ಕಾಂಗ್ರೆಸ್‌ನಿಂದ JDS ನವರಿಗೆ ಕೊಲೆ ಬೆದರಿಕೆ?

By Web DeskFirst Published Jun 30, 2019, 1:17 PM IST
Highlights

ಕಾಂಗ್ರೆಸ್‌ನಿಂದ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೆ ತಂದರೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಸಮಸ್ಯೆಗಳನ್ನು ನಮ್ಮ ಪಕ್ಷದವರು ಆಲಿಸದಿದ್ದರೆ ನಾವು ಎಲ್ಲಿಗೆ ಹೋಗಬೇಕು? ಹೀಗೆಂದು ಜೆಡಿಎಸ್  ಕಾರ್ಯಕರ್ತರು ಆರೋಪ ಮಾಡಿದ್ದಾರೆ.

ಬೆಂಗಳೂರು [ಜೂ.30] :  ಕಾಂಗ್ರೆಸ್‌ನಿಂದ ಕೊಲೆ ಬೆದರಿಕೆ... ಜೆಡಿಎಸ್‌ ಸಚಿವರ ನಿಷ್ಕ್ರೀಯತೆ.. ಪಕ್ಷದಲ್ಲಿ ವಿಶ್ವಾಸ ಕೊರತೆ... ರಾಷ್ಟ್ರೀಯ ಪಕ್ಷಗಳಂತೆ ಜೆಡಿಎಸ್‌ಗೆ ಅಂಗ ಸಂಸ್ಥೆಗಳಿಲ್ಲದೆ ಇರುವುದರಿಂದ ಅಂಗ ಸಂಸ್ಥೆಗಳನ್ನು ರಚಿಸಿ ಬಲಪಡಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಬಳಿ ತಮ್ಮ ಅಳಲನ್ನು ತೋಡಿಕೊಂಡರು.

ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಬಗ್ಗೆ ಪೋಸ್ಟ್‌ ಮಾಡಿದರೆ ಕಾಂಗ್ರೆಸ್‌ನಿಂದ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೆ ತಂದರೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಸಮಸ್ಯೆಗಳನ್ನು ನಮ್ಮ ಪಕ್ಷದವರು ಆಲಿಸದಿದ್ದರೆ ನಾವು ಎಲ್ಲಿಗೆ ಹೋಗಬೇಕು? ನಾಗಮಂಗಲದಲ್ಲಿ ಇವತ್ತಿಗೂ ಕಾಂಗ್ರೆಸ್‌ನ ಚಲುವರಾಯಸ್ವಾಮಿಯದ್ದೇ ನಡೆಯುತ್ತಿದೆ. ನಮ್ಮ ಪಕ್ಷದ ಶಾಸಕ ಸುರೇಶ್‌ ಗೌಡರದ್ದು ಏನು ನಡೆಯುತ್ತಿಲ್ಲ. ಯಾವುದಾದರೂ ಕೆಲಸವಾಗಬೇಕಾದರೆ ಚಲುವರಾಯಸ್ವಾಮಿ ಹೇಳಿದರೆ ಮಾತ್ರ ಕ್ಷೇತ್ರದಲ್ಲಿ ನಡೆಯುತ್ತದೆ ಎಂದು ನಾಗಮಂಗಲ ತಾಲೂಕಿನ ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ವರಿಷ್ಠರ ಗಮನಕ್ಕೆ ತಂದರು.

ಜೆಡಿಎಸ್‌ ಪಕ್ಷದ ಸಚಿವರು ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಸಚಿವರು ಸಕ್ರಿಯವಾಗಿಲ್ಲ. ಸಚಿವರು ಪಕ್ಷದ ಚಟುವಟಿಕೆ ಬಗ್ಗೆ ನಿಷ್ಕ್ರೀಯರಾಗಿದ್ದಾರೆ ಮತ್ತು ಕಾರ್ಯಕರ್ತರ ಸಮಸ್ಯೆಗಳ ಬಗ್ಗೆ ತಾತ್ಸಾರ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ದೂರುಗಳನ್ನು ನೀಡಿದರು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹಲವು ಅಂಗಸಂಸ್ಥೆಗಳಿವೆ. ಆದರೆ, ಜೆಡಿಎಸ್‌ಗೆ ಅಂತಹ ಯಾವುದೇ ಅಂಗಸಂಸ್ಥೆಗಳಿಲ್ಲ. ಆರ್‌ಎಸ್‌ಎಸ್‌, ಎಬಿವಿಪಿ ಸಂಘಟನೆಗಳು ಬಿಜೆಪಿ ಪಕ್ಷದ ಪರ ಕೆಲಸ ಮಾಡುತ್ತವೆ. ಕಾಂಗ್ರೆಸ್‌ನಲ್ಲಿಯೂ ಸೇವಾ ಘಟಕಗಳಿದ್ದು, ಪಕ್ಷದ ಪರ ಕೆಲಸ ಮಾಡುತ್ತವೆ. ಜೆಡಿಎಸ್‌ನಲ್ಲಿ ಯಾವುದೇ ಅಂಗಸಂಸ್ಥೆಗಳಿಲ್ಲ. ಇಂತಹ ಅಂಗಸಂಸ್ಥೆಗಳನ್ನು ರಚಿಸಿ ಪಕ್ಷವನ್ನು ಬಲಪಡಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ಕಾರ್ಯಕರ್ತರ ಮೇಲೆ ನಾಯಕರಿಗೆ ವಿಶ್ವಾಸ ಇಲ್ಲ. ನಾಯಕರ ಮೇಲೆ ಕಾರ್ಯಕರ್ತರಿಗೆ ನಂಬಿಕೆ ಬರುತ್ತಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜತೆ ಕಾರ್ಯಕರ್ತರ ಸಂವಹನ ಆಗುತ್ತಿಲ್ಲ. ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರನ್ನು ಬಿಟ್ಟರೆ ಬೇರೆ ಯಾವ ನಾಯಕರಿಗೂ ಕಾರ್ಯಕರ್ತರ ಮೇಲೆ ವಿಶ್ವಾಸವೇ ಇಲ್ಲ. ಮೊದಲು ನಾಯಕರ ಮತ್ತು ಕಾರ್ಯಕರ್ತರ ನಡುವಿನ ಈ ಅಪನಂಬಿಕೆ ಹೋಗಬೇಕು ಎಂಬ ಸಲಹೆಗಳನ್ನು ಕಾರ್ಯಕರ್ತರು ವ್ಯಕ್ತಪಡಿಸಿದರು.

click me!