ಅ.2 ರಿಂದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ?| ಪ್ಲಾಸ್ಟಿಕ್ ಚೀಲ, ಕಪ್, ಪ್ಲೇಟ್, ಸ್ಟ್ರಾ ಬಾಟಲ್‌ಗೆ ನಿಷೇಧ
ನವದೆಹಲಿ[ಆ.29]: 2022 ರ ವೇಳೆಗೆ ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಪಣತೊಟ್ಟಿರುವ ಕೇಂದ್ರ ಸರ್ಕಾರ, ಇದೇ ಅ.2 ರಿಂದ ಏಕ ಬಳಕೆ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿದೆ ಎನ್ನಲಾಗಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಜನ್ಮ ಜಯಂತಿಯಂದು ಪ್ಲಾಸ್ಟಿಕ್ ಚೀಲ, ಕಪ್, ಪ್ಲೇಟ್, ಬಾಟಲ್, ಸ್ಟ್ರಾ ಹಾಗೂ ಸ್ಯಾಶೆಗಳ ತಯಾರಿ, ಸಾಗಣೆ, ರಫ್ತು, ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣ ನಿಷೇಧ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ಮೂಲಗಳು ತಿಳಿಸಿವೆ. ವಸತಿ ಮತ್ತು ಪರಿಸರ ಇಲಾಖೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದು, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಈ ನಿಟ್ಟಿನಲ್ಲಿ ಯೋಚಿಸಿದೆ ಎಂದು ಹೇಳಿದ್ದಾರೆ.
ಅಲ್ಲದೇ ಆರು ತಿಂಗಳ ಬಳಿಕೆ ಪ್ಲಾಸ್ಟಿಕ್ ಬಳಕೆಗೆ ಭಾರೀ ದಂಡ ವಿಧಿಸುವ ಪ್ರಸ್ತಾಪ ಕೂಡ ಸರ್ಕಾರದ ಮುಂದಿದೆ ಎಂದು ಹೇಳಲಾಗಿದೆ. ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಪ್ರಧಾನಿ ಮೋದಿ ಸ್ವತಂತ್ರೋತ್ಸವದ ಭಾಷಣದಲ್ಲಿ ಸುಳಿವು ನೀಡಿದ್ದರು.