ಕಲ್ಲಡ್ಕ ಶಾಲೆಗೆ ಮತ್ತೆ ಅನ್ನ ದಾಸೋಹ ಭಾಗ್ಯ

First Published Jun 1, 2018, 11:15 AM IST
Highlights

'ಮಕ್ಕಳ ಅನ್ನ ಕಸಿದುಕೊಂಡ ಸರಕಾರ' ಎಂದು ಭಾರಿ ವಿವಾದಕ್ಕೆ ಕಾರಣವಾಗಿದ್ದ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಸೇರಿರುವ ಶಾಲಾ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದಿಂದ ಮತ್ತೆ ಅನ್ನ ದಾಸೋಹ ಭಾಗ್ಯ ಸಿಗಲಿದೆ. ಅನ್ನ ದಾಸೋಹಕ್ಕಾಗಿ ಶಾಲಾ ಆಡಳಿತ ಮಂಡಳಿ ಸರಕಾರಕ್ಕೆ ಪತ್ರ ಬರೆದಿದ್ದು, ಪತ್ರಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ.

ಬಂಟ್ವಾಳ: ಭಾರೀ ವಿವಾದವಾಗಿದ್ದ ಕಲ್ಲಡ್ಕ ಶಾಲೆಯ ಬಿಸಿಯೂಟ ರಾದ್ಧಾಂತ ಇದೀಗ ಸುಖಾಂತ್ಯ ಕಾಣುತ್ತಲ್ಲಿದ್ದು, ಶಾಲೆಯ ಆಡಳಿತ ಮಂಡಳಿ ಬಿಸಿಯೂಟಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಸರಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ.

ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಶ್ರೀರಾಮ ವಿದ್ಯಾಕೇಂದ್ರದ ಅನುದಾನಿತ ಮಕ್ಕಳ ಬಿಸಿಯೂಟ ಕಸಿದುಕೊಂಡ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಇದೇ ಚುನಾವಣಾ ವಿಷಯವಾಗಿಯೂ ಬಳಕೆಯಾಗಿ, ಈ ಕ್ಷೇತ್ರದ ಶಾಸಕ ರಮಾನಾಥ್ ರೈ ಅವರಿಗೆ ಸೋಲಿಗೂ ಕಾರಣವಾಗಿತ್ತು. 

ಬಿಸಿಯೂಟಕ್ಕಾಗಿ ಅರ್ಜಿ ಸಲ್ಲಿಸಿದ ಶಾಲೆ:

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಿಸಿಯೂಟ ಸೌಲಭ್ಯ ಒದಗಿಸುವಂತೆ ಕಲ್ಲಡ್ಕದ ಶ್ರೀ ರಾಮ ಶಾಲೆ ಹಾಗೂ ಪುಣಚದ  ಶ್ರೀದೇವಿ ಶಾಲೆಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿವೆ. 

ಕಳೆದ ಶೈಕ್ಷಣಿಕ ಅವಧಿಯ ತನಕ  ಕೊಲ್ಲೂರು ದೇವಸ್ಥಾನದಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾಸಂಸ್ಥೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆಂದು ಸಹಾಯoನ ನೀಡಲಾಗುತ್ತಿತ್ತು. 

ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನದಿಂದ ಮಧ್ಯಾಹ್ನದ ಬಿಸಿಯೂಟಕ್ಕೆ ನಗದು ರೂಪದಲ್ಲಿ ಎರಡು ಶಾಲೆಗಳಿಗೆ ಮಾತ್ರ ನೆರವು ಒದಗಿಸುವ ಬಗ್ಗೆ ಆಕ್ಷೇಪಿಸಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಬಿ.ರಮಾನಾಥ ರೈ ಸರ್ಕಾರಕ್ಕೆ ಪತ್ರ ಬರೆದಿದ್ದರು. ಬಳಿಕದ ಬೆಳವಣಿಗೆಯಲ್ಲಿ ಈ ಎರಡು ಶಾಲೆಗಳಿಗೆ ಕೊಲ್ಲೂರು ದೇವಸ್ಥಾನದಿಂದ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟದ ಅನುದಾನವನ್ನು ಸ್ಥಗಿತಗೊಳಿಸಲಾಗಿತ್ತು.

ಈ ಬೆನ್ನಲ್ಲೇ ಕಲ್ಲಡ್ಕ ಶಾಲೆಯ ಅನ್ನ ಕಿತ್ತುಕೊಂಡ ಸರ್ಕಾರ ಎಂಬ ಆರೋಪದಡಿಯಲ್ಲಿ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ರೈ ವಿರುದ್ದ ಪ್ರತಿಭಟನೆಗಳು ನಡೆದಿದ್ದವು. ಕಲ್ಲಡ್ಕ ಹಾಗೂ ಪುಣಚ ಶಾಲೆಗಳು ಸಾವಿರಾರು ವಿದ್ಯಾರ್ಥಿಗಳು, ಪೋಷಕರು  ಬಿ.ಸಿ.ರೋಡಿನಲ್ಲಿ ಬೃಹತ್ ಪ್ರತಿಭಟನೆಯನ್ನೂ ನಡೆಸಿದ್ದರು. ಈ ಸಂದರ್ಭ ಶ್ರೀರಾಮ ವಿದ್ಯಾಕೇಂದ್ರದ ಅನುದಾನಿತ ವಿಭಾಗಕ್ಕೆ ಸರ್ಕಾರದ ಅಕ್ಷರ ದಾಸೋಹದಡಿಯಲ್ಲಿ ಬಿಸಿಯೂಟ ಒದಗಿಸಲು ಅವಕಾಶವಿದ್ದು, ಈ ಕುರಿತಾಗಿ ಮನವಿ ಸಲ್ಲಿಸುವಂತೆ ಜಿ.ಪಂ.ಕಾರ್ಯನಿರ್ವಹಣಾಧಿಕಾರಿ , ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲಾ ಆಡಳಿತ ಮಂಡಳಿಗೆ ನಿರ್ದೇಶಿಸಿದ್ದರು. ಆದರೆ ಈ ಸಂಧರ್ಭ 'ಸರ್ಕಾರದ ಯಾವುದೇ ನೆರವು ಬೇಡ, ಮಕ್ಕಳ ಪೋಷಕರು, ದಾನಿಗಳು, ಶಿಕ್ಷಣ ಪ್ರೇಮಿಗಳ ನೆರವಿನಿಂದ ಮಕ್ಕಳಿಗೆ ಮಧ್ಯಾಹ್ನದ ಊಟ ಕೊಡುತ್ತೇವೆ, ಎಂದು ಶಿಕ್ಷಣ ಇಲಾಖೆಯ ಅಕ್ಷರದಾಸೋಹದ  ಬಗ್ಗೆ ನಿರಾಸಕ್ತಿ ತೋರಿದ್ದರು. 

ಮಕ್ಕಳ ಅನ್ನ ಕಸಿದ ಸರಕಾರ: 

ಅಷ್ಟೇ ಅಲ್ಲ ಬಳಿಕ ಶಾಲಾ ಜಮೀನಿನಲ್ಲಿ ವ್ಯವಸಾಯ ಮಾಡಿ ಅಕ್ಕಿ ಬೆಳೆದರು, ದಾನಿಗಳ ಬಳಿ ನೆರವು ಕೇಳಿದರು. ಭಿಕ್ಷಾಂದೇಹಿ ಕಾರ್ಯಕ್ರಮದ ಮೂಲಕ ಶಾಲೆಗೆ ಅಕ್ಕಿ ಹಾಗೂ ಇತರ ಸಾಮಾಗ್ರಿಗಳು ಹರಿದು ಬಂತು. 

ಈ ನಡುವೆ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯೂ ಅನ್ನ ಕಸಿದ ಸರ್ಕಾರ ಎಂದು ಸಚಿವ  ರಮಾನಾಥ ರೈ ವಿರುದ್ದ ಆರೋಪಗಳ ಸುರಿಮಳೆಯನ್ನೇ ಹರಿಸಿತ್ತು. ಬಿಸಿರೋಡಿಗೆ ಬಿಜೆಪಿ ಪರ ಪ್ರಚಾರಕ್ಕೆ ಬಂದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಈ ವಿಚಾರವನ್ನು ಪ್ರಸ್ತಾಪಿಸಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ವಿದ್ಯಾಭಾರತಿಯ ಎಲ್ಲಾ ಶಾಲೆಗಳಿಗೂ ಮಧ್ಯಾಹ್ನದ ಬಿಸಿಯೂಟ ನೀಡುವುದಾಗಿಯೂ ಘೋಷಿಸಿದ್ದರು. ಮತ್ತೊಂದೆಡೆ ರೈ ಯವರ ಸೋಲಿನಲ್ಲಿ ಈ ವಿವಾದವೂ ಕಾರಣವೆಂದು ತಾಲೂಕಿನಲ್ಲಿ ವಿಮರ್ಶೆಯಾಗುತ್ತಿದೆ. 

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕಲ್ಲಡ್ಕ ಶ್ರೀ ರಾಮ ಹಾಗೂ ಪುಣಚ ಶ್ರೀದೇವಿ ವಿದ್ಯಾ ಸಂಸ್ಥೆಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಅಕ್ಷರ ದಾಸೋಹದ ಅಧಿಕಾರಿಗಳು ಅರ್ಜಿ ಸ್ವೀಕರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರೂ, ಅನುದಾನಿತ ದ ವ್ಯಾಪ್ತಿಗೆ ಒಳಪಡುವ ಸುಮಾರು 900ರಷ್ಟು ಮಕ್ಕಳು ಹಾಗೂ ಪುಣಚದಲ್ಲಿ ಸುಮಾರು 100ರಷ್ಟು ಮಕ್ಕಳು ಸರ್ಕಾರದ ಬಿಸಿಯೂಟ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

ಕಲ್ಲಡ್ಕ ಶ್ರೀರಾಮ ಹಾಗೂ ಪುಣಚದ ಶ್ರೀ ದೇವಿ ವಿದ್ಯಾಸಂಸ್ಥೆಗಳಿಗೆ ಬಿಸಿಯೂಟ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿಯವರೇ ಪತ್ರ ಬರೆದಿದ್ದರು. ಆದರೆ ಕಳೆದ ಸಾಲಿನಲ್ಲಿ ಸರ್ಕಾರದ ಬಿಸಿಯೂಟ ಯೋಜನೆಯ ಬಗ್ಗೆ  ಅವರು ಆಸಕ್ತಿ ತೋರಿಲ್ಲ. ಈ ಬಾರಿ ಬೇಡಿಕೆ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿ ಮುಂದಿನ ಕ್ರಮ ಕೈಗೊಂಡಿದ್ದೇವೆ.

- ಶಿವಪ್ರಕಾಶ್ , ಕ್ಷೇತ್ರ ಶಿಕ್ಷಣಾಧಿಕಾರಿ-ಬಂಟ್ವಾಳ

ಬೇಡಿಕೆಗೆ ಅಗತ್ಯ ಸ್ಪಂದನ ನೀಡಿದ್ದೇವೆ. ಮೊದಲ ಹಂತದಲ್ಲಿ ಊಟಕ್ಕೆ ಬೇಕಿರುವ ಅಕ್ಕಿಯನ್ನು ಪೂರೈಸಲಾಗಿದೆ. ಉಳಿದಂತೆ ಬೇಳೆ, ಎಣ್ಣೆ ಹಾಗೂ ಇತರೆ ಸಾಮಾಗ್ರಿಗಳ ರವಾನೆ ಆಗಬೇಕಿದೆ.

- ನೋಣಯ್ಯ,  ವಿಸ್ತರಣಾಧಿಕಾರಿ ಅಕ್ಷರದಾಸೋಹ

click me!