ಜಾರ್ಖಂಡ್'ನಲ್ಲಿ ಗಣಿ ದುರಂತ: 7ಕ್ಕೂ ಹೆಚ್ಚು ಸಾವು

By Suvarna Web DeskFirst Published Dec 30, 2016, 7:57 AM IST
Highlights

ಪಾಟ್ನಾದಿಂದ ಎನ್'ಡಿಆರ್'ಎಫ್'ನ ತಂಡಗಳು ಮಧ್ಯಾಹ್ನ ಘಟನಾ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿವೆ. ಆದರೆ, ಈವರೆಗೆ ಒಬ್ಬೇ ಒಬ್ಬ ವ್ಯಕ್ತಿ ಜೀವಂತವಾಗಿ ಸಿಕ್ಕಿರುವ ಬಗ್ಗೆ ಮಾಹಿತಿ ಬಂದಿಲ್ಲ.

ಜಾರ್ಖಂಡ್(ಡಿ. 30): ಕಲ್ಲಿದ್ದಲು ಗಣಿಗಾರಿಕೆ ನಡೆಯುವ ವೇಳೆ ಮಣ್ಣು ಕುಸಿದು ಏಳಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ. ಈ ಗಣಿಕುಸಿತದಲ್ಲಿ ಇನ್ನೂ 40ಕ್ಕೂ ಹೆಚ್ಚು ಜನರು ಮಣ್ಣಿನ ರಾಶಿಯಡಿ ಸಿಲುಕಿದ್ದಾರೆ. ಇಲ್ಲಿಯ ಗೋಡ್ಡಾ ಜಿಲ್ಲೆಯ ಲಾತ್ಮಾಟಿಯಾ ಗಣಿ ಬಳಿ ಈ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ. ಗಣಿದುರಂತಕ್ಕೆ ತುತ್ತಾಗಿದವರು ಈಸ್ಟರ್ನ್ ಕೋಲ್'ಫೀಲ್ಡ್ಸ್ ಲಿಮಿಟೆಡ್(ಇಸಿಎಲ್) ಎಂಬ ಖಾಸಗಿ ಗಣಿಗಾರಿಕೆ ಸಂಸ್ಥೆಯ ಕಾರ್ಮಿಕರೆನ್ನಲಾಗಿದೆ. ಆದರೆ, ಕೆಲ ವರದಿಗಳ ಪ್ರಕಾರ, ಗಣಿ ಕುಸಿತ ಸಂಭವಿಸಿದ ಸಮಯದಲ್ಲಿ ಎಷ್ಟು ಕಾರ್ಮಿಕರಿದ್ದರು ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಸುಮಾರು 40-50 ಜನರು ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಕಾರ್ಮಿಕರ ಜೊತೆಗೆ ಹಲವು ಸಲಕರಣೆಗಳು ಹಾಗೂ ವಾಹನಗಳೂ ಮಣ್ಣಿನಡಿ ಸಿಲುಕಿವೆಯೆನ್ನಲಾಗಿದೆ.

ನಿನ್ನೆ ರಾತ್ರಿಯೇ ದುರಂತ ಸಂಭವಿಸಿದ್ದರೂ ತೀವ್ರ ಮಂಜಿನ ಕಾರಣ ರಕ್ಷಣಾ ಕಾರ್ಯ ಶುರುವಾಗುವುದು ವಿಳಂಬವಾಯಿತೆನ್ನಲಾಗಿದೆ. ಪಾಟ್ನಾದಿಂದ ಎನ್'ಡಿಆರ್'ಎಫ್'ನ ತಂಡಗಳು ಮಧ್ಯಾಹ್ನ ಘಟನಾ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿವೆ. ಆದರೆ, ಈವರೆಗೆ ಒಬ್ಬೇ ಒಬ್ಬ ವ್ಯಕ್ತಿ ಜೀವಂತವಾಗಿ ಸಿಕ್ಕಿರುವ ಬಗ್ಗೆ ಮಾಹಿತಿ ಬಂದಿಲ್ಲ.

click me!