
ನವದೆಹಲಿ: ಕಾಶ್ಮೀರದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ತೀವ್ರ ದಮನಕ್ಕೊಳಗಾಗಿರುವ ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ, ಈಗ ಹಿರಿಯ ಬಿಜೆಪಿ ಮುಖಂಡರು, ಬಿಜೆಪಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಮಂತ್ರಿಗಳ ಹತ್ಯೆಗೆ ಸಂಚು ರೂಪಿಸಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಈ ದುಷ್ಕೃತ್ಯಕ್ಕೆ ಜೈಷ್ ಉಗ್ರರಿಗೆ ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಉಗ್ರರೂ ಸಾಥ್ ನೀಡುತ್ತಿದ್ದಾರೆ ಎಂಬ ಮಾಹಿತಿ ಕೇಂದ್ರೀಯ ಗುಪ್ತಚರ ದಳಕ್ಕೆ ಲಭಿಸಿದೆ. ದಾಳಿಗೆ ಈ ಎರಡೂ ಸಂಘಟನೆಗಳು
ಕೈಜೋಡಿಸಿದ್ದು, ಇದನ್ನು ಜಾರಿಗೊಳಿಸಲು ಅವರು ಬಾಂಗ್ಲಾದೇಶಿ ಉಗ್ರರ ಗುಂಪಿನೊಂದಿಗೆ ಸಂಪರ್ಕದಲ್ಲಿವೆ. ಕೃತ್ಯಕ್ಕೆ ಬೇಕಾದ ಸರಕುಗಳನ್ನು ಬಾಂಗ್ಲಾದೇಶದಿಂದ ತರಿಸಿಕೊಳ್ಳಲು ಯೋಜನೆ ರೂಪಿಸಿವೆ ಎಂದು ಗುಪ್ತಚರ ದಳಕ್ಕೆ ಮಾಹಿತಿ ಲಭಿಸಿದೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ. ಜೊತೆಗೆ ಈಗಾಗಲೇ ಈ ದಾಳಿ ನಡೆಸಲು ಪಾಕಿಸ್ತಾನದ ಗಡಿ ದಾಟಿ ಭಾರತಕ್ಕೆ ಉಗ್ರರು ಆಗಮಿಸಿದ್ದಾರೆ ಎಂದು ವರದಿ ಹೇಳಿದೆ. ಈ ಉಗ್ರರು ಮೊದಲು ಬಿಜೆಪಿ ಮುಖ್ಯಮಂತ್ರಿಗಳನ್ನು ಗುರಿ ಮಾಡಿಕೊಳ್ಳಲು ಉದ್ದೇಶಿಸಿದ್ದಾರೆ.
ಮುಖ್ಯಮಂತ್ರಿಗಳು ಕಡಿಮೆ ಭದ್ರತೆಯಲ್ಲಿ ಸಂಚರಿಸುವ ಕಾರಣ ಇವರು ತಮ್ಮ ಸುಲಭದ ಟಾರ್ಗೆಟ್ ಆಗಬಹುದು ಎಂಬುದು ಉಗ್ರರ ಲೆಕ್ಕಾಚಾರ ಎಂದು ಹೇಳಲಾಗಿದೆ.
ಈ ಮಾಹಿತಿಯನ್ನು ವಿವಿಧ ಮೂಲಗಳಿಂದ ಪರಿಶೀಲಿಸಿ ಗುಪ್ತಚರ ದಳ ಖಚಿತಪಡಿಸಿಕೊಂಡಿದೆ. ಇದೇ ವೇಳೆ ಈ ವಿಷಯವನ್ನು ದೃಢಪಡಿಸಿಕೊಳ್ಳಲು ವಿದೇಶೀ ಗುಪ್ತಚರ ಸಂಸ್ಥೆಯೊಂದು ಬಾಂಗ್ಲಾದೇಶಕ್ಕೂ ತೆರಳಿದೆ. ಆದರೆ ಈವರೆಗೂ ಅದಕ್ಕೆ ಸಾಕ್ಷ್ಯ ಲಭಿಸಿಲ್ಲ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಕಾಶ್ಮೀರದಲ್ಲಿ ಜೈಷ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಬಂಧು ತಲ್ಹಾ ರಶೀದ್ ನನ್ನು ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಜೈಷ್ ಪ್ರತೀಕಾರ ಕ್ರಮಕ್ಕೆ ಮುಂದಾದ ಮಾಹಿತಿ ಲಭ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.