟಿಸತೊಡಗಿದಾಗ, "ನೀವಿಲ್ಲಿ ಘೋಷಣೆ ಕೂಗಲು ಸ್ವತಂತ್ರರು. ಈ ದೇಶದಲ್ಲಿ ಸ್ವಾತಂತ್ರ್ಯವಿದೆ. ನಿಮಗೆ ದೇಶದ್ರೋಹದ ಆರೋಪ ದಾಖಲಾಗುವುದಿಲ್ಲ" ಎಂದು ಮಾರ್ಮಿಕವಾಗಿ ಹೇಳಿದರು.
ಜೈಲಿನ ಅನುಭವದ ಬಗ್ಗೆ ಮಾತನಾಡಿದ ಕನ್ಹಯ್ಯ, "ಜೈಲಿಗೆ ಹೋಗುವುದರಲ್ಲಿ ತಪ್ಪೇನು? ಮಹಾತ್ಮ ಗಾಂಧಿ, ಭಗತ್ ಸಿಂಗ್'ರಂಥವರು ಜೈಲಿಗೆ ಹೋಗಿರಲಿಲ್ಲವೇ?" ಎಂದು ಪ್ರಶ್ನಿಸಿದರು.
ಜೈಲಿಗೆ ಹೋಗಲು ನಿಮಗೆ ಅಷ್ಟು ಇಷ್ಟವೇ ಎಂದು ಕೇಳಿದ ಪ್ರಶ್ನೆಗೆ, "ನಮ್ಮ ಅನೇಕರಿಗೆ ವಿಶ್ವವೇ ಒಂದು ಜೈಲಿದ್ದಂತೆ. ಮಹಿಳೆಯರು ರಾತ್ರಿಯ ಹೊತ್ತು ಹೊರಗೆ ಹೋಗಲು ಸಾಧ್ಯವಿಲ್ಲವೆಂದಾದರೆ ಅವರು ಜೈಲಿನಲ್ಲಿದ್ದಂತೆಯೇ. ನಿರುದ್ಯೋಗಿಗಳಾಗಿರುವ, ಬೀದಿಗಳಲ್ಲಿ ಜೀವನ ನಡೆಸುತ್ತಿರುವ ಜನರು ಜೈಲಿನಲ್ಲಿದ್ದಂತೆ. ದೊಡ್ಡ ಜೈಲಿನಲ್ಲಿ(ವಿಶ್ವ) ಇರುವ ಬದಲು ಸಣ್ಣ ಜೈಲಿನಲ್ಲಿ ಇರುವುದು ಎಷ್ಟೋ ವಾಸಿ" ಎಂದು ಕನ್ಹಯ್ಯ ಕುಮಾರ್ ಅಭಿಪ್ರಾಯಪಟ್ಟರು.
ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಹಾಗೂ ಕಮ್ಯೂನಿಸ್ಟ್ ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ಕನ್ಹಯ್ಯ ಕುಮಾರ್ ಅವರು ಫೆ.9ರಂದು ಜೆಎನ್'ಯು ಕ್ಯಾಂಪಸ್'ನಲ್ಲಿ ದೇಶವಿರೋಧ ಘೋಷಣೆ ಕೂಗಿದ ಪ್ರಕರಣದಲ್ಲಿ ತಮ್ಮ ಕೆಲ ಸಹ-ವಿದ್ಯಾರ್ಥಿಗಳೊಂದಿಗೆ ಬಂಧಿತರಾಗಿದ್ದರು. ಇದೀಗ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಭಾರತ ವಿರೋಧಿ ಹಾಗೂ ಸೇನಾ ವಿರೋಧಿ ಘೋಷಣೆಗಳನ್ನು ಕೂಗಲು ಅವಕಾಶ ಮಾಡಿಕೊಟ್ಟ ಆರೋಪ ಕನ್ಹಯ್ಯ ಕುಮಾರ್ ಮೇಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.