ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಕಡೆ ಇಂದಿರಾ ಕ್ಯಾಂಟೀನ್: ಖಾದರ್

By Suvarna Web DeskFirst Published Oct 17, 2017, 2:55 PM IST
Highlights

ಮಂಗಳೂರಲ್ಲಿ 5, ಉಳ್ಳಾಲದಲ್ಲಿ 1, ತಾಲೂಕು ಕೇಂದ್ರಗಳಿಗೆ ತಲಾ 1, ಜನವರಿಯಲ್ಲಿ ಶುರು

ಮಂಗಳೂರು: ಅತಿ ಕಡಿಮೆ ಬೆಲೆಗೆ ಊಟ- ತಿಂಡಿ ಪೂರೈಕೆ ಮಾಡುವ ಇಂದಿರಾ ಕ್ಯಾಂಟೀನ್‌ನ್ನು ಎಲ್ಲ ಜಿಲ್ಲೆಗಳು, ತಾಲೂಕು ಕೇಂದ್ರಗಳಲ್ಲಿ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 10 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು. ಜನವರಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ 5, ಉಳ್ಳಾಲದಲ್ಲಿ 1, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕು ಕೇಂದ್ರಗಳಲ್ಲಿ ತಲಾ 1 ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪನೆ ಮಾಡಲಾಗುವುದು. ಜಾಗ ಗುರುತಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ತಿಳಿಸಲಾಗಿದೆ.

ಪೌರಾಡಳಿತ ಇಲಾಖೆ ಇದರ ನೋಡಲ್ ಇಲಾಖೆಯಾಗಿ ಕಾರ್ಯ ನಿರ್ವಹಿಸಲಿದೆ. ಎಲ್ಲ ಕಟ್ಟಡಗಳನ್ನು ಒಂದೇ ಶೈಲಿಯಲ್ಲಿ ರಚನೆ ಮಾಡಲಾಗುವುದು. ಜಿಲ್ಲೆಯ ಬಡ ವರ್ಗಗಳಿಗೆ ಇದು ಅತಿ ಸಹಕಾರಿಯಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

45 ಸಾವಿರದಿಂದ 1 ಲಕ್ಷದವರೆಗೆ ಜನಸಂಖ್ಯೆ ಇರುವಲ್ಲಿ 500 ಮಂದಿಗೆ ಊಟ- ತಿಂಡಿಯ ವ್ಯವಸ್ಥೆ ಮಾಡಿದರೆ, 25 ಸಾವಿರದಿಂದ 45 ಸಾವಿರವರೆಗೆ ಜನಸಂಖ್ಯೆ ಇರುವಲ್ಲಿ 300 ಮಂದಿಗೆ ಊಟ- ತಿಂಡಿಯ ವ್ಯವಸ್ಥೆ ಮಾಡಲಾಗುವುದು.

1 ಲಕ್ಷಕ್ಕಿಂತ ಜಾಸ್ತಿ ಜನಸಂಖ್ಯೆ ಇದ್ದರೆ ಪ್ರತ್ಯೇಕ ಕ್ಯಾಂಟೀನ್ ಸ್ಥಾಪಿಸಲಾಗುವುದು. 2ಕ್ಕಿಂತ ಹೆಚ್ಚು ಕ್ಯಾಂಟೀನ್ ಒಂದು ಪ್ರದೇಶದಲ್ಲಿದ್ದರೆ ಅಲ್ಲಿ ಪ್ರತ್ಯೇಕ ಅಡುಗೆ ಕೋಣೆ ಇರಲಿದೆ. ಉಳಿದೆಡೆಗಳಲ್ಲಿ ಕ್ಯಾಂಟೀನ್‌ಗಳಲ್ಲೇ ಅಡುಗೆ ಕೋಣೆ ಇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಸಾಮಾನ್ಯವಾಗಿ ತಿನ್ನುವ ಆಹಾರವನ್ನೇ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಇಂದಿರಾ ಕ್ಯಾಂಟೀನ್‌ಗೆ ಜಿಎಸ್‌ಟಿ ಅನ್ವಯಿಸುವ ವಿಚಾರವನ್ನು ಸರ್ಕಾರವೇ ನೋಡಿಕೊಳ್ಳುತ್ತದೆ. ಇದರಿಂದ ಜನರಿಗೇನೂ ಹೊರೆಯಾಗುವುದಿಲ್ಲ. ಮುಖ್ಯಮಂತ್ರಿಯ ವಿಶೇಷ ಅನುದಾನದಲ್ಲೇ ಈ ಎಲ್ಲ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸಲಿವೆ ಎಂದರು.

ಬಿಜೆಪಿ ಪ್ರತಿಭಟನೆಗೆ ಖಂಡನೆ: ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಸಂಘಟನಾ ಯಶಸ್ಸನ್ನು ಸಹಿಸಲಾಗದೆ ಬಿಜೆಪಿಯವರು ಗೊಂದಲಕ್ಕೆ ಒಳಪಟ್ಟು ಅವರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ವೇಣುಗೋಪಾಲ್ ಅವರ ಕಾರ್ಯವೈಖರಿಯ ಕುರಿತು ಬಿಜೆಪಿಯವರು ಎಷ್ಟು ಗಾಬರಿಗೊಂಡಿದ್ದಾರೆ ಎನ್ನುವುದು ಇದರಿಂದ ತಿಳಿದುಬರುತ್ತದೆ ಎಂದು ಖಾದರ್ ಟೀಕಿಸಿದರು. ಪ್ರತಿಪಕ್ಷಗಳು ಕೆಲಸ ಮಾಡಿ ಚುನಾವಣೆಗೆ ಹೋಗಲಿ. ಅದು ಬಿಟ್ಟು ಅವರಿಗೆ ಸಂಬಂಧಿಸದ ವಿಚಾರದಲ್ಲಿ ಮೂಗು ತೂರಿಸಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ಗಾಂಜಾ ಚಟುವಟಿಕೆ: ಉಳ್ಳಾಲದಲ್ಲಿ ಮಾದಕ ದ್ರವ್ಯ ಚಟುವಟಿಕೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಗಾಂಜಾ ಪೂರೈಕೆಯಲ್ಲಿ ತೊಡಗಿಸಿಕೊಂಡಿರುವ ತಂಡಗಳನ್ನು ಮಟ್ಟ ಹಾಕುವುದು ಪೊಲೀಸ್ ಇಲಾಖೆಯ ಕೆಲಸ. ಇಲಾಖೆ ಸಮರ್ಪಕವಾಗಿ ತನಿಖೆ ನಡೆಸಬೇಕು. ಈ ಕುರಿತು ಸರ್ಕಾರ

ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ನಿರಪರಾಧಿಗಳಿಗೆ ತೊಂದರೆಯಾಗಬಾರದಂತೆ ನೋಡಿಕೊಳ್ಳಬೇಕಾಗುತ್ತದೆ. ಎಲ್ಲರೂ ಸೇರಿ ಇದರ ನಿರ್ಮೂಲನೆಗೆ ಶ್ರಮಿಸಬೇಕೇ ಹೊರತು ರಾಜಕೀಯ ಮಾಡಬಾರದು ಎಂದು ಹೇಳಿದರು.

ಮಂಗಳೂರಿನಲ್ಲಿ ಶೈಕ್ಷಣಿಕ ಕಾಲೇಜುಗಳು ಜಾಸ್ತಿ ಇರುವುದರಿಂದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿರುವ ಸಾಧ್ಯತೆಯಿದೆ. ಆದರೆ ವ್ಯಾಪಕವಾಗಿ ನಡೆಯುತ್ತಿಲ್ಲ. ಡ್ರಗ್ಸ್‌ಗೆ ದಾಸರಾದವರು ಕಂಡುಬಂದರೆ ಅವರಿಗೆ ಸರಿಯಾದ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ನೀಡುವಲ್ಲಿ ಸಾರ್ವಜನಿಕರೂ ಮುಖ್ಯ ಪಾತ್ರ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಪಡಿತರ ಚೀಟಿಗೆ ಸಲ್ಲಿಸಲಾದ ಒಟ್ಟು 25 ಸಾವಿರ ಅರ್ಜಿಗಳಲ್ಲಿ 19 ಸಾವಿರ ಅರ್ಜಿಗಳು ಪರಿಶೀಲನೆ ಹಂತದಲ್ಲಿದ್ದು, ೫,೫೦೦ಕ್ಕೂ ಅಧಿಕ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಅನಿಲ ಭಾಗ್ಯ ಯೋಜನೆ ಡಿಸೆಂಬರ್ ತಿಂಗಳ ವೇಳೆಗೆ ಆರಂಭವಾಗಲಿದೆ ಎಂದು ಖಾದರ್ ತಿಳಿಸಿದರು.

ಕೋಮುವಾದವೆಂಬ ಅಫೀಮು: ಕೊಲೆಗಳು ನಡೆಯಲು ಗಾಂಜಾ ಇತ್ಯಾದಿ ಅಮಲು ಪದಾರ್ಥಗಳು ಮಾತ್ರ ಕಾರಣವಲ್ಲ, ಬೇರೆ ಬೇರೆ ಕಾರಣಗಳಿಂದ ನಡೆಯುತ್ತವೆ. ಕೋಮುವಾದದ ಅಮಲಿನಿಂದಲೂ ನಡೆಯುತ್ತವೆ. ಕೋಮುವಾದ ಒಂದು ರೀತಿಯಲ್ಲಿ ಅಫೀಮು ಇದ್ದಂತೆ ಎಂದು ಖಾದರ್ ವ್ಯಾಖ್ಯಾನಿಸಿದರು.

 

click me!