
ಬೆಂಗಳೂರು(ಆ. 10): ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಇದೆ ಎಂಬ ಕೂಗುಗಳು ಆಗಾಗ ಕೇಳಿಬಂದು ದೊಡ್ಡ ಚರ್ಚೆಗಳೇ ನಡೆದುಹೋಗಿವೆ. ಈಗ ನಿರ್ಗಮಿತ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕೂಡ ಪರೋಕ್ಷವಾಗಿ ಆ ಕೂಗಿಗೆ ಧ್ವನಿಗೂಡಿಸಿದ್ದಾರೆ. ದೇಶದಲ್ಲಿ ಮುಸ್ಲಿಮರು ಭಯ ಮತ್ತು ಅಭದ್ರತೆಯಿಂದ ಬಳಲುತ್ತಿದ್ದಾರೆ ಎಂದು ಅನ್ಸಾರಿ ಕಳವಳ ವ್ಯಕ್ತಪಡಿಸಿದ್ದಾರೆ.
ಉಪರಾಷ್ಟ್ರಪತಿಯಾಗಿ ಹಮೀದ್ ಅನ್ಸಾರಿಯವರ ಕೊನೆಯ ದಿನವಾದ ಇಂದು ರಾಜ್ಯಸಭಾ ಟಿವಿಯಲ್ಲಿ ಅವರ ಸಂದರ್ಶನ ಪ್ರಸಾರವಾಗಿದೆ. ಅದರಲ್ಲಿ ತಮ್ಮ ಕಳವಳವನ್ನು ಹಂಚಿಕೊಂಡಿರುವ ಅನ್ಸಾರಿ, ಒಬ್ಬ ವ್ಯಕ್ತಿಯ ಭಾರತೀಯ ನಿಷ್ಠೆಯನ್ನು ಪ್ರಶ್ನಿಸುವ ಮಟ್ಟಕ್ಕೆ ಹೋಗುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ ಎಂದು ವಿಷಾದಿಸಿದ್ದಾರೆ.
"ಭಾರತೀಯ ಮೌಲ್ಯಗಳು ಕುಸಿಯುತ್ತಿವೆ. ವಿವಿಧ ಸ್ಥಳಗಳಲ್ಲಿ ವಿವಿಧ ಸ್ತರಗಳಲ್ಲಿ ಕಾನೂನು ಪರಿಪಾಲನೆ ಮಾಡುವ ಅಧಿಕಾರಿಗಳ ಸಾಮರ್ಥ್ಯವೂ ಕುಸಿಯುತ್ತಿದೆ," ಎಂದು ಹಮೀದ್ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.
"ದೇಶದ ಮುಸ್ಲಿಮರಲ್ಲಿ ಭಯ ಮತ್ತು ಅಭದ್ರತೆಯ ಭಾವನೆ ಇಣುಕುತ್ತಿದೆ. ದೇಶದೆಲ್ಲೆಡೆ ನನಗೆ ಕೇಳಿಬಂದ ಸಂಗತಿ. ಉತ್ತರ ಭಾರತದಿಂದ ಹೆಚ್ಚಾಗಿ ಕೇಳಿದ್ದೇನೆ," ಎಂದು ಅನ್ಸಾರಿ ಹೇಳಿದ್ದಾರೆ.
ಇಂಥ ಸ್ಥಿತಿಯಲ್ಲಿ ಮುಸ್ಲಿಮರಿಗೆ ಒಂದಷ್ಟು ಟಿಪ್ಸ್ ಕೊಟ್ಟಿರುವ ನಿರ್ಗಮಿತ ಉಪರಾಷ್ಟ್ರಪತಿಗಳು, ಅಭಿವೃದ್ಧಿ, ಶಿಕ್ಷಣ, ಸ್ಪರ್ಧಾತ್ಮಕತೆಯನ್ನು ಅಳವಡಿಸಿಕೊಳ್ಳುವಂತೆ ತಮ್ಮ ಧರ್ಮಬಾಂಧವರಿಗೆ ಕಿವಿಮಾತು ಹೇಳಿದ್ದಾರೆ. ಅಲ್ಲದೇ, ತ್ರಿವಳಿ ತಲಾಖ್'ನಂತಹ ಆಚರಣೆಯಿಂದ ಮುಕ್ತರಾಗುವಂತೆಯೂ ಕರೆ ನೀಡಿದ್ದಾರೆ.
ಇದೇ ವೇಳೆ, ನೂತನ ಉಪರಾಷ್ಟ್ರಪತಿಯಾಗಲಿರುವ ವೆಂಕಯ್ಯ ನಾಯ್ಡು ಅವರಿಗೆ ಹಮೀದ್ ಅನ್ಸಾರಿ ಶುಭಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.