ಇನ್ಫೋಸಿಸ್‌ನಿಂದ ಇನ್ನೋವೇಷನ್ ಪ್ರಶಸ್ತಿ-ಈ ವರ್ಷ 360 ಕೋಟಿ ಯೋಜನೆ

Published : Oct 24, 2018, 12:16 PM IST
ಇನ್ಫೋಸಿಸ್‌ನಿಂದ ಇನ್ನೋವೇಷನ್ ಪ್ರಶಸ್ತಿ-ಈ ವರ್ಷ 360 ಕೋಟಿ ಯೋಜನೆ

ಸಾರಾಂಶ

ಇನ್ಫೋಸಿಸ್  ಈ ವರ್ಷ 360 ಕೋಟಿ ರೂಪಾಯಿ ಯೋಜನೆ ಪ್ರಕಟಿಸಿದೆ. ಜನಸಾಮಾನ್ಯರ ಸಮಸ್ಯೆಗೆ ಪರಿಹಾರ ಹುಡುಕುವ ವ್ಯಕ್ತಿ ಅಥವಾ ಸಂಸ್ಥೆಗೆ ಇನ್ನೋವೇಷನ್ ಪ್ರಶಸ್ತಿ ನೀಡಲು 1.5  ಕೋಟಿ ರೂಪಾಯಿ ಮೊತ್ತದ ನಿಧಿ ಸ್ಥಾಪಿಸಲಾಗಿದೆ. ಇಲ್ಲಿದೆ ಇನ್ಫೋಸಿಸ್ ಪ್ರಶಸ್ತಿ ಮಾಹಿತಿ.

ಬೆಂಗಳೂರು(ಅ.24):  ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಆವಿಷ್ಕಾರಗಳನ್ನು ಮಾಡಿರುವ ವ್ಯಕ್ತಿ, ತಂಡ ಹಾಗೂ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಇನ್ಫೋಸಿಸ್ ಪ್ರತಿಷ್ಠಾನ ‘ಆರೋಹಣ ಸೋಷಿಯಲ್ ಇನ್ನೋವೇಷನ್’ ಹೆಸರಿನ ಪ್ರಶಸ್ತಿ ಆರಂಭಿಸಿದೆ.

ಈಗಾಗಲೇ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ಸುಮಾರು ₹65 ಲಕ್ಷ ಮೊತ್ತದ, ದೇಶದಲ್ಲೇ ಅತಿ ಹೆಚ್ಚು ಮೌಲ್ಯದ ಪ್ರಶಸ್ತಿ ನೀಡುತ್ತಿರುವ
ಇನ್ಫೋಸಿಸ್ ಇದೀಗ ಇನ್ನೊಂದು ಪ್ರತಿಷ್ಠಿತ ಪ್ರಶಸ್ತಿಯನ್ನು ಆರಂಭಿಸಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇನ್ಫೋಸಿಸ್ ಪ್ರತಿಷ್ಠಾನದ
ಸುಧಾಮೂರ್ತಿ ಅವರು, ಇನ್ಫೋಸಿಸ್ ಸಂಸ್ಥೆಯ ಸಮಾಜ ಸೇವೆ ಹಾಗೂ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಪ್ರತಿಷ್ಠಾನದಿಂದ ಈ ಪ್ರಶಸ್ತಿ ರೂಪಿಸಲಾಗಿದೆ. 

ಅದಕ್ಕಾಗಿ ₹1.5 ಕೋಟಿ ನಿಧಿ ಸ್ಥಾಪಿಸಲಾಗಿದೆ. ದೇಶದ ಯಾವುದೇ ಭಾಗದಲ್ಲಿರುವ 18 ವರ್ಷ ಪೂರೈಸಿರುವ ಭಾರತೀಯರು ತಾವು ರೂಪಿಸಿರುವ ಆವಿಷ್ಕಾರದ ಯೋಜನೆಗಳನ್ನು ಈ ಪ್ರಶಸ್ತಿಗೆ ಕಳುಹಿಸಬಹುದು. ಆರೋಗ್ಯ ಸೇವೆ, ಗ್ರಾಮೀಣಾಭಿವೃದ್ಧಿ, ನಿರ್ಗತಿಕರ ಸೇವೆ, ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ, ಶಿಕ್ಷಣ ಮತ್ತು ಕ್ರೀಡೆ ಹಾಗೂ ಸುಸ್ಥಿರತೆ ಈ ಆರು ವಿಭಾಗಗಳಿಂದ ಪ್ರಶಸ್ತಿಗೆ ಅರ್ಜಿ ಸ್ವೀಕರಿಸಲಾಗುವುದು. 

ಈ ಕ್ಷೇತ್ರದಲ್ಲಿ ಮಾಡಿರುವ ಆವಿಷ್ಕಾರಗಳ ಯೋಜನೆಯ ಸಂಪೂರ್ಣ ಮಾಹಿತಿ ಸಲ್ಲಿಸಬೇಕು. ಪ್ರಶಸ್ತಿಗೆ ಅ.15 ರಿಂದಲೇ ಅರ್ಜಿ ಆಹ್ವಾನಿಸಿದ್ದು, ಡಿ.31 ರವರೆಗೂ ಅರ್ಜಿ ಸ್ವೀಕರಿಸಲಾಗುವುದು. ಇದುವರೆಗೆ ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ತಿಳಿಸಿದರು. 

4 ಮಂದಿ ಪರಿಣತರ ಸಮಿತಿ: ನಾಲ್ಕು ಮಂದಿ ಪರಿಣತ ತೀರ್ಪುಗಾರರ ಸಮಿತಿ ಅರ್ಜಿಗಳನ್ನು ಪರಿಶೀಲಿಸಲಿದೆ. ಈ ಸಮಿತಿಯಲ್ಲಿ ತಾವೂ ಸೇರಿದಂತೆ
ಬೆಂಗಳೂರು ಐಐಎಂ ಮಾಜಿ ಡೀನ್ ಪ್ರೊ.ತ್ರಿಲೋಚನ್ ಶಾಸ್ತ್ರಿ, ವಿಜ್ಞಾನ ತಜ್ಞ ಅರವಿಂದ್ ಗುಪ್ತಾ, ಹೈದರಾಬಾದ್ ಐಐಟಿ ಪ್ರಾಧ್ಯಾಪಕ ಜಿವಿವಿ ಶರ್ಮಾ,
ಹೈದರಾಬಾದ್ ಐಐಎಂ ಅತಿಥಿ ಪ್ರಾಧ್ಯಾಪಕ ಅನಿಲ್ ಗುಪ್ತಾ ಇದ್ದಾರೆ ಎಂದು ಸುಧಾ ಮೂರ್ತಿ ಹೇಳಿದರು.

ಪ್ರಶಸ್ತಿಗೆ ಆಯ್ಕೆಯಾಗುವ ಯೋಜನೆಗಳಿಗೆ ಧನಸಹಾಯ ನೀಡಲಾಗುವುದು. ಯೋಜನೆಗೆ ಸಂಬಂಧಿಸಿದ ಹಕ್ಕುಸ್ವಾಮ್ಯ ಅವರಿಗೇ ಇರಲಿದೆ. ಫೆಬ್ರವರಿ ವೇಳೆಗೆ ಆಯ್ಕೆ ಪ್ರಕ್ರಿಯೆ ಮುಗಿಯಲಿದೆ. ಪ್ರತಿಭೆ ಇದ್ದರೂ ಪ್ರೋತ್ಸಾಹದ ಕೊರತೆಯಿಂದ ಸಾಧನೆ ಮಾಡಲು ಸಾಧ್ಯವಾಗದವರನ್ನು ಗುರುತಿಸಿ ಪ್ರೋತ್ಸಾಹಿಸುವುದು ಈ
ಪ್ರಶಸ್ತಿಯ ಉದ್ದೇಶವಾಗಿದೆ ಎಂದರು.

ಆರೋಹಣ ಸೋಷಿಯಲ್ ಇನ್ನೋವೇಷನ್ ಅವಾರ್ಡ್ ವಿಜೇತರಿಗೆ ಐಐಟಿ ಹೈದರಾಬಾದ್‌ನ ಕ್ಯಾಂಪಸ್‌ನಲ್ಲಿ 12 ವಾರಗಳ ಕಾಲ ವಸತಿ ಸಹಿತ ತರಬೇತಿ
ನೀಡಲಾಗುತ್ತದೆ. ಯೋಜನೆಗಳನ್ನು ಮತ್ತಷ್ಟು ಬಲಪಡಿಸಲು ಹಾಗೂ ಅಭಿವೃದ್ಧಿಗೊಳಿಸಲು ಈ ತರಬೇತಿ ನೆರವಾಗಲಿದೆ ಎಂದರು. ಹೆಚ್ಚಿನ
ಮಾಹಿತಿಗಾಗಿ www.infosys.com ಜಾಲತಾಣ ಸಂಪರ್ಕಿಸಬಹುದು.

ಪ್ರತಿಷ್ಠಾನದಿಂದ ಈ ವರ್ಷ ₹360 ಕೋಟಿ ಯೋಜನೆ
ಇನ್ಫೋಸಿಸ್ ಪ್ರತಿಷ್ಠಾನದಿಂದ ಪ್ರಸಕ್ತ ಸಾಲಿನಲ್ಲಿ ₹360 ಕೋಟಿ ಬಳಕೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಮೆಟ್ರೋ ನಿಲ್ದಾಣ, ಕಿದ್ವಾಯಿ ಆಸ್ಪತ್ರೆ ಯಲ್ಲಿ
ಧರ್ಮಶಾಲೆ, ಹೊರರೋಗಿ ವಿಭಾಗ ಕೇಂದ್ರ ನಿರ್ಮಾಣ, ಮುಂಬೈನಲ್ಲಿ ಟಾಟಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಧರ್ಮಶಾಲೆ, ಮೈಸೂರಿನಲ್ಲಿ ಹೆಬ್ಬಾಳ ಕೆರೆ ಪುನಶ್ಚೇತನ ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಸುಧಾ ಮೂರ್ತಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೆರೆಮರೆಯ ಗುರು: ವಾರ್ಷಿಕೋತ್ಸವದ ವೇಳೆ ಮಕ್ಕಳು ಡಾನ್ಸ್ ಸ್ಟೆಪ್ ತಪ್ಪಿಸಬಾರದು ಎಂದು ಟೀಚರ್‌ ಏನ್ ಮಾಡಿದ್ರು ನೋಡಿ
Bengaluru: 70 ವರ್ಷದ ಪತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ 67 ವರ್ಷದ ನಿವೃತ್ತ ಪ್ರಾಧ್ಯಾಪಕಿ!