
ನವದೆಹಲಿ(ಮೇ 18): ಬೇಹುಗಾರಿಕೆ ಪ್ರಕರಣ ಸಂಬಂಧ ಕುಲಭೂಷಣ್'ಗೆ ಪಾಕಿಸ್ತಾನ ನೀಡಿದ ಗಲ್ಲುಶಿಕ್ಷೆ ತೀರ್ಪಿಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿದೆ. ಇದು ಭಾರತಕ್ಕೆ ಸಿಕ್ಕ ತಾತ್ಕಾಲಿಕ ಗೆಲುವಾಗಿದೆ. ಈ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡುವವರೆಗೂ ಕುಲಭೂಷಣ್'ಗೆ ಗಲ್ಲು ಶಿಕ್ಷೆ ವಿಧಿಸಬಾರದೆಂದು ಪಾಕಿಸ್ತಾನಕ್ಕೆ ಆದೇಶಿಸಿದೆ. ಭಾರತದ ಪರ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. ಪಾಕಿಸ್ತಾನದ ಪರ ಮೊಝಮ್ ಅಹ್ಮದ್ ಖಾನ್ ವಕಾಲತ್ತು ವಹಿಸಿದ್ದರು.
1) ಜಾಧವ್'ಗೆ ನೀಡಿರುವ ಗಲ್ಲುಶಿಕ್ಷೆ ಅಕ್ರಮ ಎಂದು ಘೋಷಿಸಿ
2) ಗಲ್ಲು ಶಿಕ್ಷೆಯ ತೀರ್ಪು ಅಂತಾರಾಷ್ಟ್ರೀಯ ಕಾನೂನು ಮತ್ತು ಒಪ್ಪಂದ ಹಕ್ಕುಗಳ ಉಲ್ಲಂಘನೆಯಾಗಿದೆ
3) ಕುಲಭೂಷಣ್'ಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದರೆ ವಿಯೆನ್ನಾ ಒಪ್ಪಂದದ ನಿಯಮ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸದಂತಾಗುತ್ತದೆ. ಹಾಗೆ ಮಾಡದಂತೆ ಪಾಕಿಸ್ತಾನವನ್ನು ತಡೆಯಿರಿ.
4) ಪಾಕಿಸ್ತಾನ ತನ್ನ ನಿರ್ಧಾರವನ್ನು ಹಿಂಪಡೆಯದೇ ಇದ್ದ ಪಕ್ಷದಲ್ಲಿ, ಕುಲಭೂಷಣ್ ಅವರನ್ನು ಕೂಡಲೇ ಬಿಡುಗಡೆ ಮಾಡಲು ನಿರ್ದೇಶಿಸಿ.
5) ಈ ಪ್ರಕರಣವು ವಿಯೆನ್ನಾದ ರಾಯಭಾರ ಸಂಬಂಧ ನಿಯಮಗಳ ಉಲ್ಲಂಘನೆಯಾಗಿದೆ.
ಪಾಕಿಸ್ತಾನದ ವಾದವೇನಿತ್ತು?
ವಿಯೆನ್ನಾ ರಾಯಭಾರ ನಿಯಮಗಳಿಗಿಂತ ಮುಖ್ಯವಾಗಿ ತಾನು ದ್ವಿಪಕ್ಷೀಯ ಒಪ್ಪಂದದ ಅಂಶದ ಆಧಾರದ ಮೇಲೆ ಕುಲಭೂಷಣ್'ರ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂಬುದು ಪಾಕಿಸ್ತಾನದ ಪ್ರಮುಖ ಆರೋಪವಾಗಿತ್ತು.
ಏನಿದು ಪ್ರಕರಣ?
ಭಾರತದ ಗೂಢಚಾರಿ ಕುಲಭೂಷಣ್ ಅವರನ್ನು ಬಲೂಚಿಸ್ತಾನದಲ್ಲಿ ಬಂಧಿಸಿದ್ದಾಗಿ ಪಾಕಿಸ್ತಾನ ಸೇನಾಪಡೆಯು ಇದೇ ಮಾರ್ಚ್'ನಲ್ಲಿ ಘೋಷಿಸಿತ್ತು. ಕುಲಭೂಷಣ್ ತಾನು ಹಾಲಿ ಸೇವೆಯಲ್ಲಿರುವ ಭಾರತೀಯ ನೌಕಾಪಡೆ ಅಧಿಕಾರಿಯಾಗಿದ್ದೇನೆಂದು ತಪ್ಪೊಪ್ಪಿಗೆ ಕೊಟ್ಟ ಹೇಳಿಕೆಯನ್ನು ರಿಲೀಸ್ ಮಾಡಲಾಯಿತು. ಅಲ್ಲಿಯ ಮಿಲಿಟರಿ ಕೋರ್ಟ್'ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನಂತರ ಕುಲಭೂಷಣ್ ತಪ್ಪಿತಸ್ಥರೆಂದು ಸಾಬೀತು ಮಾಡಲಾಯಿತು. ಏಪ್ರಿಲ್ 10ರಂದು ಪಾಕ್ ನ್ಯಾಯಾಲಯವು ಕುಲಭೂಷಣ್'ಗೆ ಗಲ್ಲು ಶಿಕ್ಷೆ ವಿಧಿಸಿತು.
ಆದರೆ, ಭಾರತ ಹೇಳುವ ಪ್ರಕಾರ ಕುಲಭೂಷಣ್ ಜಾಧವ್ ಅವರು ನಿವೃತ್ತ ನೌಕಾಪಡೆ ಅಧಿಕಾರಿಯಾಗಿದ್ದಾರೆ. ಇರಾನ್'ಗೆ ಯಾವುದೋ ವ್ಯವಹಾರಕ್ಕೆ ಹೋಗಿದ್ದ ಜಾಧವ್'ರನ್ನು ಪಾಕಿಸ್ತಾನೀಯರು ಕಿಡ್ನಾಪ್ ಮಾಡಿದ್ದಾರೆ ಎಂಬುದು ಭಾರತದ ವಾದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.