
ಹುಬ್ಬಳ್ಳಿ[ಮೇ.10]: ಮೈತ್ರಿ ಸರ್ಕಾರದಲ್ಲಿ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆದಿದ್ದು, ಕುಮಾರಸ್ವಾಮಿ ಅವರಿಗೆ ಭಯ ಆರಂಭವಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಮಗನ ಸೋಲಿನ ಹೆದರಿಕೆಯೂ ಆರಂಭವಾಗಿದೆ. ಇದೇ ಕಾರಣಕ್ಕೆ ಅವರು ಗುಡಿ ಗುಂಡಾರ ಸುತ್ತುತ್ತಿದ್ದು, ಇದರಿಂದ ಇವಿಎಂನಲ್ಲಿ ಏನಾದರೂ ಬದಲಾವಣೆ ಆಗುತ್ತದಾ ಎಂದು ಪ್ರಶ್ನಿಸಿದರು.
ಡಿಕೆಶಿ ಗೂಂಡಾಗಿರಿ ನಡೆಯಲ್ಲ:
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಕನಕಪುರದ ಗೂಂಡಾಗಿರಿ ಕುಂದಗೋಳದಲ್ಲಿ ನಡೆಯುವುದಿಲ್ಲ. ರಾಮನಗರ ಹಾಗೂ ಕನಕಪುರದಲ್ಲಿ ಗೂಂಡಾಗಿರಿ, ದಾದಾಗಿರಿ ಮಾಡಿರಬಹುದು. ಅಲ್ಲಿ ಹಣಬಲ, ತೋಳ್ಬಲದ ಮೂಲಕ ಚುನಾವಣೆ ನಡೆಸುವ ಅವರು ಇಲ್ಲಿ ಅದನ್ನೇ ಮಾಡಲು ಬಂದಿದ್ದಾರೆ. ನಮ್ಮ ಕಾರ್ಯಕರ್ತರು ಸ್ವಾಭಿಮಾನಿಗಳು. ಇದಕ್ಕೂ ಮೀರಿ, ಕಾರ್ಯಕರ್ತರನ್ನು ಮುಟ್ಟುವುದಾಗಲಿ, ಕರೆ ಮಾಡಿ ಆಹ್ವಾನ ನೀಡುವುದಾಗಲಿ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.
ಸಿದ್ದು ಮಹಾ ಸುಳ್ಳುಗಾರ:
ವೀರಪ್ಪ ಮೊಯ್ಲಿ ಮಹಾನ್ ಸುಳ್ಳುಗಾರ ಎಂದು ಹೇಳಲಾಗುತ್ತಿತ್ತು. ಸಿದ್ದರಾಮಯ್ಯ ಅದಕ್ಕಿಂತ ದೊಡ್ಡ ಸುಳ್ಳುಗಾರ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾ ಸುಳ್ಳುಗಾರರಲ್ಲಿಯೇ ಮಹಾ ಸುಳ್ಳುಗಾರ. ಇದೇ ತನ್ನ ಕೊನೆಯ ಚುನಾವಣೆ ಮುಂದಿನ ಬಾರಿ ದಲಿತ ಮುಖ್ಯಮಂತ್ರಿ ಮಾಡುತ್ತೇನೆ ಎಂದ ಸಿದ್ದರಾಮಯ್ಯ ಈಗ ತನ್ನ ಹಿಂಬಾಲಕರ ಮೂಲಕ ತಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಘೋಷಿಸಿಕೊಳ್ಳುತ್ತಿದ್ದಾರೆ ಎಂದರು.
ಮುಂದಿನ ಸಿಎಂ ಬಿಎಸ್‌ವೈ:
ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಪ್ರಸ್ತುತ ಖಾಲಿ ಇಲ್ಲ, ಅಲ್ಲದೆ ಮುಂದೆ ಬಿಜೆಪಿ ಸರ್ಕಾರ ಬಂದರೆ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ. ನಾನು ಸಿಎಂ ಆಗುವ ಕುರಿತ ಚರ್ಚೆ ಈಗ ಅಪ್ರಸ್ತುತ. ಈ ಬಗ್ಗೆ ಮಾಧ್ಯಮದಲ್ಲಿ ಚರ್ಚೆ ಆಗುತ್ತಿದೆ. ಆದರೆ, ಆಂತರಿಕವಾಗಿ ಪಕ್ಷದಲ್ಲಿ ಇದರ ಚರ್ಚೆ ಆಗುತ್ತಿಲ್ಲ. ಹೀಗಾಗಿ ರಾಜ್ಯಾಧ್ಯಕ್ಷರ ಹುದ್ದೆ, ಮುಖ್ಯಮಂತ್ರಿ ಹುದ್ದೆ ಕುರಿತು ಚರ್ಚೆ ಅಪ್ರಸ್ತುತ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.