
ನವದೆಹಲಿ(ಅ. 04): ನೆರೆಯ ಬಾಂಗ್ಲಾದೇಶದ ಅಭಿವೃದ್ಧಿಗಾಗಿ ಭಾರತ ಸರಕಾರ 4.5 ಬಿಲಿಯನ್ ಡಾಲರ್(ಸುಮಾರು 30 ಸಾವಿರ ರೂಪಾಯಿ) ಹಣವನ್ನು ಸಾಲವಾಗಿ ನೀಡಿದೆ. ಬಾಂಗ್ಲಾದೇಶದ ಮೂಲಭೂತ ಸೌಕರ್ಯ, ಸಾಮಾಜಿಕ ವಲಯದ ಅಭಿವೃದ್ಧಿಗಾಗಿ ಈ ಸಾಲ ಕೊಟ್ಟಿರುವುದಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಭಾರತ ಮತ್ತು ಬಾಂಗ್ಲಾದ ವಿತ್ತ ಸಚಿವರು ಈ ಸಂಬಂಧ ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಇದು ಬಾಂಗ್ಲಾದೇಶಕ್ಕೆ ಭಾರತ ಕೊಡುತ್ತಿರುವ ಮೂರನೇ ಕಂತಿನ ಸಾಲವಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಬಾಂಗ್ಲಾ ಪ್ರಧಾನಿ ಬಂದಾಗಲೇ ಈ ಸಾಲದ ಘೋಷಣೆಯಾಗಿತ್ತು.
ಭಾರತ ನೀಡಿರುವ ಈ ಮೂರನೇ ಕಂತಿನ ಸಾಲದ ಹಣವನ್ನು ಬಾಂಗ್ಲಾದೇಶದಲ್ಲಿ 17 ಪ್ರಮುಖ ಯೋಜನೆಗಳಿಗೆ ಬಳಸುವ ಉದ್ದೇಶವಿದೆ. ವಿದ್ಯುತ್, ಸಾರಿಗೆ, ರಸ್ತೆ, ಹಡಗು, ಬಂದರು ಮೊದಲಾದ ಮೂಲಸೌಕರ್ಯದ ಅಭಿವೃದ್ಧಿಗೆ ಹಣದ ವಿನಿಯೋಗವಾಗಲಿದೆ. ಆದರೆ ಈ ಯೋಜನೆಯ ಕಾಮಗಾರಿಗಳಲ್ಲಿ ಬಾಂಗ್ಲಾದೇಶವು ಶೇ.65ರಷ್ಟು ಸೇವೆ ಮತ್ತು ಸಾಮಗ್ರಿಗಳನ್ನು ಭಾರತೀಯ ಮಾರುಕಟ್ಟೆಯಿಂದಲೇ ಖರೀದಿಸಬೇಕು ಎಂಬುದು ಸಾಲದ ಒಪ್ಪಂದದಲ್ಲಿರುವ ಪ್ರಮುಖ ಷರತ್ತಾಗಿದೆ.
ಅಷ್ಟೇ ಅಲ್ಲದೇ, ಈ ಸಾಲವನ್ನು ಬಾಂಗ್ಲಾದೇಶವು 20-25 ವರ್ಷಗಳಲ್ಲಿ ತೀರಿಸಬೇಕಿದೆ. ಪ್ರತೀ ವರ್ಷ ಶೇ.1ರಷ್ಟು ಬಡ್ಡಿದರ ಅನ್ವಯವಾಗುತ್ತದೆ.
ಭಾರತ ಮತ್ತು ಬಾಂಗ್ಲಾದೇಶ ನಡುವೆ ಆರ್ಥಿಕ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಉತ್ತಮಗೊಂಡಿವೆ. 2010 ಮತ್ತು 2016ರಲ್ಲಿ ಬಾಂಗ್ಲಾಗೆ ಭಾರತ ಎರಡು ಕಂತುಗಳ ಸಾಲ ಮಂಜೂರು ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.