
ನವದೆಹಲಿ (ಜು. 13): ಕಾಶ್ಮೀರ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ರಚನಾತ್ಮಕ ಪಾತ್ರ ವಹಿಸುವ ಚೀನಾದ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿದೆ. ಕಾಶ್ಮೀರ ಬಿಕ್ಕಟ್ಟಿಗೆ ಸಂಬಂಧಿಸಿ ತಾನು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಸಿದ್ಧವೆಂದು ಭಾರತ ಇಂದು ಹೇಳಿದೆ.
ನಮ್ಮ ನಿಲುವು ಸ್ಪಷ್ಟವಾಗಿದೆ. ಭಯೋತ್ಪಾದನೆಗೆ ಒಂದು ದೇಶದಿಂದ ಸಿಗುತ್ತಿರುವ ಕುಮ್ಮಕ್ಕಿನಿಂದಾಗಿ, ಇಡೀ ದೇಶ, ಪ್ರದೇಶ ಮತ್ತು ಜಾಗತಿಕ ಶಾಂತಿ ಹಾಗೂ ಸ್ಥಿರತೆಗೆ ಬೆದರಿಕೆ ಇರುವುದು ನಿಮಗೆ ತಿಳಿದಿರುವ ವಿಚಾರ. ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಭಾರತ ಸಿದ್ಧ, ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ಗೋಪಾಲ್ ಬಾಗ್ಲೆ ಹೇಳಿದ್ದಾರೆ.
ಕಾಶ್ಮೀರ ವಿವಾದವು ಕೇವಲ ಎರಡು ದೇಶಗಳ ಮೇಲಷ್ಟೆ ದುಷ್ಪರಿಣಾಮ ಬೀರದೇ ಇಡೀಯ ಪ್ರದೇಶದ ಶಾಂತಿ ಹಾಗೂ ಸ್ಥಿರತೆ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಚೀನಾ ಹೇಳಿತ್ತು. ಕಾಶ್ಮೀರ ವಿವಾದ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ತಾನು ರಚನಾತ್ಮಕ ಪಾತ್ರ ವಹಿಸುವುದಾಗಿ ಹೇಳಿಕೊಂಡಿತ್ತು.
ಕಾಶ್ಮೀರ ಬಿಕ್ಕಟ್ಟು ಹಾಗೂ ಸಿಕ್ಕಿಂ ವಿಚಾರವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆಯೆಂದು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿವೆ. ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆ ಪ್ರತಿಪಕ್ಷಗಳೊಂದಿಗೆ ಸುಶ್ಮಾ ಸ್ವರಾಜ್ ಶುಕ್ರವಾರ ಸಭೆ ನಡೆಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.