ಜೆಡಿಎಸ್ ನಾಯಕರಿಂದ ಮಹತ್ವದ ನಿರ್ಧಾರ : ಆಗಸ್ಟ್ ನಿಂದ ಹೊಸ ಕಾರ್ಯಕ್ರಮ

By Web DeskFirst Published Jun 8, 2019, 8:38 AM IST
Highlights

ರಾಜ್ಯದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ ಒಂದು ಸ್ಥಾನದಲ್ಲಿ ಗೆಲುವು ಪಡೆದುಕೊಂಡಿದ್ದು, ಇದೇ ವೇಳೆ ನಾಯಕರು ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳುತ್ತಿದ್ದಾರೆ. 

ಬೆಂಗಳೂರು: ಪಕ್ಷವನ್ನು ಬಲವರ್ಧನೆಗೊಳಿಸಲು ಬರುವ ಆಗಸ್ಟ್‌ನಿಂದ ನವೆಂಬರ್‌ವರೆಗೆ ರಾಜ್ಯದಲ್ಲಿ ಪಾದಯಾತ್ರೆ ನಡೆಸಿ ಜನರ ಬಳಿ ಹೋಗುವುದಾಗಿ ಜೆಡಿಎಸ್‌ ನಾಯಕ ವೈ.ಎಸ್‌.ವಿ.ದತ್ತ ತಿಳಿಸಿದ್ದಾರೆ.

ಕಷ್ಟವೋ, ಸುಖವೋ 30 ಜಿಲ್ಲೆಗಳಿಗೆ ಭೇಟಿ ಕೊಟ್ಟು ಜನರ ಬಳಿ ಹೋಗೋಣ. ಪಾದಯಾತ್ರೆ ಬಗ್ಗೆ ಯೋಜನೆ ರೂಪಿಸಿ ಜಿಲ್ಲಾ ಕೇಂದ್ರಗಳಿಗೆ ಮಾಹಿತಿ ನೀಡಲಾಗುವುದು. ಪಾದಯಾತ್ರ ಮಾಡಿಯೇ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಜನಮೋಹನ್‌ ರೆಡ್ಡಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿಯೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪಾದಯಾತ್ರೆ ಕೈಗೊಂಡು ಪಕ್ಷ ಸಂಘಟನೆಗೊಳಿಸಿದರು. ಅವರು ಪಾದಯಾತ್ರೆ ಮಾಡಿದಾಗಲೆಲ್ಲಾ ಪಕ್ಷ ಒಂದೊಂದು ಮೆಟ್ಟಿಲು ಮೇಲೆ ಹೋಗಿದೆ. ಅವರ ಆರ್ಶೀವಾದದಲ್ಲಿಯೇ ಮುಂದುವರಿಯೋಣ ಎಂದು ಪಕ್ಷದ ಕಾರ್ಯಕ್ರಮದಲ್ಲಿ ಕರೆ ಕೊಟ್ಟರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಕೇವಲ ಒಂದು ಸ್ಥಾನದಲ್ಲಿ ಜಯಗಳಿಸಿದೆ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 579 ಸದಸ್ಯರು ಗೆದ್ದು ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶದಿಂದಾಗಿ ನಮ್ಮ ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ಇನ್ನೂ ಸಂಘಟನೆ ಚುರುಕಾಗಬೇಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಮುಂದಿನ ದಿನದಲ್ಲಿ ಪಕ್ಷವನ್ನು ಸಜ್ಜುಗೊಳಿಸಲು ಪಕ್ಷ ಸಂಘಟನೆ ಅನಿವಾರ್ಯವಾಗಿದೆ ಎಂದರು.

click me!