ಕಾಶ್ಮೀರ ಸಂಘರ್ಷಕ್ಕೆ ಮೋದಿಯೇ ಕಾರಣ: ದೇವೇಗೌಡ

By Web DeskFirst Published Mar 4, 2019, 8:23 AM IST
Highlights

ಕಾಶ್ಮೀರ ಸಂಘರ್ಷಕ್ಕೆ ಮೋದಿಯೇ ಕಾರಣ |  ನಾನು ಪ್ರಧಾನಿಯಾಗಿದ್ದಾಗ ದುರ್ಘಟನೆಯೇ ನಡೆದಿಲ್ಲ: ದೇವೇಗೌಡ | ದೇಶಪ್ರೇಮ ಬಿಜೆಪಿಯವರಿಗೆ ಮಾತ್ರ ಇರುವುದಲ್ಲ. ಪ್ರತಿಯೊಬ್ಬ ನಾಗರಿಕರಿಗೂ ಇದೆ. ಅದನ್ನು ಮೋದಿಯಿಂದ ಕಲಿಯಬೇಕಾಗಿಲ್ಲ : ದೇವೇಗೌಡ 

ಮಂಗಳೂರು (ಮಾ. 04):  ‘ಕಾಶ್ಮೀರದಲ್ಲಿ ಸಂಘರ್ಷ ನಡೆಯಲು ಮೋದಿ ಸರ್ಕಾರ ಕಾರಣ’ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ‘ನಾನು ಪ್ರಧಾನಿಯಾಗಿದ್ದಾಗ ಕಾಶ್ಮೀರದಲ್ಲಿ ಒಂದೇ ಒಂದು ದುರ್ಘಟನೆಯೂ ನಡೆಯದಂತೆ ಚುನಾವಣೆಯನ್ನು ನಡೆಸಿದ್ದೆ’ ಎಂದಿದ್ದಾರೆ.

ನಾನು ಪ್ರಧಾನಿಯಾಗಿದ್ದಾಗ 5 ಬಾರಿ ಕಾಶ್ಮೀರಕ್ಕೆ ಹೋಗಿದ್ದೆ. ಅಲ್ಲಿ ಒಂದೇ ಒಂದು ದುರ್ಘಟನೆಯೂ ಆಗದಂತೆ ಚುನಾವಣೆಯನ್ನೂ ನಡೆಸಿದೆ. ಮೋದಿ ಪ್ರಧಾನಿಯಾದ ಬಳಿಕ ನಾಲ್ಕು ಮುಕ್ಕಾಲು ವರ್ಷಗಳಲ್ಲಿ ಸುಮಾರು 3 ವರ್ಷಗಳ ಕಾಲ ಕಾಶ್ಮೀರದಲ್ಲಿ ಸೆಕ್ಷನ್‌ 144 ಜಾರಿಗೊಳಿಸಿದ್ದರಿಂದ ಅಲ್ಲಿನ ಬೀದಿ ಬೀದಿಗಳಲ್ಲಿ ಸಂಘರ್ಷಗಳು ನಡೆಯಲು ಕಾರಣವಾಯಿತು ಎಂದು ಆರೋಪಿಸಿದರು.

ಇದೀಗ ಸನ್ನಿವೇಶ ಉಲ್ಭಣವಾಗಿದೆ. 44 ಮಂದಿ ಸೈನಿಕರು ಹತ್ಯೆಯಾಗಿದ್ದಾರೆ. ಸಾಮರಸ್ಯ ಕದಡಿದರೆ ದೇಶದ ಶಾಂತಿ ಭಂಗ ಆಗುತ್ತದೆ. ಇದೆಲ್ಲ ವಿಚಾರಗಳನ್ನು ಗಮನದಲ್ಲಿಟ್ಟು ಎನ್‌ಡಿಎ ಹೊರತಾದ ಪಕ್ಷಗಳ ಮೈತ್ರಿ ಅಗತ್ಯವಾಗಿದೆ ಎಂದರು.

ರಾಜಕೀಯ ಬೇಡ:

ಮಾತೆತ್ತಿದರೆ ತಾನು, ತನ್ನ ಸರ್ಕಾರ ಮಾಡಿದ್ದು ಎನ್ನುತ್ತಾರೆ ನರೇಂದ್ರ ಮೋದಿ. ವಾಜಪೇಯಿ ಸರ್ಕಾರ ಇದ್ದಾಗ ಕಾರ್ಗಿಲ್‌ ಯುದ್ಧ ಗೆದ್ದಿಲ್ಲವೇ? ಪೋಕ್ರಾನ್‌ ಅಣು ಪರೀಕ್ಷೆ ಆಗಲಿಲ್ಲವೇ? ಇದೀಗ ಉಗ್ರ ನಾಶಕ್ಕೆ ಎಲ್ಲ ರಾಷ್ಟ್ರಗಳ ಒಕ್ಕೂಟ ತೀರ್ಮಾನಿಸಿದೆ. ಭಾರತ ಮಾತ್ರ ಅಲ್ಲ. ಸೈನಿಕರ ವಿಚಾರಗಳನ್ನು ರಾಜಕೀಯವಾಗಿ ಬಳಕೆ ಮಾಡಬೇಡಿ. ದೇಶಪ್ರೇಮ ಬಿಜೆಪಿಯವರಿಗೆ ಮಾತ್ರ ಇರುವುದಲ್ಲ. ಪ್ರತಿಯೊಬ್ಬ ನಾಗರಿಕರಿಗೂ ಇದೆ. ಅದನ್ನು ಮೋದಿಯಿಂದ ಕಲಿಯಬೇಕಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮೋದಿ ಮಾತು ಜನ ನಂಬಲ್ಲ:

ದೇಶದ ಪ್ರಗತಿಗೆ ಬಲಿಷ್ಠ ಸರ್ಕಾರ ಬೇಕು ಎಂದು ಮೋದಿ ಹೇಳುತ್ತಾರೆ. ಅದರರ್ಥ ಅವರೇ ಆಗಬೇಕಂತೆ ಎಂದು ವ್ಯಗ್ಯವಾಡಿದ ದೇವೇಗೌಡ, ಕ್ಲೀನ್‌ ಪಾಲಿಟಿಕ್ಸ್‌, ಸ್ಥಿರ ಸರ್ಕಾರ, ಕಾಂಗ್ರೆಸ್‌ ಮುಕ್ತ ಸರ್ಕಾರ ಬೇಕು ಎನ್ನುತ್ತಾರೆ. ಐದು ವರ್ಷ ವಾಜಪೇಯಿ, 10 ವರ್ಷ ಮನಮೋಹನ ಸಿಂಗ್‌ ಸ್ಥಿರ ಸರ್ಕಾರ ನೀಡಲಿಲ್ಲವೇ? ಪದೇ ಪದೇ ಇದನ್ನೇ ಹೇಳಿದರೆ ಜನ ನಂಬಲ್ಲ. ಭಾಷಣದಲ್ಲಿ ನರೇಂದ್ರ ಮೋದಿ ವಾಜಪೇಯಿಗಿಂತ ಬುದ್ಧಿವಂತರು, ಆದರೆ ಜನ ನಂಬಬೇಕಲ್ಲ? ಮೋದಿ ಒಂದು ಬದಿಗಿದ್ದರೆ ಜನ ಇನ್ನೊಂದು ಬದಿಯಲ್ಲಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಬಲ ಕುಸಿತ:

ಬಿಜೆಪಿ ಪ್ರಗತಿಯನ್ನು, ಮೂಲಭೂತವಾದವನ್ನು ತಡೆಯುವುದೇ ಮೈತ್ರಿಯ ಉದ್ದೇಶ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಲೋಕಸಭೆ ಕ್ಷೇತ್ರಗಳ ಸಂಖ್ಯೆ ಕಡಿಮೆ. ಹಾಗಾಗಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಓಟ ತಡೆಯಲು ಮಹತ್ತರ ಪಾತ್ರ ವಹಿಸುತ್ತೇವೆ ಅಂದ್ಕೊಳ್ಳಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ ಸಂಖ್ಯಾಬಲವನ್ನು ಕಡಿಮೆ ಮಾಡಲು ಸಾಧ್ಯವಿದೆ. ಕಳೆದ ಉಪಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಗೆದ್ದದ್ದೇ ಇದಕ್ಕೆ ಸಾಕ್ಷಿ. ಈ ಅನುಭವದಿಂದ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಾಗಿರಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

 

click me!