ಆಯ್ತು ಬಂದ್ಬಿಡಿ: ಇಮ್ರಾನ್ ಪತ್ರಕ್ಕೆ ಮೋದಿ ಪ್ರತ್ಯುತ್ತರ!

By Web DeskFirst Published Sep 20, 2018, 6:48 PM IST
Highlights

ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ! ಪ್ರಧಾನಿಗೆ ಪತ್ರ ಬರೆದಿದ್ದ ಇಮ್ರಾನ್ ಖಾನ್! ಪಾಕ್ ಪ್ರಧಾನಿ ಪತ್ರಕ್ಕೆ ಭಾರತದ ಸಕಾರಾತ್ಮಕ ಪ್ರತಿಕ್ರಿಯೆ! ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಂದರ್ಭದಲ್ಲಿ ಮಾತುಕತೆ 

ನವದೆಹಲಿ(ಸೆ.20): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಸಂಬಂಧ ಕುರಿತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮನವಿಗೆ ಮನ್ನಣೆ ನೀಡಿರುವ ಭಾರತ, ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಂದರ್ಭದಲ್ಲಿ ಮಾತುಕತೆ ನಡೆಸುವುದಾಗಿ ಹೇಳಿದೆ. 

ಉಭಯ ರಾಷ್ಟ್ರಗಳ ಮಾತುಕತೆ ಬಗ್ಗೆ ಹೇಳಿಕೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಪಾಕ್ ಮನವಿಯ ಮೇರೆಗೆ ಭಾರತ ಮಾತುಕತೆಗೆ ಅವಕಾಶ ಕಲ್ಪಿಸಲಿದೆ. ಉಭಯ ದೇಶಗಳ ವಿದೇಶಾಂಗ ಸಚಿವರು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದೆ.

ಆದರೆ ಇದರಿಂದ ಪಾಕಿಸ್ತಾನ ಬಗೆಗಿನ ಭಾರತದ ದೃಷ್ಟಿಕೋನ ಮತ್ತು ಪಾಕಿಸ್ತಾನದೊಂದಿಗಿನ ಭಾರತದ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಎಂದೂ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. 

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ನ್ಯೂಯಾರ್ಕ್‌ನಲ್ಲಿ ಸೂಕ್ತ ಸಂದರ್ಭ ಮತ್ತು ಸಮಯ ನೋಡಿಕೊಂಡು ಪಾಕ್ ಜತೆ ಭಾರತ ಮಾತುಕತೆ ನಡೆಸಲಿದೆ ಎಂದು ಹೇಳಿದ್ದಾರೆ. 

ಆದರೆ ಈ ಭೇಟಿ ಕುರಿತು ಇದುವರೆಗೂ ಯಾವುದೇ ಪ್ರಮುಖ ಕಾರ್ಯಸೂಚಿಯನ್ನು ನಿಗದಿಪಡಿಸಿಲ್ಲ ಎಂದು ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಪಾಕ್ ಕೋರಿಕೆಯಂತೆ ಅಲ್ಲಿ ಮಾತುಕತೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. 

ಪಾಕ್‌ ಪ್ರಧಾನಿ ಇಮ್ರಾನ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ಪತ್ರದಲ್ಲಿ, ಭಾರತದ ಜೊತೆ ಪಾಕಿಸ್ತಾನ ಮಾತುಕತೆಗೆ ಆಸಕ್ತಿ ವ್ಯಕ್ತಪಡಿಸುತ್ತಿದೆ ಎಂದು ತಿಳಿಸಿದ್ದರು.

click me!