
ರಾಂಚಿ(ಮೇ.19): ಮಕ್ಕಳನ್ನು ಅಪಹರಿಸುತ್ತಿದ್ದಾರೆ ಎಂಬ ವದಂತಿಯ ಹಿನ್ನಲೆಯಲ್ಲಿ ನೂರಕ್ಕೂ ಹೆಚ್ಚು ಬುಡಕಟ್ಟು ಸಮುದಾಯದವರು 2 ಪ್ರತ್ಯೇಕ ಘಟನೆಗಳಲ್ಲಿ ಕಳೆದ 24 ಗಂಟೆಗಳಲ್ಲಿ 7 ಮಂದಿಯನ್ನು ಕೊಂದಿರುವ ಘಟನೆ ಜಾರ್ಖಂಡ್'ನಲ್ಲಿ ನಡೆದಿದೆ.
ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಬುಡಕಟ್ಟು ಸಮುದಾಯ ಹೆಚ್ಚಾಗಿರುವ ದಕ್ಷಿಣದ ಸೆರೈಕೆಲಾ-ಖರ್ಸವನ್, ಈಸ್ಟ್ ಸಿಂಗ್ಬಾಮ್ ಮತ್ತು ವೆಸ್ಟ್ ಸಿಂಗ್ಬಾಮ್ ಜಿಲ್ಲೆಗಳಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಇಲ್ಲಿನ ಸ್ಥಳೀಯರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಿಕ್ಕಸಿಕ್ಕ ಅಪರಿಚಿತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ.
ಬುಡಕಟ್ಟು ವಾಸಿಗಳ ಕೋಪಕ್ಕೆ ಒಂದೇ ದಿನದಲ್ಲಿ 7 ಮಂದಿ ಬಲಿಯಾದರೆ ಕಳೆದ 10 ದಿನಗಳಲ್ಲಿ 6 ಮಂದಿ ಸ್ಥಳೀಯರಿಂದ ಹಲ್ಲೆಗೊಳಗಾಗಿ ತಪ್ಪಿಸಿಕೊಂಡಿದ್ದಾರೆ. ಮೃತಪಟ್ಟ 7 ಮಂದಿಯಲ್ಲಿ ನಾಲ್ವರು ಮುಸ್ಲಿಮರು ಹಾಗೂ ಮೂವರು ಹಿಂದುಗಳಾಗಿದ್ದು, ಇವರೆಲ್ಲರೂ ಬುಡಕಟ್ಟೇತರ ಹಾಗೂ ನಗರವಾಸಿಗಳಾಗಿದ್ದಾರೆ.
ಮೊದಲ ಘಟನೆಯು ಸೋಬಾ'ಪುರ ಗ್ರಾಮದ ರಾಜಾನಗರ ಬ್ಲಾಕ್'ನಲ್ಲಿ ನಡೆದಿದ್ದು, ಮೂವರು ಮುಸ್ಲಿಂ ಜಾನುವಾರು ವ್ಯಾಪಾರಿಗಳನ್ನು ಕೊಂದಿದ್ದಾರೆ. ರಕ್ಷಿಸಲು ಬಂದ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಪೊಲೀಸ್ ವಾಹನ'ಗಳನ್ನು ಸುಟ್ಟು ಹಾಕಿ ತಮ್ಮ ಹಳ್ಳಿಯಿಂದ ಪಲಾಯನ ಮಾಡಿದ್ದಾರೆ.
ಮತ್ತೊಂದು ಘಟನೆಯು ಬುಡಕಟ್ಟು ಸಮುದಾಯದ ಪ್ರದೇಶ ನಾಗಾದಿನಲ್ಲಿನ ಸೋಬಪುರ್'ದ 20 ಕಿ.ಮೀ ದೂರ'ದಲ್ಲಿ ನಡೆದಿದ್ದು ಬುಡಕಟ್ಟು ಗುಂಪು ಇಬ್ಬರು ಸಹೋದರರು ಸೇರಿದಂತೆ ಮೂವರನ್ನು ಜೀವಂತ ಸುಟ್ಟಿದ್ದಾರೆ. ಪ್ರತ್ಯಕ್ಷದರ್ಶಿಯರ ಪ್ರಕಾರ ಮೃತರಿಗೆ ಒಂದು ಮಾತನ್ನು ಆಡಲು ಅವಕಾಶ ನೀಡದೆ ಹಲ್ಲೆ ಮಾಡಿ ಕೊಂದಿದ್ದಾರೆ.
ಇದು ಕೋಮುಗಲಭೆಯಲ್ಲದೆ ಮೂಢನಂಬಿಕೆಯ ಕೃತ್ಯಗಳಾಗಿವೆ ಎಂದು ಪಶ್ಚಿಮ ಸಿಂಗ್ಬಾಮ್ ಜಿಲ್ಲೆಯ ಜಿಲ್ಲಾ ವರಿಷ್ಠಾಧಿಕಾರಿ ಅನೂಪ್ ಟಿ ಮ್ಯಾಥ್ಯೋ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.