ಪಾಕ್ ಪಿಎಂ ಇಮ್ರಾನ್ ಖಾನ್ ಗೆ ಭಾರತ ಸವಾಲು

By Web DeskFirst Published Mar 10, 2019, 8:55 AM IST
Highlights

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಾರತ ತಿರುಗೇಟು ನೀಡಿದೆ. ಯಾವುದೇ ಭೀತಿ ಇಲ್ಲದೇ ಪಾಕ್‌ನಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರ ವಿರುದ್ಧ ನವ ಆಲೋಚನೆಯೊಂದಿಗೆ ನವ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದೆ.

ನವದೆಹಲಿ :  ತಮ್ಮ ನಾಯಕತ್ವದಲ್ಲಿ ‘ನವ ಪಾಕಿಸ್ತಾನ’ (ಹೊಸ ಪಾಕಿಸ್ತಾನ) ರೂಪುಗೊಳ್ಳುತ್ತಿದೆ ಎಂದು ಪದೇ ಪದೇ ಬಡಾಯಿ ಕೊಚ್ಚಿಕೊಳ್ಳುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಾರತ ತಿರುಗೇಟು ನೀಡಿದೆ. ಪಾಕಿಸ್ತಾನ ತಾನು ಹೇಳಿಕೊಳ್ಳುವಂತೆ ನವ ಪಾಕಿಸ್ತಾನವೇ ಆಗಿದ್ದರೆ, ಯಾವುದೇ ಭೀತಿ ಇಲ್ಲದೇ ಪಾಕ್‌ನಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರ ವಿರುದ್ಧ ನವ ಆಲೋಚನೆಯೊಂದಿಗೆ ನವ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದೆ.

ಇದೇ ವೇಳೆ, ಪಾಕಿಸ್ತಾನದ ಬಾಲಾಕೋಟ್‌ ಮೇಲೆ ಭಾರತೀಯ ವಾಯುಪಡೆ ನಡೆಸಿದ ಮಿಲಿಟರಿಯೇತರ ದಾಳಿಯ ಉದ್ದೇಶ ಈಡೇರಿದೆ ಎಂದೂ ಭಾರತ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌, ‘ಭಯೋತ್ಪಾದಕರ ಮೂಲಸೌಕರ್ಯದ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದರ ಮೇಲೆ ಪಾಕಿಸ್ತಾನವನ್ನು ಅಳೆಯಲಾಗುತ್ತದೆ. ಅದು ಬಿಟ್ಟು ಕೇವಲ ಮಾತುಗಳಿಂದಲ್ಲ. ಇದು ಹೊಸ ಪಾಕಿಸ್ತಾನವೇ ಆಗಿದ್ದರೆ ಹೊಸ ಕ್ರಮಗಳನ್ನು ಉಗ್ರರ ವಿರುದ್ಧ ಜರುಗಿಸಬೇಕು’ ಎಂದು ಹೇಳಿದರು.

‘ತನ್ನ ನಿಯಂತ್ರಣದಲ್ಲಿರುವ ಭೂಭಾಗವನ್ನು ಭಯೋತ್ಪಾದಕರು ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು 2004ರಲ್ಲಿ ಪಾಕಿಸ್ತಾನ ಅಧ್ಯಕ್ಷರು ಸಾರ್ವಜನಿಕವಾಗಿ ಬದ್ಧತೆ ವ್ಯಕ್ತಪಡಿಸಿದ್ದರು. ಆದರೆ ಇವತ್ತಿಗೂ ಪಾಕಿಸ್ತಾನದಲ್ಲಿ ಯಾವುದೇ ತೊಂದರೆ ಇಲ್ಲದೇ ಕಾರ್ಯನಿರ್ವಹಿಸುತ್ತಿರುವ ಜೈಷ್‌ ಎ ಮೊಹಮ್ಮದ್‌ ಹಾಗೂ ಇನ್ನಿತರೆ ಉಗ್ರ ಸಂಘಟನೆಗಳ ವಿರುದ್ಧ ವಿಶ್ವಾಸಾರ್ಹ ಕ್ರಮ ಕೈಗೊಳ್ಳಲು ಆ ದೇಶ ವಿಫಲವಾಗಿದೆ’ ಎಂದು ದೂರಿದರು.

click me!