
ನವದೆಹಲಿ: ಮುಂಗಡವಾಗಿ ಕಾಯ್ದಿರಿಸಿದ ರೈಲ್ವೇ ಟಿಕೆಟನ್ನು ಇನ್ಮುಂದೆ ವರ್ಗಾಯಿಸಬಹುದಾದ ಸೇವೆಯನ್ನು ಭಾರತೀಯ ರೈಲ್ವೇ ಆರಂಭಿಸಿದೆ. ಈ ಹೊಸ ಸೌಲಭ್ಯದಲ್ಲಿ ಪ್ರಯಾಣಿಕರ ಹೆಸರನ್ನು ಬದಲಾಯಿಸಬಹುದಾಗಿದೆ. ಕೇವಲ ಒಂದು ಬಾರಿ ಪ್ರಯಾಣಿಕನ ಹೆಸರನ್ನು ಬದಲಾಯಿಸಬಹುದಾಗಿದ್ದು, ಈ ಸೌಲಭ್ಯ ಸದ್ಯಕ್ಕೆ ಕೇವಲ ಸರ್ಕಾರಿ ನೌಕರು, ಮದುವೆ ಪಕ್ಷದವರು, ವಿದ್ಯಾರ್ಥಿಗಳು, ಕುಟುಂಬ ಸದಸ್ಯರು ಹಾಗೂ ಎನ್’ಸಿಸಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.
ಈ ರೀತಿ ಟಿಕೆಟನ್ನು ವರ್ಗಾಯಿಸಲು ಪ್ರಮುಖ ಸ್ಟೇಶನ್’ಗಳ ಚೀಫ್ ರಿಸರ್ವೇಶನ್ ಸೂಪರ್’ವೈಸರ್’ಗಳಿಗೆ ಅಧಿಕಾರ ನೀಡಲಾಗಿದೆ, ಸರ್ಕಾರಿ ನೌಕರರು ಈ ಸೌಲಭ್ಯ ಪಡೆಯಲು ರೈಲು ಹೊರಡುವ 24 ಗಂಟೆಗಳ ಮುಂಚಿತವಾಗಿ ಕೈಬರಹವಿರುವ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅದೇ ರೀತಿ, ಪ್ರಯಾಣಿಕರು ತಮ್ಮ ಟಿಕೆಟನ್ನು ಕುಟುಂಬಸ್ಥರಿಗೂ (ತಂದೆ, ತಾಯಿ, ಸಹೋದರ, ಸಹೋದರಿ, ಪುತ್ರ, ಪುತ್ರಿ, ಪತಿ ಅಥವಾ ಪತ್ನಿ) ವರ್ಗಾಯಿಸಬಹುದಾಗಿದೆ.
ವಿದ್ಯಾರ್ಥಿಗಳ ಟಿಕೆಟ್ ಕೂಡಾ ವರ್ಗಾಯಿಸಬಹುದಾಗಿದ್ದು, ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರು ರೈಲು ಹೊರಡುವ 48 ಗಂಟೆಗಳ ಮುಂಚೆ ಅರ್ಜಿಯನ್ನು ಸಲ್ಲಿಸಬೇಕು. ಇನ್ನೋರ್ವ ವಿದ್ಯಾರ್ಥಿಯು ಕೂಡಾ ಅದೇ ಸಂಸ್ಥೆಯ ವಿದ್ಯಾರ್ಥಿಯಾಗಿರಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ.
ಮದುವೆ ದಿಬ್ಬಣ ಹೊರಟವರು ಕೂಡಾ ಹೆಸರನ್ನು ಬದಲಾಯಿಸಬಹುದಾಗಿದ್ದು, 48 ಗಂಟೆ ಮುಂಚೆ ಅರ್ಜಿ ನೀಡಬೇಕಾಗುತ್ತದೆ. ಎನ್’ಸಿಸಿ ಕೇಡರ್’ಗಳು ತಮ್ಮ ಟಿಕೆಟನ್ನು ವರ್ಗಾಯಿಸಬೇಕಾದರೆ, ಸಂಬಂಧಪಟ್ಟ ಅಧಿಕಾರಿಯು 24 ಗಂಟೆ ಮುಂಚೆ ಅರ್ಜಿಯನ್ನು ಸಲ್ಲಿಸಬೇಕೆಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.