ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾರಸ್ಯ ಪ್ರಸಂಗಗಳಿವು

By Web DeskFirst Published Jan 6, 2019, 1:28 PM IST
Highlights

ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿದೆ. ಸಡಗರ, ಸಂಭ್ರಮಕ್ಕೆ ಸಾಕ್ಷಿಯಾಗಿದೆ ವಿದ್ಯಾಕಾಶಿ. ಎರಡನೇ ದಿನದ ಸಾಹಿತ್ಯ ಸಂಭ್ರಮದಲ್ಲಿ ವೇದಿಕೆಯಲ್ಲಿ ನಡೆದ ಸ್ವಾರಸ್ಯ ಸಂಗತಿಗಳು ಇಲ್ಲಿವೆ ನೋಡಿ. 

ಧಾರವಾಡ (ಜ.06): ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿದೆ. ಸಡಗರ, ಸಂಭ್ರಮಕ್ಕೆ ಸಾಕ್ಷಿಯಾಗಿದೆ ವಿದ್ಯಾಕಾಶಿ. ಎರಡನೇ ದಿನದ ಸಾಹಿತ್ಯ ಸಂಭ್ರಮದಲ್ಲಿ ವೇದಿಕೆಯಲ್ಲಿ ನಡೆದ ಸ್ವಾರಸ್ಯ ಸಂಗತಿಗಳು ಇಲ್ಲಿವೆ ನೋಡಿ. 

ಗೋಷ್ಠಿಗಳು 1 ತಾಸು ತಡ

ಸಾಹಿತ್ಯ ಸಮ್ಮೇಳನದಲ್ಲಿ ನಿಗದಿತ ಕಾರ್ಯಕ್ರಮಗಳು ಒಂದು-ಒಂದೂವರೆ ತಾಸು ತಡವಾಗಿ ಆರಂಭವಾಗುವುದು ಸರ್ವೇಸಾಮಾನ್ಯ. ಹೀಗಾಗಿ ಧಾರವಾಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ವಿಚಾರಗೋಷ್ಠಿಗಳು ಸರಾಸರಿ ಒಂದು ತಾಸು ತಡವಾಗಿ ಆರಂಭವಾಗಿದ್ದಕ್ಕೆ ಯಾರೂ ಬೇಸರಿಸಿಕೊಳ್ಳಲಿಲ್ಲ. ನಿನ್ನೆ 4 ತಾಸು ತಡವಾಗಿ ಆರಂಭವಾಗಿತ್ತು, ಇವತ್ತು 1 ತಾಸು ಯಾವ ಲೆಕ್ಕ ಎಂಬ ಧೋರಣೆ ಕಂಡುಬಂತು.

ಪ್ರೇಮಕವಿಯ ಸಂಚಾರ

ಎಂದಿನಂತೆ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು ಕಾಣಿಸಲಿಲ್ಲವಾದರೂ ಕವಿ ಬಿ.ಆರ್.ಲಕ್ಷ್ಮಣರಾವ್ ಅವರು ಸಮ್ಮೇಳನದುದ್ದಕ್ಕೂ ಓಡಾಡುತ್ತ ಸೆಲ್ಫಿಪ್ರಿಯರ ಹೃದಯ ಗೆದ್ದರು. ಮೂರನೇ ದಿನ ಇರುವ ವಿಚಾರಗೋಷ್ಠಿಗೆ ಎರಡನೇ ದಿನವೇ ಆಗಮಿಸಿದ್ದ ಅವರು ಸಮ್ಮೇಳನದ ಮುಖ್ಯ ವೇದಿಕೆ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ ಹಾಗೂ ಸಮಾನಾಂತರ ವೇದಿಕೆಗಳಿಗೆ ಓಡಾಡುತ್ತಿದ್ದರು. ಸಾಹಿತ್ಯಾಸಕ್ತರು ಅವರ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಗೊರಿಲ್ಲಾ ಗ್ಲಾಸ್ 

ಸಮ್ಮೇಳನದ ಮುಖ್ಯ ವೇದಿಕೆಯ ಪಕ್ಕ ಇದ್ದ ಮೊಬೈಲ್ ಗ್ಲಾಸಿನ ಮಳಿಗೆ ಅತಿ ಹೆಚ್ಚು ಜನರನ್ನು ಆಕರ್ಷಿಸಿತು. ಅಲ್ಲಿ 40 ರು.ಗೆ ಗೊರಿಲ್ಲಾ ಗ್ಲಾಸ್ ಸಿಗುತ್ತಿತ್ತು. ಹೆಚ್ಚಾಗಿ ಯುವಕ ಯುವತಿಯರು ಈ ಮಳಿಗೆಯ ಸುತ್ತ ಸದಾ ನೆರೆದಿರುತ್ತಿದ್ದರು. ಮಾಸ್ಕುಗಳ ಓಡಾಟ ಮೊದಲ ದಿನ ಸಮ್ಮೇಳನದಲ್ಲಿ ಧೂಳಿನ ಅಬ್ಬರ ನೋಡಿದ ಜನರಲ್ಲಿ ಕೆಲವರು ಎರಡನೇ ದಿನ ಬರುವಾಗ ಮುಖಕ್ಕೆ ಸರ್ಜಿಕಲ್ ಮಾಸ್ಕ್ ಧರಿಸಿ ಬಂದಿದ್ದರು. ಮಾಸ್ಕ್ ಧರಿಸದೆ ಇರುವವರಲ್ಲಿ ಬಹಳ ಮಂದಿ
ನಿರಂತರವಾಗಿ ಸೀನುತ್ತಿದ್ದರು. ಮೆಡಿಕಲ್ ಸ್ಟೋರುಗಳಲ್ಲಿ ಮಾಸ್ಕ್‌ಗಳ ಮಾರಾಟ ಭರದಿಂದ ನಡೆಯಿತು.

ಮೈ ನೇಮ್ ಈಸ್...

ಗೋಷ್ಠಿಗಳ ಮಧ್ಯದಲ್ಲಿ ಶಾಲಾ ಮಕ್ಕಳ ಕಾರ‌್ಯಕ್ರಮ ಇತ್ತು. ಒಂದು ಶಾಲೆಯ ಸುಮಾರು ಮಂದಿ ಮಕ್ಕಳು ಪಂಪನ ಕಾವ್ಯವನ್ನು ಕಂಠಪಾಠ ಮಾಡಿಕೊಂಡು ಬಂದಿದ್ದರು. ತುಂಬಾ ಸೊಗಸಾಗಿ ಪಂಪನ ಹಳೆಗನ್ನಡ ಪದ್ಯಗಳನ್ನು ಹೇಳಿದರು. ಅವರು ಹೇಳುವಾಗಲೇ ಜನರ ಚಪ್ಪಾಳೆ, ಶಿಳ್ಳೆ ಸುರಿಮಳೆ. ಮಕ್ಕಳು ಕನ್ನಡತ್ವವನ್ನು ಸಾರಿದರು. ಕಡೆಗೆ ಆ ಮಕ್ಕಳು ತಮ್ಮ ಹೆಸರು ಹೇಳುವಾಗ ಮೈ ನೇಮ್ ಈಸ್ ಎಂದೇ ಆರಂಭಿಸಿ ಇಂಗ್ಲಿಷ್‌ನಲ್ಲಿ ಹೆಸರು ಹೇಳಿದರು. ಅದಕ್ಕೂ ಚಪ್ಪಾಳೆ ಹೊಡೆದರು.

ನಿಮ್ಮನ್ನೆಲ್ಲೋ ನೋಡಿದ್ದೀನ್ರೀ..

ಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾಯರು ಪುಸ್ತಕ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಅವರ ಅಸಂಖ್ಯಾತ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡರು. ಎಲ್ಲರನ್ನೂ ಖುಷಿಪಡಿಸಿ ರಾಯರು ಸಾಗುತ್ತಿರಬೇಕಾದರೆ ಒಬ್ಬ ಸಣ್ಣ ಹುಡುಗ ಬಂದು ಎದುರು ನಿಂತ. ನಿಮ್ಮನ್ನೆಲ್ರೋ ನೋಡಿದ್ದೀನ್ರೀ ಅಂತ ಯೋಚಿಸತೊಡಗಿದ. ಹಾಗೆಯೇ ಎರಡು ನಿಮಿಷ ಕಳೆಯಿತು. ಬಿಆರ್‌ಎಲ್ ಹೊರಡಲನುವಾದರು. ಆ ಹುಡುಗ ಬಿಡಲಿಲ್ಲ. ಕಡೆಗೆ ನೆನಪಿಸಿಕೊಂಡು ನೀವು ಬಿ.
ಆರ್.ಲಕ್ಷ್ಮಣರಾಯರಲ್ವಾ ಎಂದ. ರಾಯರು ನೆಮ್ಮದಿಯಾದರು. ಆ ಹುಡುಗ ಸೆಲ್ಫಿಗೆ ಸಿದ್ಧನಾದ.

ಡುಂಡಿಗೆ ಹಳೆಯ ನೆನಪು

ಹನಿಗವಿ ಡುಂಡಿರಾಜರು ಸ್ನಾತಕೋತ್ತರ ಪದವಿ ಓದಿದ್ದು ಧಾರವಾಡ ಕೃಷಿ ವಿವಿಯಲ್ಲಿ. ಈಗ ಸಮ್ಮೇಳನ ನಡೆಯುತ್ತಿರುವುದು ಕೂಡ ಕೃಷಿ ವಿವಿ ಆವರಣದಲ್ಲಿ. ಈ ಕಾರಣದಿಂದ ಡುಂಡಿರಾಜರಿಗೆ ಈ ಸಮ್ಮೇಳನ ಹಳೆಯ ಮಧುರ ನೆನಪುಗಳನ್ನು ಹೊತ್ತು ತಂದಿದೆ. ಕೃಷಿ ವಿವಿ ಆವರಣದಲ್ಲಿ ಅವರು ಓಡಾಡುತ್ತಿದ್ದಾಗ ತನ್ನಷ್ಟಕ್ಕೆ ಭಾವ ಪರವಶರಾದರು.

ಮಳಿಗೆಗೆ ಖ್ಯಾತನಾಮರು

ಸಾಹಿತ್ಯ ಸಮ್ಮೇಳನಗಳಿಗೆ ಸಾಹಿತಿಗಳು ಬರುವುದೇ ಕಡಿಮೆ. ಪುಸ್ತಕ ಮಳಿಗೆಗಳಿಗೆ ಬರುವುದಂತೂ ಅಪರೂಪ. ಈ ಬಾರಿ ಆ ನಿಯಮ ಮುರಿದವರು ಅನೇಕರಿದ್ದಾರೆ. ಬಿ.ಆರ್. ಲಕ್ಷ್ಮಣ ರಾವ್, ಡುಂಡಿರಾಜ್, ಕುಂ.ವೀರಭದ್ರಪ್ಪ, ಕೆ.ವೈ.ನಾರಾಯಣ ಸ್ವಾಮಿ ಮಳಿಗೆಗಳಲ್ಲಿ ಸಿಕ್ಕರು. ಎಂದಿನಂತೆ ವಸುಧೇಂದ್ರ ಮತ್ತು ಜೋಗಿ ನಗುತ್ತಾ ಆಟೋಗ್ರಾಫ್ ಹಾಕುತ್ತಿದ್ದುದು ಕಂಡುಬಂತು.

click me!